ಪಟನಾ: ಅಕ್ರಮ ಸಂಬಂಧ ಇರಿಸಿಕೊಂಡಿದ್ದ ಎನ್ನುವ ಕಾರಣಕ್ಕೆ 17 ವರ್ಷದ ಬಾಲಕನನ್ನು ಹುಡುಗಿಯ ಮನೆಯವರು ಮನಬಂದಂತೆ ಥಳಿಸಿ, ಶಿಶ್ನ ಕತ್ತರಿಸಿ ಕೊಂದು ಹಾಕಿರುವ ಭೀಕರ ಘಟನೆ ಬಿಹಾರದ ಮುಜಾಫರ್‌ಪುರ ಜಿಲ್ಲೆಯಲ್ಲಿ ನಡೆದಿದೆ. ಇದರಿಂದ ಕುಪಿತಗೊಂಡ ಸಂತ್ರಸ್ತ ಕುಟುಂಬ ಸದಸ್ಯರು ಆರೋಪಿಗಳ ಮನೆಯ ಮುಂದೆ ಶವ ಸಂಸ್ಕಾರ ಮಾಡಿ ಪ್ರತಿಭಟನೆ ಮಾಡಿದ್ದಾರೆ. ಕಾಂತಿ ಪೊಲೀಸ್ ಠಾಣಾ ವ್ಯಾಪ್ತಿಯ ರೆಪುರಾ ರಾಮ್‌ಪುರ್‌ಶಾ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ. ಅದೇ ಗ್ರಾಮದ ಬಾಲಕ ಸೌರಭ್ ಕುಮಾರ್ ಆ ದಿನ ರಾತ್ರಿ ಬಾಲಕಿಯ ಮನೆಗೆ ಹೋಗಿ ಸಿಕ್ಕಿಬಿದ್ದಿದ್ದ. ತಮ್ಮ ಹುಡುಗಿಯ ಜತೆ ಇರಿಸಿಕೊಂಡಿರುವ ಅಕ್ರಮ ಸಂಬಂಧ ತೊರೆಯುವಂತೆ ಹಿಂದೆ ಹಲವು ಬಾರಿ ಬಾಲಕಿಯ ಮನೆಯವರು ಎಚ್ಚರಿಕೆ ನೀಡಿದ್ದರು. ಸೌರಭ್ ಅದಕ್ಕೆ ಕಿವಿಗೊಟ್ಟಿರಲಿಲ್ಲ. ‘ನೇರ ಮನೆಗೆ ನುಗ್ಗಿ ಸಲ್ಲಾಪಕ್ಕಿಳಿದ ಹುಡುಗನ ವರ್ತನೆಯಿಂದ ಕೆಂಡಾಮಂಡಲವಾದ ಬಾಲಕಿಯ ಮನೆಯವರು ಬಾಗಿಲು ಚಿಲಕ ಹಾಕಿ ಥಳಿಸಿದ್ದರು. ಸೌರಭ್‌ನ ಬಟ್ಟೆ ಕಳಚಿ ಶಿಶ್ನ ಕತ್ತರಿಸಿ ದಂಡಿಸಿದ್ದರು. ನಂತರ ನಿತ್ರಾಣಗೊಂಡ ಆತನನ್ನು ನೆರೆಯರು ಆಸ್ಪತ್ರೆಗೆ ದಾಖಲಿಸಿದ್ದರು. ತೀವ್ರ ಗಾಯಗಳಿಂದ ಕುಸಿದಿದ್ದ ಬಾಲಕ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾನೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠರು ತಿಳಿಸಿದ್ದಾರೆ. ಇದರಿಂದ ವ್ಯಗ್ರಗೊಂಡ ಮೃತ ಬಾಲಕನ ಕುಟುಂಬಸ್ಥರು ಆರೋಪಿಗಳ ಮನೆ ಮೇಲೆ ದಾಳಿ ಮಾಡಿ ಕೈಗೆ ಸಿಕ್ಕವರನ್ನೆಲ್ಲ ಥಳಿಸಿದರು. ನಂತರ ಬಾಲಕನ ಶವವನ್ನು ಹುಡುಗಿಯ ಮನೆ ಮುಂದೆ ಹೂತು ಪ್ರತಿಭಟನೆ ನಡೆಸಿದರು. ಪೊಲೀಸರು ಸಕಾಲಿಕ ಮಧ್ಯಪ್ರವೇಶ ಮಾಡಿ, ಹೆಚ್ಚಿನ ಅನಾಹುತ ತಪ್ಪಿಸಿದರು. ಪ್ರಮುಖ ಆರೋಪಿ ಸುಶಾಂತ್ ಪಾಂಡ್ಯೆ ಎಂಬಾತನನ್ನು ಬಂಧಿಸಲಾಗಿದೆ. ಉಳಿದವರು ತಲೆಮರೆಸಿಕೊಂಡಿದ್ದು, ಅವರಿಗಾಗಿ ಹುಡುಕಾಟ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
from India & World News in Kannada | VK Polls https://ift.tt/2Wfx4e9