ಹೊಸದಿಲ್ಲಿ: ಶಿಕ್ಷಣ ಮತ್ತು ಉದ್ಯೋಗದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಿಗೆ (ಎಸ್‌ಇಬಿಸಿ) ಮೀಸಲಾತಿ ಘೋಷಿಸುವ ರಾಜ್ಯ ಸರಕಾರಗಳ ಅಧಿಕಾರವನ್ನು ಸಂವಿಧಾನದ 102ನೇ ತಿದ್ದುಪಡಿಯು ಹಿಂಪಡೆದಿದೆ ಎಂದು ನೀಡಲಾಗಿದ್ದ ತೀರ್ಪಿನ ಮರುಪರಿಶೀಲನೆಗಾಗಿ ಕೇಂದ್ರ ಸರಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ. ಮೇ 5ರ ತೀರ್ಪನ್ನು ಪರಿಶೀಲಿಸಲು ಕೋರಿ ಸಲ್ಲಿಕೆಯಾದ ಅರ್ಜಿಯಲ್ಲಿ ಉಲ್ಲೇಖಿತ ಆಧಾರಗಳು ವಿಚಾರಣೆಯನ್ನು ಕೈಗೆತ್ತಿಕೊಳ್ಳಲು ಸೂಕ್ತವಾಗಿಲ್ಲ. ಈಗಾಗಲೇ ಹಲವು ಆಯಾಮಗಳಲ್ಲಿ ವಿಚಾರಣೆ ನಡೆಸಿಯೇ ತೀರ್ಪು ನೀಡಲಾಗಿದೆ. ಇವುಗಳ ಹೊರತಾಗಿ ಹೊಸ ಆಯಾಮದಲ್ಲಿ ಪರಿಶೀಲನೆಗೆ ಮನವಿ ಬಂದಿಲ್ಲ ಎಂದು ನ್ಯಾ.ಅಶೋಕ್ ಭೂಷಣ್ ಅವರ ನೇತೃತ್ವದ ಪಂಚಸದಸ್ಯ ನ್ಯಾಯಪೀಠವು ಗುರುವಾರ ಹೇಳಿದೆ. ಇದೇ ವಿಚಾರಕ್ಕೆ ಸಂಬಂಧಿಸಿ ತೆರೆದ ಕೋರ್ಟ್‌ನಲ್ಲಿ ವಿಚಾರಣೆ ನಡೆಸುವಂತೆಯೂ ಕೋರಿ ಸಲ್ಲಿಸಲಾಗಿದ್ದ ಕೇಂದ್ರ ಸರಕಾರದ ಮತ್ತೊಂದು ಅರ್ಜಿಯನ್ನು ಕೂಡ ಕೋರ್ಟ್ ತಿರಸ್ಕರಿಸಿದೆ. ಮರಾಠ ಸಮುದಾಯಕ್ಕೆ ಮೀಸಲು ಘೋಷಿಸಿದ ಮಹಾರಾಷ್ಟ್ರ ಸರಕಾರದ ನೂತನ ಕಾನೂನು ಸರಿ ಇಲ್ಲ ಎಂದಿದ್ದ ಸುಪ್ರೀಂ ಕೋರ್ಟ್, 1992ರ ಮಂಡಲ್ ತೀರ್ಪನ್ನು ಹೆಚ್ಚು ಸದಸ್ಯರ ನ್ಯಾಯಪೀಠಕ್ಕೆ ವರ್ಗಾಯಿಸುವುದಕ್ಕೂ ಒಪ್ಪಿರಲಿಲ್ಲ.
from India & World News in Kannada | VK Polls https://ift.tt/36lSzMp