'ಸಂಜೆ ಬರಲಿದೆ ಸಂದೇಶ': ಮತ್ತಷ್ಟು ಕುತೂಹಲ ಮೂಡಿಸಿದ ಸಿಎಂ ಯಡಿಯೂರಪ್ಪ ಹೇಳಿಕೆ!

ಬೆಳಗಾವಿ: ನಾಯಕತ್ವ ಬದಲಾವಣೆ ಸುದ್ದಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಮತ್ತೆ ರಹಸ್ಯ ಕಾಯ್ದುಕೊಂಡಿದ್ದಾರೆ. ಜತೆಗೆ ಸಂಜೆ ವೇಳೆ ಸಂದೇಶ ಬರಲಿದೆ. ಬಳಿಕ ನಿಮಗೂ ತಿಳಿಯಲಿದೆ ಎನ್ನುವ ಮೂಲಕ ಮತ್ತಷ್ಟು ಕುತೂಹಲ ಮೂಡಿಸಿದ್ದಾರೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಂದಾಗ ಮಾಧ್ಯಮಗಳ ಜೊತೆ ಮಾತನಾಡಿದರು. ಪ್ರವಾಹದಿಂದ ತೀವ್ರ ಹಾನಿಗೊಳಗಾಗಿರುವ ಬೆಳಗಾವಿಯ ಪ್ರದೇಶಗಳನ್ನು ಪರಿಶೀಲಿಸುವ ಸಲುವಾಗಿ ಭಾನುವಾರ ಅವರು ಭೇಟಿ ನೀಡಿದ್ದಾರೆ. ಮುಖ್ಯಮಂತ್ರಿ ಸ್ಥಾನವನ್ನು ತ್ಯಜಿಸುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಸಂಜೆ ಪ್ರವಾಹ ಪೀಡಿತ ಪ್ರದೇಶಗಳಿಂದ ವಾಪಸ್ ಬರುವುದರೊಳಗೆ ಹೈಕಮಾಂಡ್ ಸಂದೇಶ ಬರುತ್ತದೆ. ನಿಮಗೂ ತಿಳಿಯುತ್ತದೆ ಎಂದು ಪ್ರತಿಕ್ರಿಯಿಸಿದರು. ದಲಿತ ಮುಖ್ಯಮಂತ್ರಿ ನೇಮಕದ ಬೇಡಿಕೆ ವಿಚಾರವಾಗಿ ಪ್ರಶ್ನಿಸಿದಾಗ, 'ಅದನ್ನು ಮಾಡುವವನು ನಾನಲ್ಲ, ಹೈಕಮಾಂಡ್' ಎಂದರು. ಲಿಂಗಾಯತ ಮಠಗಳ ಸ್ವಾಮೀಜಿಗಳು ತಮ್ಮ ಪರವಾಗಿ ಸಮಾವೇಶ ಮಾಡುತ್ತಿರುವ ಕುರಿತು ಪ್ರಶ್ನಿಸಿದಾಗ, 'ಅದು ಅಗತ್ಯವಿಲ್ಲ' ಎಂದು ಹೇಳಿದರು. ಸಿಎಂ ಸ್ಥಾನಕ್ಕೆ ಬಿಎಸ್ ಯಡಿಯೂರಪ್ಪ ರಾಜೀನಾಮೆ ಸಾಧ್ಯತೆ ಹಿನ್ನೆಲೆಯಲ್ಲಿ ಅರಮನೆ ಮೈದಾನದಲ್ಲಿ ಮಠಾಧೀಶರು ಭಾನುವಾರ ಸಮಾವೇಶವನ್ನು ಹಮ್ಮಿಕೊಂಡಿದ್ದಾರೆ. ಬಾಳೆಹೊಸೂರು ದಿಂಗಾಲೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಸಮಾವೇಶ ನಡೆಯಲಿದ್ದು, ಈಗಾಗಲೇ 200ಕ್ಕೂ ಅಧಿಕ ಮಠಾಧೀಶರು ಸಮಾವೇಶಕ್ಕೆ ಆಗಮಿಸಿದ್ದಾರೆ. ಸಿಎಂ ಸ್ಥಾನಕ್ಕೆ ಬಿಎಸ್‌ವೈ ರಾಜೀನಾಮೆ ನೀಡಬಾರದು ಎಂದು ಮಠಾಧೀಶರು ಸಮಾವೇಶದ ಮೂಲಕ ಒತ್ತಡ ಹೇರಲು ಮುಂದಾಗಿದ್ದಾರೆ. ಈಗಾಗಲೇ ಹಲವು ಸ್ವಾಮೀಜಿಗಳು ಬಿಎಸ್‌ವೈ ನಿವಾಸಕ್ಕೆ ತೆರಳಿ ಬೆಂಬಲ ಸೂಚಿಸಿದ್ದರು. ಇದೀಗ ವರ್ತಮಾನದ ಸಮಸ್ಯೆಗಳು ಮತ್ತು ಪರಿಹಾರ ಎಂಬ ಹೆಸರಿನಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಕಾಳಜಿ ಕೇಂದ್ರಕ್ಕೆ ಭೇಟಿ ಸಂಕೇಶ್ವರ ಪ್ರವಾಹ ಪೀಡಿತ ಪ್ರದೇಶಗಳಿಗೆ ಹಾಗೂ ನಿರಾಶ್ರಿತರ ಕಾಳಜಿ ಕೇಂದ್ರಕ್ಕೆ ಯಡಿಯೂರಪ್ಪ ಭೇಟಿ ನೀಡಿದರು. ಈಗಾಗಲೇ ಸಂಕೇಶ್ವರ ವ್ಯಾಪ್ತಿಯಲ್ಲಿ 50 ಎಕರೆ ಭೂಮಿ ಖರೀದಿ ಮಾಡಿದ್ದು, ಮನೆ ಕಟ್ಟಿಕೊಡುವ ಪರ್ಯಾಯ ವ್ಯವಸ್ಥೆ ಮಾಡಲಾಗುವುದು. ಅದಲ್ಲದೇ ಪ್ರವಾಹದಿಂದ ಬೇರೆ ಇನ್ಯಾವುದೇ ರೀತಿ ಸಂಕಷ್ಟಕ್ಕೊಳಗಾದವರನ್ನು ಸಮೀಕ್ಷೆ ಮುಖಾಂತರ ಗುರುತಿಸಿ ಅವರಿಗೂ ಪರಿಹಾರ ಕೊಡುವ ವ್ಯವಸ್ಥೆ ಮಾಡಲಾಗುವುದು ಎಂದರು. ಇವು ತಕ್ಷಣವೇ ಜಾರಿ ಬರುವಂತೆ ಕಂದಾಯ ಸಚಿವ ಆರ್. ಅಶೋಕ ಅವರಿಗೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಸಚಿವ ಉಮೇಶ್ ಕತ್ತಿ, ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಇದ್ದರು.


from India & World News in Kannada | VK Polls https://ift.tt/3iJvAR4

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...