
ಬೆಂಗಳೂರು: ಸಿಎಂ ವಿರುದ್ಧ ರಾಜ್ಯಪಾಲರಿಗೆ ದೂರು ಸಲ್ಲಿಸಿರುವ ಸಚಿವ ರಾಜೀನಾಮೆ ಸಲ್ಲಿಸಬಹುದು ಎಂಬ ವದಂತಿ ಹರಡಿದೆ. ಆದರೆ, ಅಂತಹ ನಿರ್ಧಾರ ಕೈಗೊಳ್ಳಬಾರದು ಎಂದು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸೂಚಿಸಿದ್ದಾರೆ. ಸಚಿವ ಸ್ಥಾನಕ್ಕೆ ಈಶ್ವರಪ್ಪ ರಾಜೀನಾಮೆ ನೀಡಬಹುದು ಎಂಬ ಸುದ್ದಿ ಬುಧವಾರವೇ ಹರಿದಾಡುತ್ತಿತ್ತು. ಇದರ ಮಧ್ಯೆಯೇ ಈಶ್ವರಪ್ಪ ಅವರಿಗೆ ಕರೆ ಮಾಡಿರುವ ಅರುಣ್ ಸಿಂಗ್, ಈ ಪ್ರಕರಣ ಬೆಳೆಸುವ ಅಗತ್ಯವಿಲ್ಲ. ಉಪ ಚುನಾವಣೆ ಗೆಲುವಿಗೆ ಗಮನ ಹರಿಸಬೇಕು ಎಂಬ ನಿರ್ದೇಶನ ನೀಡಿದ್ದಾರೆ ಎಂದು ಗೊತ್ತಾಗಿದೆ. ಇನ್ನೊಂದೆಡೆ ಈಶ್ವರಪ್ಪ ಅವರು ತಮ್ಮ ವಿರುದ್ಧ ದೂರು ನೀಡಿರುವ ಬಗ್ಗೆ ಸಿಎಂ ಬಿ.ಎಸ್.ಯಡಿಯೂರಪ್ಪ ತೀವ್ರ ಬೇಸರಗೊಂಡಿದ್ದಾರೆ ಎನ್ನಲಾಗಿದೆ. ತಮ್ಮನ್ನು ಭೇಟಿಯಾದ ಸಂಪುಟದ ಸಹೋದ್ಯೋಗಿಗಳೊಂದಿಗೆ ಈ ಬಗ್ಗೆ ಮಾತನಾಡಿದ ಅವರು, ರಾಜಕೀಯವಾಗಿ ಈಶ್ವರಪ್ಪ ಬೆಳೆಯಲು ತಮ್ಮ ಸಹಕಾರ ಎಷ್ಟರ ಮಟ್ಟಿಗಿತ್ತು ಎಂಬುದನ್ನು ಪ್ರಸ್ತಾಪಿಸಿದ್ದಾರೆ. ಪಕ್ಷದ ಹಿರಿಯ ನಾಯಕ ಹಾಗೂ ಸಂಪುಟದಲ್ಲೂ ಹಿರಿಯ ಸದಸ್ಯರಾದ ಈಶ್ವರಪ್ಪ ಅವರಿಗೆ ಪಕ್ಷದ ವೇದಿಕೆಯಲ್ಲಿ ಮುಕ್ತ ಮಾತುಕತೆಗೆ ಅವಕಾಶವಿತ್ತು. ಆದರೆ, ಅವರು ಪದೇ ಪದೆ ಎಡವುತ್ತಿದ್ದಾರೆ ಎಂದು ಹೇಳಿದರು ಎನ್ನಲಾಗಿದೆ. ಕೆಲ ಸಚಿವರು ಹಾಗೂ ಶಾಸಕರು ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾ ಮಾಡುವಂತೆಯೂ ಆಗ್ರಹಿಸಿದರು. ಸಿಎಂ ಕೂಡ ಒಂದು ಹಂತದಲ್ಲಿಇದೇ ದಾಟಿಯಲ್ಲಿ ಮಾತನಾಡಿದರಾದರೂ ಎಲ್ಲವನ್ನೂ ಹೈಕಮಾಂಡ್ ನೋಡಿಕೊಳ್ಳುತ್ತದೆ ಎಂದರೆಂದು ತಿಳಿದು ಬಂದಿದೆ.
from India & World News in Kannada | VK Polls https://ift.tt/3wn4MvI