ಹೊಸದಿಲ್ಲಿ: ಟೀಮ್ ಇಂಡಿಯಾಗೆ ಮುಂದಿನ ಹೆಡ್ ಕೋಚ್ ಆಗಿ ರವಿಶಾಸ್ತ್ರಿ ಅವರ ಸ್ಥಾನವನ್ನು ರಾಹುಲ್ ದ್ರಾವಿಡ್ ತುಂಬಬೇಕೆಂದು 1983ರ ಚೊಚ್ಚಲ ವಿಶ್ವಕಪ್ ವಿಜೇತ ಭಾರತ ತಂಡದ ನಾಯಕ ಕಪಿಲ್ ದೇವ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸೀಮಿತ ಓವರ್‌ಗಳ ಸರಣಿ ಆಡಲು ಶ್ರೀಲಂಕಾ ಪ್ರವಾಸ ಮಾಡಿರುವ ಶಿಖರ್ ಧವನ್ ನಾಯಕತ್ವದ ಭಾರತ ತಂಡಕ್ಕೆ ಮುಖ್ಯ ಕೋಚ್ ಆಗಿ ಅವರನ್ನು ಬಿಸಿಸಿಐ ನೇಮಿಸಿದೆ. ಭಾರತೀಯ ಕ್ರಿಕೆಟ್‌ನ ಭವಿಷ್ಯಕ್ಕೆ ಇದು ಮುನ್ಸೂಚನೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೆ, 2021ರ ಐಸಿಸಿ ಟಿ20 ವಿಶ್ವಕಪ್ ಬಳಿಕ ರವಿಶಾಸ್ತ್ರಿ ಅವರ ಕೋಚ್ ಅವಧಿ ಮುಕ್ತಾಯವಾಗಲಿದ್ದು, ದ್ರಾವಿಡ್ ಆ ಸ್ಥಾನವನ್ನು ಅಲಂಕರಿಸಬೇಕೆಂಬುದು ಹಲವರ ಅನಿಸಿಕೆ. ಭಾರತ ತಂಡದ ಕೋಚ್ ಆಗಿ ರವಿಶಾಸ್ತ್ರಿ ಅದ್ಭುತ ಸಾಧನೆಯನ್ನು ಮಾಡಿದ್ದಾರೆ. ಆದರೆ, ಅವರು ಹಾಗೂ ನಾಯಕ ವಿರಾಟ್ ಕೊಹ್ಲಿ ಅಡಿಯಲ್ಲಿ ಭಾರತ ಒಮ್ಮೆಯೂ ಐಸಿಸಿ ಟ್ರೋಫಿ ಗೆಲ್ಲದೇ ಇರುವುದು ಬೇಸರ ಸಂಗತಿ. ಮತ್ತೊಂದೆಡೆ ರಾಹುಲ್ ದ್ರಾವಿಡ್ ಅವರು ಭಾರತ 'ಎ' ತಂಡದ ಕೋಚ್ ಆಗಿದ್ದ ವೇಳೆ ಅತ್ಯುತ್ತಮ ಫಲಿತಾಂಶವನ್ನು ಹೊರ ತಂದಿದ್ದಾರೆ. ಅಲ್ಲದೆ, 2018ರಲ್ಲಿ ದ್ರಾವಿಡ್ ಅಡಿಯಲ್ಲಿ 19 ವಯೋಮಿತಿ ಭಾರತ ತಂಡ ವಿಶ್ವಕಪ್ ಮುಡಿಗೇರಿಸಿಕೊಂಡಿರುವುದು ಹೆಮ್ಮೆಯ ಸಂಗತಿ. ಈ ಬಗ್ಗೆ ಪ್ರತಿಕ್ರಿಯಿಸಿರುವ ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್, ಮುಖ್ಯ ಕೋಚ್ ಆಗಿ ರವಿಶಾಸ್ತ್ರಿ ಅವರ ಸ್ಥಾನವನ್ನು ತುಂಬಲು ರಾಹುಲ್ ದ್ರಾವಿಡ್ ಸೂಕ್ತ ವ್ಯಕ್ತಿ ಎಂದು ಹೇಳಿದ್ದಾರೆ. "ಈ ಬಗ್ಗೆ ಏನೂ ಹೇಳುವ ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ಶ್ರೀಲಂಕಾ ಸರಣಿ ಮುಕ್ತಾಯದ ಬಳಿಕ ತಂಡದ ಪ್ರದರ್ಶನ ಎಲ್ಲರಿಗೂ ಗೊತ್ತಾಗಲಿದೆ . ಒಂದು ವೇಳೆ ನೀವು ಹೊಸ ಕೋಚ್ ಅನ್ನು ಪ್ರಯತ್ನಿಸುವ ಆಗಿದ್ದರೆ, ಇದರಲ್ಲಿ ಯಾವುದೇ ತಪ್ಪಿಲ್ಲ. ರವಿಶಾಸ್ತ್ರಿ ಅವರು ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರೆ ಅವರನ್ನು ತೆಗೆಯಲು ಯಾವುದೇ ಕಾರಣ ಇರುವುದಿಲ್ಲ. ಈ ಸಂಗತಿಗಳ ಬಗ್ಗೆ ಸಮಯವೇ ನಿರ್ಧರಿಸುತ್ತದೆ. ಹಾಗಾಗಿ, ನಮ್ಮ ಕೋಚ್‌ಗಳ ಹಾಗೂ ಆಟಗಾರರ ಮೇಲೆ ಅನಗತ್ಯ ಒತ್ತಡ ಹೇರಬಾರದು," ಎಂದು ಎಬಿಪಿ ನ್ಯೂಸ್‌ಗೆ ಕಪಿಲ್ ದೇವ್ ಹೇಳಿದ್ದಾರೆ. ಸದ್ಯ ಭಾರತದಲ್ಲಿ ಅಪಾರ ಪ್ರತಿಭೆಯುಳ್ಳ ಆಟಗಾರರು ಇದ್ದಾರೆ. ಈ ಹಿನ್ನೆಲೆಯಲ್ಲಿ ಏಕ ಕಾಲದಲ್ಲಿ ಎರಡು ತಂಡಗಳು ಅಂತಾರಾಷ್ಟ್ರೀಯ ವಿಭಿನ್ನ ಸರಣಿಗಳಲ್ಲಿ ಆಡಲು ಸಜ್ಜಾಗುತ್ತಿವೆ. ಅರ್ಹ ಯುವ ಪ್ರತಿಭೆಗಳು ಭಾರತ ತಂಡದ ಚೊಚ್ಚಲ ಕ್ಯಾಪ್ ಸ್ವೀಕರಿಸಲಿದ್ದಾರೆಂದ ಕಪಿಲ್ ದೇವ್, ಸದ್ಯ ಭಾರತ ತಂಡ ಸಾಕಷ್ಟು ಕ್ರಿಕೆಟ್ ಆಡುತ್ತಿದೆ ಎಂದು ಒಪ್ಪಿಕೊಂಡರು. "ಭಾರತ ತಂಡದಲ್ಲಿ ಬೆಂಚ್ ಸಾಮರ್ಥ್ಯ ಬಲಿಷ್ಠವಾಗಿದೆ. ಆಟಗಾರರಿಗೆ ಅರ್ಹ ಅವಕಾಶ ಸಿಕ್ಕರೆ, ಇಂಗ್ಲೆಂಡ್ ಹಾಗೂ ಶ್ರೀಲಂಕಾ ಎರಡೂ ಕಡೆ ಗೆಲ್ಲಬಹುದಾದ ಎರಡು ತಂಡಗಳನ್ನು ಕಣಕ್ಕೆ ಇಳಿಸಬಹುದು, ಇದಕ್ಕಿಂತ ಉತ್ತಮವಾದದ್ದು ಏನಿದೆ? ಯುವ ಆಟಗಾರರಿಗೆ ಅವಕಾಶ ಸಿಗುವುದಾದರೆ, ಇದರಲ್ಲಿ ಯಾವುದೇ ಅನುಮಾನವಿಲ್ಲ. ಏಕ ಕಾಲದಲ್ಲಿ ಎರಡೂ ತಂಡಗಳನ್ನು ಕಣಕ್ಕೆ ಇಳಿಸಿ ಒತ್ತಡ ಹೇರುವುದು ಅಥವಾ ಬಿಡುವುದು ಟೀಮ್ ಮ್ಯಾನೇಜ್‌ಮೆಂಟ್‌ಗೆ ಬಿಟ್ಟಿದ್ದು," ಎಂದು ಕಪಿಲ್ ದೇವ್ ಹೇಳಿದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3qLSIlq