ಐತಿಚಂಡ ರಮೇಶ್ ಉತ್ತಪ್ಪ : ಮುಂದಿನ ಸಾರ್ವತ್ರಿಕ ಚುನಾವಣೆಯ ಅಡಿಪಾಯ ಆಗಿರುವ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಸಂದರ್ಭದಲ್ಲಿ ಮತ್ತೆ ಪಕ್ಷವನ್ನು ಕಟ್ಟಬೇಕಾದ ಅನಿವಾರ್ಯತೆ ಇದೀಗ ಜೆಡಿಎಸ್‌ಗೆ ಇದೆ. ಈ ಹಿನ್ನೆಲೆಯಲ್ಲಿ ಮೈಸೂರು ಭಾಗದಲ್ಲಿ ಪ್ರಭಾವಿ ನಾಯಕರಾಗಿರುವ ಶಾಸಕ ಜಿ. ಟಿ. ದೇವೇಗೌಡರನ್ನು ಪಕ್ಷದಲ್ಲಿಯೇ ಉಳಿಸಿಕೊಳ್ಳಲು ಎಚ್. ಡಿ. ದೇವೇಗೌಡರೇ ಅಖಾಡಕ್ಕೆ ಇಳಿದಿದ್ದಾರೆ. ಮುಂದಿನ ಮಾತುಕತೆ ತನಕ ಯಾವುದೇ ದುಡುಕಿನ ನಿರ್ಧಾರ ಬೇಡ ಎಂಬ ಸಂದೇಶವನ್ನು ರವಾನಿಸಿದ್ದಾರೆ. ರಾಜಕೀಯ ಪಕ್ಷಗಳು ವಿಧಾನಸಭೆ ಚುನಾವಣೆಯಂತೆಯೇ ಅತ್ಯಂತ ಗಂಭೀರವಾಗಿ ಪರಿಗಣಿಸುವ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಯಾವ ಅಭ್ಯರ್ಥಿ ಗೆಲ್ಲುತ್ತಾರೆ ಎನ್ನುವುದಕ್ಕಿಂತ ಯಾವ ಪಕ್ಷ ಗೆದ್ದಿದೆ ಎನ್ನುವುದು ಮುಖ್ಯ. ಮುಂದಿನ ಚುನಾವಣೆಗೆ ದಿಕ್ಸೂಚಿ ಎಂದೂ ಹೇಳಲಾಗುತ್ತಿದೆ. ಒಂದೆಡೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ 'ಘರ್ ವಾಪ್ಸಿ'ಗೆ ಕರೆ ನೀಡಿ ಪಕ್ಷ ಪುನರ್ ಸಂಘಟನೆಗೆ ಸೂಚನೆ ನೀಡಿದ್ದಾರೆ. ಪರಿಣಾಮ, ಜೆಡಿಎಸ್ ಕೂಡ ಚುನಾವಣೆ ಸಂದರ್ಭ ಪಕ್ಷದ ಬಲ ಹೆಚ್ಚಿಸಲು ಚಿಂತನೆ ನಡೆಸುತ್ತಿದೆ. ಜಿಟಿಡಿ ಅನಿವಾರ್ಯ: ಪಕ್ಷ ಬಿಟ್ಟು ಹೋದವರನ್ನು ಕರೆತರುವ ಅಥವಾ ತಟಸ್ಥರಾಗಿರುವ ನಾಯಕರನ್ನು ಸಮಾಧಾನಪಡಿಸುವ ಪ್ರಯತ್ನವನ್ನು ಎಚ್. ಡಿ. ಕುಮಾರಸ್ವಾಮಿ ನಡೆಸದೆ ಕೆಲವರ ವಿರುದ್ಧ ಇನ್ನೂ ಸಿಟ್ಟಿನಲ್ಲಿರುವುದು ಎರಡನೇ ಹಂತದ ನಾಯಕರಿಗೆ ತಲೆನೋವಾಗಿದೆ. ಪ್ರತಿಷ್ಠೆ ಬಿಡದಿದ್ದರೆ ಪಕ್ಷಕ್ಕೆ ಧಕ್ಕೆಯಾಗಲಿದೆ ಹಾಗೂ ಇನ್ನಷ್ಟು ಮಂದಿ ಮನೆಯಿಂದ ಹೊರನಡೆಯುವ ಸಾಧ್ಯತೆಯನ್ನು ಅವರು ದೊಡ್ಡಗೌಡರ ಕಿವಿಗೆ ಹಾಕಿದ್ದಾರೆ. ಅದರಲ್ಲಿಯೂ ಮುಖ್ಯವಾಗಿ ಶಾಸಕ ಜಿ.ಟಿ.ದೇವೇಗೌಡರನ್ನು ಪಕ್ಷದಲ್ಲಿಯೇ ಉಳಿಸಿಕೊಳ್ಳಬೇಕಾದ ಅನಿವಾರ್ಯತೆಯನ್ನು ತಿಳಿಸಿದ್ದಾರೆ. ಗ್ರಾಮಾಂತರ ಪ್ರದೇಶದಲ್ಲಿ ಪ್ರಭಾವಿಯಾಗಿರುವ ಜಿ. ಟಿ. ದೇವೇಗೌಡರು ಇನ್ನೂ ಜೆಡಿಎಸ್‌ನಲ್ಲಿಯೇ ಇದ್ದಾರೆ. ಆದರೆ, ಅವರನ್ನು ಉಳಿಸಿಕೊಳ್ಳುವ ಪ್ರಯತ್ನವನ್ನು ಹಿರಿಯ ನಾಯಕರು ಮಾಡುತ್ತಿಲ್ಲ. ಅವರು ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಪಕ್ಷ ಬಿಟ್ಟು ಹೋದಲ್ಲಿ ಇಲ್ಲವೇ ಮತ್ತೆ ತಟಸ್ಥ ಧೋರಣೆ ಅನುಸರಿಸಿದಲ್ಲಿ ಪಕ್ಷಕ್ಕೆ ಭಾರೀ ಹೊಡೆತ ಬೀಳಲಿದೆ. ಇಂತಹ ಸಂದರ್ಭದಲ್ಲಿ ನಮ್ಮ ಪ್ರತಿಷ್ಠೆಗಿಂತ ಪಕ್ಷದ ಭವಿಷ್ಯದ ಅಡಿಪಾಯವಾಗಿರುವ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಲು ಅವರ ಅನಿವಾರ್ಯತೆ ಇದೆ ಎಂದು ಮನದಟ್ಟು ಮಾಡಿದ್ದಾರೆ. ದೊಡ್ಡಗೌಡರ ಸಂಧಾನ: ಈಗಾಗಲೇ ಜಿ. ಟಿ. ದೇವೇಗೌಡರೊಂದಿಗೆ ಜನ್ಮದಿನದ ಸಂದರ್ಭ ಎಚ್.ಡಿ.ದೇವೇಗೌಡರು ಮಾತುಕತೆ ನಡೆಸಿದ್ದಾರೆ. ಎಲ್ಲವನ್ನು ತಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಪಕ್ಷವನ್ನು ಬಿಡುವ ನಿರ್ಧಾರ ತೆಗೆದುಕೊಳ್ಳಬೇಡಿ. ಮತ್ತೆ ನಾವೆಲ್ಲರೂ ಒಂದಾಗಬೇಕಿದೆ. ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಪರ್ಯಾಯವಾಗಿ ರಾಜ್ಯದಲ್ಲಿ ಪಕ್ಷವನ್ನು ಮುಂಚೂಣಿಗೆ ತರಲು ಎಲ್ಲರೂ ಒಟ್ಟಾಗಬೇಕು ಎಂದು ಹೇಳಿದ್ದಾರೆ. ನಂತರದ ಬೆಳವಣಿಗೆಯಾಗಿ ದೊಡ್ಡಗೌಡರ ಆಪ್ತರಾಗಿರುವ ಗ್ರಾಮಾಂತರ ಜಿಲ್ಲಾಧ್ಯಕ್ಷ ನರಸಿಂಹ ಸ್ವಾಮಿ ಅವರು ಸಂಧಾನಕಾರರಾಗಿ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಪಕ್ಷದಲ್ಲಿಯೇ ಇರುವಂತೆ ಹಾಗೂ ಎಲ್ಲಾ ರೀತಿ ಗೌರವ ಸಿಗುವಂತೆ ದೊಡ್ಡಗೌಡರು ಮಾಡಲಿದ್ದಾರೆ ಎಂದು ಅವರ ಸಂದೇಶ ತಲುಪಿಸಿದ್ದಾರೆ.
from India & World News in Kannada | VK Polls https://ift.tt/3hwMLoq