ಹೊಸದಿಲ್ಲಿ: ಜುಲೈ 13 ರಿಂದ ಭಾರತದ ವಿರುದ್ಧ ಆರಂಭವಾಗುವ ಸೀಮಿತ ಓವರ್‌ಗಳ ಸರಣಿಯ 'ಪ್ರವಾಸ ಗುತ್ತಿಗೆ'ಗೆ ಸಹಿ ಮಾಡಲು , ಲಸಿತ್ ಎಂಬುಲ್ಡೇನಿಯಾ, ಲಹಿರು ಕುಮಾರ, ಆಶೆನ್ ಬಂದಾರ ಹಾಗೂ ಕಸೂನ್ ರಜಿತ ಸೇರಿ ಐವರು ಲಂಕಾ ಆಟಗಾರರು ನಿರಾಕರಿಸಿದ್ದಾರೆ. ನೂತನ ಕೇಂದ್ರ ಗುತ್ತಿಗೆಗೆ ಸಂಬಂಧಿಸಿದಂತೆ ಶ್ರೀಲಂಕಾ ಕ್ರಿಕೆಟ್ ಮಂಡಳಿ ಹಾಗೂ ಲಂಕಾ ಆಟಗಾರರ ನಡುವೆ ಭಿನ್ನಾಭಿಪ್ರಾಯ ಏರ್ಪಟ್ಟಿದೆ. ಫಿಟ್ನೆಸ್ ಹಾಗೂ ಪ್ರದರ್ಶನದ ಆಧಾರದ ಮೇಲೆ ರೂಪಿಸಿರುವ ನೂತನ ಗುತ್ತಿಗೆ ಪತ್ರಕ್ಕೆ ಸಹಿ ಮಾಡಲು 24 ರಾಷ್ಟ್ರೀಯ ತಂಡದ ಆಟಗಾರರು ನಿರಾಕರಿಸಿದ್ದಾರೆ. ಮುಖ್ಯ ಕೇಂದ್ರ ಗುತ್ತಿಗೆ ಸಂಬಂಧಿಸಿದಂತೆ ಉದ್ಭವವಾಗಿರುವ ಸಮಸ್ಯೆಯನ್ನು ಬಗೆಹರಿಸುವವರೆಗೂ ಭಾರತ ವಿರುದ್ಧ ಮುಂಬರುವ ಸೀಮಿತ ಓವರ್‌ಗಳ ಸರಣಿಗಳಿಗಾಗಿ ಶ್ರೀಲಂಕಾ ತಂಡವನ್ನು ಪ್ರತಿನಿಧಿಸಲು "ಪ್ರವಾಸ ಆಧರಿತ' ಗುತ್ತಿಗೆ ಪತ್ರಕ್ಕೆ ಸಹಿ ಮಾಡುವಂತೆ ಶ್ರೀಲಂಕಾ ಮಂಡಳಿ ಆಗ್ರಹಿಸುತ್ತಿದೆ. ಆದರೆ, ಇದಕ್ಕೂ ಸಹಿ ಮಾಡಲು ಈ ಐವರು ತಿರಸ್ಕರಿಸಿದ್ದಾರೆ. ಪ್ರವಾಸ ಗುತ್ತಿಗೆಗೆ ಸಹಿ ಮಾಡಲು ನಿರಾಕರಿಸಿರುವ ಈ ಐವರು ಆಟಗಾರರು, ಕೊಲಂಬೊದ ದಂಬೂಲಾದಲ್ಲಿ ನಡೆಯುತ್ತಿರುವ ರೆಸಿಡೆನ್ಸಿಯಲ್ ಕ್ಯಾಂಪ್‌ನಿಂದಲೂ ಹೊರ ನಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತ ವಿರುದ್ಧ ಸೀಮಿತ ಓವರ್‌ಗಳ ಸರಣಿಗೆ ಶ್ರೀಲಂಕಾ ತಂಡ ತನ್ನ ಸಾಮರ್ಥ್ಯವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಈ ಬಗ್ಗೆ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಸಿಇಓ ಆಶ್ಲೆ ಡಿ ಸಿಲ್ವಾ, "ಕೇಂದ್ರ ಗುತ್ತಿಗೆ ಸಂಬಂಧಿಸಿದ ಸಮಸ್ಯೆಯನ್ನು ಇತ್ಯರ್ಥಪಡಿಸುವವರೆಗೂ ಭಾರತ ವಿರುದ್ಧ ಸೀಮಿತ ಓವರ್‌ಗಳ ಸರಣಿಗಾಗಿ 'ಪ್ರವಾಸ ಗುತ್ತಿಗೆ'ಗೆ ಸಹಿ ಮಾಡುವಂತೆ ಆಟಗಾರರಿಗೆ ಕೇಳಿಕೊಳ್ಳಲಾಗಿದೆ. ಇದರಲ್ಲಿ ಸಹಿ ಮಾಡುವ ಮೂಲಕ ಭಾರತ ವಿರುದ್ಧ ಸರಣಿಗೆ ಅವರು ಲಭ್ಯರಾಗಲಿದ್ದಾರೆ. ಆದರೆ, ಈ ಐವರು ಆಟಗಾರರು ಸಹಿ ಮಾಡಲು ನಿರಾಕರಿಸಿದ್ದು, ಕ್ಯಾಂಪ್‌ನಿಂದ ಹೊರ ನಡೆದಿದ್ದಾರೆ. ಅಲ್ಲದೆ, ಅವರು ದಂಬೂಲ ಅಥವಾ ಕೊಲಂಬೊದಲ್ಲಿನ ಬಯೋ ಬಬಲ್‌ಗೂ ಸೇರ್ಪಡೆಯಾಗಿರಲಿಲ್ಲ," ಎಂದು ಹೇಳಿದ್ದಾರೆ. ಶ್ರೀಲಂಕಾ ಮುಖ್ಯ ತಂಡ ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿದ್ದು ಓಡಿಐ ಸರಣಿಯಲ್ಲಿ ಕಾದಾಟ ನಡೆಸುತ್ತಿದೆ. ಇದಕ್ಕೂ ಮುನ್ನ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ ಲಂಕಾ 0-3 ಅಂತರದಲ್ಲಿ ಸೋಲು ಅನುಭವಿಸಿತ್ತು. ಇದೀಗ ಮೂರು ಪಂದ್ಯಗಳ ಓಡಿಐ ಸರಣಿಯಲ್ಲಿ 0-1 ಹಿನ್ನಡೆ ಅನುಭವಿಸಿದೆ. ಬಯೋ-ಬಬಲ್ ಉಲ್ಲಂಘಿಸಿದ್ದ ಲಂಕಾ ಆಟಗಾರರು ಕಳೆದ ಭಾನುವಾರ ಇಂಗ್ಲೆಂಡ್‌ನಲ್ಲಿ ಬಯೋ-ಬಬಲ್ ಉಲ್ಲಂಘನೆ ಮಾಡಿದ ಶ್ರೀಲಂಕಾ ತಂಡದ ದನುಷ್ಕ ಗುಣತಿಲಕೆ, ಕುಸಾಲ್ ಮೆಂಡಿಸ್ ಹಾಗೂ ನಿರೋಶನ್ ಡಿಕ್ವೆಲ್ ಅವರನ್ನು ಶ್ರೀಲಂಕಾ ಕ್ರಿಕೆಟ್ ಮಂಡಳಿ ಅಮಾನತುಗೊಳಿಸಿ ತವರಿಗೆ ವಾಪಸ್ ಕರೆಸಿಕೊಂಡಿತ್ತು. ಅಂದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಇಂಗ್ಲೆಂಡ್, ತನ್ನ ಪಾಲಿನ 20 ಓವರ್‌ಗಳಿಗೆ 180 ರನ್ ಗಳಿಸಿತ್ತು. ಆಂಗ್ಲರ ಪರ ಡಾವಿಡ್ ಮಲಾನ್ 76 ರನ್ ಗಳಿಸಿದ್ದರು. ನಂತರ ಗುರಿ ಹಿಂಬಾಲಿಸಿದ್ದ ಶ್ರೀಲಂಕಾ, ಕೇವಲ 91 ರನ್‌ಗಳಿಗೆ ಆಲೌಟ್ ಆಗಿತ್ತು. ಆ ಮೂಲಕ ಶ್ರೀಲಂಕಾ 89 ರನ್‌ಗಳ ಭಾರಿ ಅಂತರದಲ್ಲಿ ಸೋಲು ಅನುಭವಿಸಿತ್ತು. ಇದರೊಂದಿಗೆ ಇಂಗ್ಲೆಂಡ್ 3-0 ಅಂತರದಲ್ಲಿ ಟಿ20 ಸರಣಿಯಲ್ಲಿ ಕ್ಲೀನ್ ಸ್ವೀಪ್ ಮಾಡಿಕೊಂಡಿತ್ತು. ಟಿ20 ಸರಣಿಯ ಕೊನೆಯ ಪಂದ್ಯದಲ್ಲಿ ಸೋಲುತ್ತಿದ್ದಂತೆ ಶ್ರೀಲಂಕಾ ತಂಡ ಟೀಕೆಗಳಿಗೆ ಗುರಿಯಾಯಿತು. ಇದಲ್ಲದೆ, ಶ್ರೀಲಂಕಾ ತಂಡದ ದನುಷ್ಕ ಗುಣತಿಲಕೆ, ನಿರೋಶನ್ ಡಿಕ್ವೆಲ್ ಹಾಗೂ ಕುಸಾಲ್ ಮೆಂಡಿಸ್ ಅವರು ಬಯೋ-ಬಬಲ್ ಉಲ್ಲಂಘನೆ ಮಾಡಿದ್ದಾರೆಂಬ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈ ವಿಷಯ ತಿಳಿಯುತ್ತಿದ್ದಂತೆ ಶ್ರೀಲಂಕಾ ಕ್ರಿಕೆಟ್ ಮಂಡಳಿ ಈ ಮೂರು ಆಟಗಾರರನ್ನು ತವರಿಗೆ ವಾಪಸ್ ಕರೆಸಿಕೊಂಡಿತ್ತು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3jENre8