ಹೊಸದಿಲ್ಲಿ: 2022ರೊಳಗೆ ದೇಶದ ಪ್ರತಿಯೊಂದು ಮನೆಗೂ ವಿದ್ಯುತ್ ಹಾಗೂ ಅಡುಗೆ ಅನಿಲ ಸೌಲಭ್ಯವು ದೊರೆಯುವಂತಾಗಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ಭರವಸೆ ನೀಡಿದ್ದಾರೆ. ಶುಕ್ರವಾರ ಲೋಕಸಭೆಯಲ್ಲಿ 2019-20 ಸಾಲಿನ ಆಯವ್ಯಯ ಪತ್ರ ಮಂಡಿಸಿದ ಸಚಿವೆ ನಿರ್ಮಲಾ, ದೇಶದ ಸ್ವಾತಂತ್ರ್ಯದ 75ನೇ ವರ್ಷಾಚರಣೆಯ ಈ ಸಂದರ್ಭದಲ್ಲಿ, ವಿದ್ಯುತ್ ಸಂಪರ್ಕ ಪಡೆಯಲು ಇಷ್ಟವಿಲ್ಲದಿರುವವರನ್ನು ಹೊರತುಪಡಿಸಿದರೆ, ಗ್ರಾಮೀಣ ಪ್ರದೇಶದ ಪ್ರತಿಯೊಂದು ಮನೆಗೂ ವಿದ್ಯುತ್ ಸೌಲಭ್ಯ ಹಾಗೂ ಅಡುಗೆ ಅನಿಲ ವ್ಯವಸ್ಥೆ ಇರುತ್ತದೆ ಎಂದು ಹೇಳಿದರು. ಪ್ರತಿಯೊಂದು ವಿಷಯದಲ್ಲಿಯೂ ಗ್ರಾಮ, ಬಡವರು ಹಾಗೂ ರೈತರಿಗೇ ನಮ್ಮ ಆದ್ಯತೆ. ಪ್ರಧಾನ ಮಂತ್ರಿಯವರ ಎರಡು ಮಹತ್ತರ ಯೋಜನೆಗಳಾದ ಪ್ರಧಾನ್ ಮಂತ್ರಿ ಉಜ್ವಲ ಯೋಜನೆ ಮತ್ತು ಸೌಭಾಗ್ಯ ಯೋಜನೆಯು ಗ್ರಾಮೀಣ ಭಾರತದ ಪ್ರತಿಯೊಂದು ಕುಟುಂಬವನ್ನೂ ನಾಟಕೀಯ ಎನ್ನಿಸುವಷ್ಟರ ಮಟ್ಟಿಗೆ ಬದಲಾವಣೆ ಮಾಡಿದೆ. ಗ್ರಾಮೀಣ ಜನರ ಜೀವನಶೈಲಿಯೂ ಸುಧಾರಣೆ ಕಂಡಿದೆ ಎಂದು ನಿರ್ಮಲಾ ಹೇಳಿದರು. 7 ಕೋಟಿ ಎಲ್‌ಪಿಜಿ ಸಂಪರ್ಕಗಳನ್ನು ನೀಡುವ ಮೂಲಕ ಈಗಾಗಲೇ ಪರಿಸರಸ್ನೇಹಿ ಅಡುಗೆ ಅನಿಲವು ಬಹುತೇಕ ಮನೆಗಳನ್ನು ತಲುಪಿದೆ. ಎಲ್ಲ ಹಳ್ಳಿಗಳು ಮತತ್ತು ದೇಶಾದ್ಯಂತ ಇರುವ ಬಹುತೇಕ ಮನೆಗಳಿಗೆ ವಿದ್ಯುತ್ ಒದಗಿಸಲಾಗಿದೆ ಎಂದು ಸಚಿವರು ತಿಳಿಸಿದರು. ತಮ್ಮ ಸರಕಾರದ ಯೋಜನೆಗಳ ಯಶಸ್ಸನ್ನು ವಿವರಿಸುತ್ತಾ ಅವರು, ಯೋಜನೆಗಳ ಸಮರ್ಪಕ ಅನುಷ್ಠಾನ ಬಗೆಗಿನ ಇಚ್ಛಾಶಕ್ತಿ ಮತ್ತು ಜನರ ಭಾಗೀದಾರಿಯಿಂದಾಗಿ ಗ್ರಾಮೀಣ ಮನೆಗಳಲ್ಲಿ ವಿದ್ಯುತ್ ಸೌಲಭ್ಯವು ಸಾಕಷ್ಟು ಸುಧಾರಣೆ ಕಾಣಲು ಕಾರಣವಾಗಿದೆ ಎಂದು ಹೇಳಿದರು.
from India & World News in Kannada | VK Polls https://ift.tt/2Xrf8Iu