ಮೈಸೂರಿನಲ್ಲಿ ಜೂನ್‌ ಮುಗಿದರೂ ಮಳೆಯ ದರ್ಶನವಿಲ್ಲ: ರೈತರಿಗೆ ಆತಂಕ ತಂದಿದೆ ವರುಣನ ಕಣ್ಣಾಮುಚ್ಚಾಲೆ..

ಮಣಿಕಂಠ ಸಿ.ಆರ್‌. ಚುಂಚನಕಟ್ಟೆ (): ಮಾನ್ಸೂನ್‌ ಎಂದರೆ ರೈತರೊಂದಿಗಿನ ಜೂಜಾಟ ಎಂಬ ಮಾತಿದೆ. ಅದರಂತೆ ಜೂನ್‌ ಮೊದಲ ವಾರದಲ್ಲೇ ಮುಂಗಾರು ಪ್ರವೇಶಿಸಿ ಉತ್ತಮ ಮಳೆಯಾಗುವುದು ಎಂಬ ರೈತರ ನಿರೀಕ್ಷೆ ಹುಸಿಯಾಗಿದೆ. ಮುಂಗಾರು ಹಂಗಾಮು ವಾಡಿಕೆ ಮಳೆ ಮಂಕಾಗಿದ್ದು, ರೈತರು ಆಕಾಶದತ್ತ ಮುಖ ಮಾಡಿ ವರುಣನಿಗಾಗಿ ಜಪಿಸುವಂತಾಗಿದೆ. ಕೆಲ ದಿನಗಳ ಹಿಂದೆ ಚುಂಚನಕಟ್ಟೆ ಹೋಬಳಿಯಲ್ಲಿ ಬಿಸಿಲಿಗೆ ಮೇವು, ನೀರಿಗೂ ಜನತೆ ಮತ್ತು ಜಾನುವಾರುಗಳು ನಲುಗಿ ಹೋಗಿದ್ದವು. ಅದರ ನಡುವೆ ಅಬ್ಬರದ ಮಳೆಯಿಂದಾಗಿ ಭೂಮಿಗೆ ತಂಪೆರೆದು ಆಶಾಭಾವನೆ ಮೂಡಿಸಿತ್ತು. ವಾಡಿಕೆಯಂತೆ ರೈತರು ಹೊಲ ಗದ್ದೆಗಳತ್ತ ಮುಖ ಮಾಡಿ ಗಿಡಗಂಟಿ, ಕಸ ಕಡ್ಡಿಗಳನ್ನು ತೆಗೆಯಲು ಟ್ರ್ಯಾಕ್ಟರ್‌ ಹಾಗೂ ಉಳುಮೆ ಮಾಡಿ ಭೂಮಿ ಹದಗೊಳಿಸುವಂತಹ ಚಟುವಟಿಕೆಯಲ್ಲಿ ನಿರತರಾಗಿದ್ದರು. ಮುಂಗಾರು ಮಳೆ ಉತ್ತಮವಾಗಿ ಸುರಿದರೆ ಬಿತ್ತನೆಗೆ ಸುಲಭವಾಗುತ್ತದೆ ಎಂಬ ಲೆಕ್ಕಾಚಾರ ರೈತರದ್ದಾಗಿದ್ದರೆ, ಮಳೆ ಆಶ್ರಿತ ಭೂಮಿಯಲ್ಲಿ ಕೆಲವರು ಈಗಾಗಲೇ ಬಿದ್ದ ಮಳೆಗೆ ಪರ್ಯಾಯ ಬೆಳೆಗಳಾದ ಮುಸುಕಿನ ಜೋಳ, ರಾಗಿ, ಕಬ್ಬು, ತಂಬಾಕು, ಅಲಸಂದೆ, ಕುಂಬಳ ಸೇರಿದಂತೆ ಇನ್ನಿತರ ಬಿತ್ತನೆ ಮಾಡಿದ್ದಾರೆ. ಆದರೆ ಇದೀಗ ಮಳೆ ಮಾಯವಾಗಿದ್ದು, ರೈತರನ್ನು ಚಿಂತೆಗೆ ದೂಡುವಂತೆ ಮಾಡಿದೆ. ಚಂಡಮಾರುತ: ಮೇ ತಿಂಗಳಲ್ಲಿ ತೌಕ್ಟೆ ಚಂಡಮಾರುತದಿಂದಾಗಿ ಆಗಾಗ ಪೂರ್ವ ಮುಂಗಾರಿನ ಮಳೆಯಿಂದಾಗಿ ಬರಗಾಲ ಹಾಗೂ ಕೊರೊನಾ ಲಾಕ್‌ಡೌನ್‌ನಿಂದ ತತ್ತರಿಸಿದ್ದ ಜನತೆಯಲ್ಲಿ ಒಂದಿಷ್ಟು ಸಂತಸ ತಂದಿತ್ತು. ಬತ್ತಿದ್ದ ನದಿ, ಕೆರೆಕಟ್ಟೆಗಳಲ್ಲಿ ಜೀವಕಳೆ ಬಂದಿತ್ತು. ಎಲ್ಲೆಡೆ ಮರ ಗಿಡಗಳು ಹಚ್ಚ ಹಸಿರಿನಿಂದ ಕಾಣುವಂತಾಗಿ ಪ್ರಾಣಿ ಪಕ್ಷಿಗಳು ಸೇರಿದಂತೆ ಜಾನುವಾರುಗಳಿಗೆ ಕುಡಿಯವ ನೀರು ಹಾಗೂ ಮೇವಿನ ಬರ ನೀಗಿಸಿತ್ತು. ರೈತರು ಕೂಡ ಹೊಲ ಗದ್ದೆಗಳ ಉಳುಮೆ ಸೇರಿದಂತೆ ಇನ್ನಿತರ ಸಕಲ ಸಿದ್ಧತೆ ಕಾರ್ಯ ಕೈಗೊಂಡಿದ್ದಾರೆ. ಮಳೆ ವಿಳಂಬ: ಜೂನ್‌ ಮೊದಲ ವಾರದಲ್ಲಿ ಮುಂಗಾರು ರಾಜ್ಯಕ್ಕೆ ಆಗಮಿಸಲಿದೆ ಎಂದು ಹೇಳಲಾಗಿತ್ತು. ಆರಂಭದಲ್ಲಿ ಮೋಡ ಕವಿದ ವಾತಾವರಣ, ತಣ್ಣನೆ ಗಾಳಿ ನೈರುತ್ಯ ಮಾನ್ಸೂನ್‌ ಮಾರುತಗಳ ಮುನ್ಸೂಚನೆಯನ್ನು ನೀಡಿತ್ತು. ಈ ಬಾರಿ ಉತ್ತಮ ಮುಂಗಾರು ಸುರಿಯಲಿದೆ ಎಂಬ ಹವಾಮಾನ ವರದಿ ರೈತರ ಮುಖದಲ್ಲಿ ಮಂದಹಾಸ ಮೂಡಿಸಿತ್ತು. ಅದರಂತೆ ಜೂನ್‌ ಮೊದಲ ವಾರ ಒಂದೆರಡು ದಿನ ಮಳೆ ಬಂದು ನಿರೀಕ್ಷೆಯನ್ನು ಹೆಚ್ಚುವಂತೆ ಮಾಡಿತ್ತು. ಆದರೀಗ ಜುಲೈ ತಿಂಗಳು ಬಂದರೂ ನಿರೀಕ್ಷಿತ ಮುಂಗಾರಿನ ಮಳೆಯ ದರ್ಶನವಿಲ್ಲದೆ ನದಿ, ಕೆರೆಕಟ್ಟೆಗಳಲ್ಲಿ ನೀರು ಬತ್ತಿವೆ. ಬೇಸಿಗೆ ಬಿಸಿಲಿನ ವಾತಾವರಣವಿದ್ದು, ಕೆಲವೊಮ್ಮೆ ತಣ್ಣನೆ ಗಾಳಿ, ಆಕಾಶದಲ್ಲಿ ಕಾರ್ಮೋಡ ಬಿಟ್ಟರೆ ಹೇಳಿಕೊಳ್ಳುವಂತಹ ಮಳೆ ತಾಲೂಕಿನಾದ್ಯಂತ ಆಗದಿರುವುದು ರೈತರಲ್ಲಿ ದಿಗಿಲು ಮೂಡಿಸಿದೆ. ಹಾಗಾಗಿ ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ರೈತರು ಮಳೆ ನಿರೀಕ್ಷೆಯಲ್ಲಿದ್ದಾರೆ. ಶೇ.24ರಷ್ಟು ಮಳೆ ಕೊರತೆ: ಜೂನ್‌ ತಿಂಗಳಲ್ಲಿ 62 ಮಿ.ಮೀ. ವಾಡಿಕೆ ಮಳೆ ಬರಬೇಕಿತ್ತು. ಆದರೆ 28.7 ಮಿ.ಮೀ. (ಶೇ.46ರಷ್ಟು) ಮಳೆಯಾಗಿದೆ. ಜತೆಗೆ ಜನವರಿಯಿಂದ ಇಲ್ಲಿವರೆಗೆ ಸುಮಾರು 254 ಮಿ.ಮೀ. ಮಳೆ ಆಗಬೇಕಿತ್ತು. ಆದರೆ 195 ಮಿ.ಮೀ. (ಶೇ.76ರಷ್ಟು) ಮಳೆಯಾಗಿದೆ. ಶೇ.24ರಷ್ಟು ಮಳೆ ಕೊರತೆಯಾಗಿದೆ. ಇನ್ನು ರೈತರಿಗೆ ಅಲಸಂದೆ, ಉದ್ದು, ಹೆಸರು ಬಿತ್ತನೆ ಬೀಜ ಈಗಾಗಲೇ ನೀಡಲಾಗಿದೆ. ರಾಗಿ ಮತ್ತು ಮುಸುಕಿನ ಜೋಳ ನೀಡಲಾಗುವುದು. ಜತೆಗೆ ಕಾಲುವೆಗಳಿಗೆ ನೀರು ಬಿಟ್ಟಾಗ ಭತ್ತ ವಿತರಿಸಲಾಗುವುದು ಎಂದು ಕೃಷಿ ಇಲಾಖೆ ಅಧಿಕಾರಿ ಪ್ರವೀಣ್‌ ತಿಳಿಸಿದರು.


from India & World News in Kannada | VK Polls https://ift.tt/3dGt3pc

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...