ಮುಂಬೈ: ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾಗಲು ಇನ್ನು ಒಂದು ವಾರ ಬಾಕಿ ಇರುವಾಗಲೇ ಮುಂಬೈನ ವಾಂಖೆಡೆ ಕ್ರೀಡಾಂಗಣದ ಸಿಬ್ಬಂದಿಗೆ ಸೋಂಕು ತಗುಲಿದೆ. ಈ ಹಿನ್ನೆಲೆಯಲ್ಲಿ ಏ.10ರಂದು ಇದೇ ಅಂಗಳದಲ್ಲಿ ನಡೆಯಲಿರುವ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯಕ್ಕೆ ಆತಂಕ ಶುರುವಾಗಿದೆ. ಕಳೆದ ವಾರ ಅಂಗಳದ ಸಿಬ್ಬಂದಿ ಆರ್‌ಟಿ-ಪಿಸಿಆರ್ ಟೆಸ್ಟ್‌ಗೆ ಒಳಗಾಗಿದ್ದರು. ಅದರಂತೆ ಮಾರ್ಚ್ 26ರಂದು ನಡೆದಿದ್ದ ಟೆಸ್ಟ್‌ನಲ್ಲಿ ಮೂರು ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಶುಕ್ರವಾರ ಐದು ಮಂದಿಗೆ ಹಾಗೂ ಏಪ್ರಿಲ್ 1 ರಂದು ನಡೆದಿದ್ದ ಪರೀಕ್ಷೆಯಲ್ಲಿ ಇಬ್ಬರಿಗೆ ಮಾರಣಾಂತಿಕ ಸೋಂಕು ತಗುಲಿರುವುದು ಖಚಿತವಾಗಿತ್ತು. ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಏ.9 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಹಾಲಿ ಚಾಂಪಿಯನ್ಸ್ ಇಂಡಿಯನ್ಸ್ ಮುಖಾಮುಖಿಯಾಗುವ ಮೂಲಕ 2021ರ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾಗಲಿದೆ. ನಂತರ ಏಪ್ರಿಲ್ 10 ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಸೆಣಸಲಿವೆ. ಈ ಅಂಗಳದಲ್ಲಿ ಒಟ್ಟು 10 ಪಂದ್ಯಗಳು ಜರುಗಲಿವೆ. ಚೆನ್ನೈ, ಬೆಂಗಳೂರು, ಮುಂಬೈ, ಡೆಲ್ಲಿ, ಕೋಲ್ಕತಾ ಹಾಗೂ ಅಹ್ಮದಾಬಾದ್ ಸ್ಥಳಗಳಲ್ಲಿ ಬಯೋ ಬಬಲ್ ವ್ಯಾಪ್ತಿಯಲ್ಲಿ ಈ ಬಾರಿ ಐಪಿಎಲ್ ಟೂರ್ನಿಯ ಪಂದ್ಯಗಳು ನಡೆಯಲಿವೆ. ದೇಶದಲ್ಲಿ ಕೊರೊನಾ ವೈರಸ್ ಎರಡನೇ ಅಲೆ ಎದ್ದಿರುವ ಕಾರಣ 14ನೇ ಐಪಿಎಲ್ ಟೂರ್ನಿಯ ಎಲ್ಲಾ ಪಂದ್ಯಗಳು ಮುಚ್ಚಿದ ಕ್ರೀಡಾಂಗಣದಲ್ಲಿ ನಡೆಯಲಿವೆ. ಆದರೆ, ಇದೀಗ ಮುಂಬೈ ವಾಂಖೆಡೆ ಕ್ರೀಡಾಂಗಣದ ಸಿಬ್ಬಂದಿಗೆ ಕೋವಿಡ್-19 ಸೋಂಕು ತಗುಲಿರುವುದರಿಂದ ಎಲ್ಲಾ ಫ್ರಾಂಚೈಸಿಗಳಿಗೆ ಆತಂಕ ಉಂಟಾಗಿದೆ. ವಾಂಖೆಡೆ ಕ್ರೀಡಾಂಗಣದ ಸಿಬ್ಬಂದಿ ಸಾಮಾನ್ಯವಾಗಿ ಪ್ರತಿ ದಿನ ಮನೆಯಿಂದ ರೈಲಿನ ಮೂಲಕ ಬರುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರಲ್ಲಿ ಕೆಲವರಿಗೆ ಸೋಂಕು ತಗುಲಿರಬಹುದು. ಇದೀಗ ಎಚ್ಚೆತ್ತುಕೊಂಡಿರುವ ಮೈದಾನದ ಅಧಿಕಾರಿಗಳು ಐಪಿಎಲ್ ಟೂರ್ನಿ ಮುಗಿಯುವವರೆಗೂ ಅಂಗಳದಲ್ಲಿಯೇ ಸಿಬ್ಬಂದಿಗೆ ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸಲು ಯೋಜನೆ ರೂಪಿಸುತ್ತಿದೆ. "ಅಂಗಳದ ಸಿಬ್ಬಂದಿ ಕ್ರೀಡಾಂಗಣದಲ್ಲಿಯೇ ಉಳಿದುಕೊಳ್ಳಲು ತಕ್ಷಣ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಅಂಗಳದಲ್ಲಿ ಹಲವು ಕೊಠಡಿಗಳಿದ್ದು, ಇವುಗಳಲ್ಲಿ ಸಿಬ್ಬಂದಿ ಉಳಿದುಕೊಳ್ಳಲಿದ್ದಾರೆ. ವಾಂಖೆಡೆಯಲ್ಲಿ ಪಂದ್ಯಗಳ ನಡೆಯುವ ಬಗ್ಗೆ ಯಾವುದೇ ಆತಂಕವಿಲ್ಲ. ಟೂರ್ನಿ ಆರಂಭಿಸಲು ನಾವು ಸಿದ್ದರಿದ್ದೇವೆ," ಎಂದು ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3rKYbrB