ಬೆಂಗಳೂರು: ಶಬ್ದ ಮಾಲಿನ್ಯ(ನಿಯಂತ್ರಣ ನಿಯಮ) ಅಧಿನಿಯಮ ಜಾರಿಗೊಳಿಸಬೇಕು ಮತ್ತು ನಿಯಮ ಉಲ್ಲಂಘಿಸಿದವರ ವಿರುದ್ಧ ಪರಿಸರ ಸಂರಕ್ಷಣಾ ಕಾಯಿದೆ-1986ರ ಸೆಕ್ಷನ್ 15ರಡಿ ದೂರು ದಾಖಲಿಸಬೇಕು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ನಗರ ವ್ಯಾಪ್ತಿಯ ಎಲ್ಲಾ ಪೊಲೀಸ್ ಠಾಣೆಗಳ ಇನ್ಸ್‌ಪೆಕ್ಟರ್‌ಗಳಿಗೆ ಸೂಚನೆ ನೀಡಿದ್ದಾರೆ. ಈ ಕುರಿತು ಹೈಕೋರ್ಟ್‌ಗೆ ಶುಕ್ರವಾರ ಪ್ರಮಾಣಪತ್ರ ಸಲ್ಲಿಸಲಾಗಿದೆ. ಸುಪ್ರೀಂಕೋರ್ಟ್ ಮಾರ್ಗಸೂಚಿಗಳನ್ವಯ ಧಾರ್ಮಿಕ ಕೇಂದ್ರಗಳಲ್ಲಿಅನಧಿಕೃತವಾಗಿ ಧ್ವನಿವರ್ಧಕ ಬಳಸಿ ಶಬ್ದ ಮಾಲಿನ್ಯ ಮಾಡುತ್ತಿರುವವರ ವಿರುದ್ಧ ಕ್ರಮ ಜರುಗಿಸುವಂತೆ ಗಿರೀಶ್ ಭಾರದ್ವಾಜ್ ಸಲ್ಲಿಸಿದ್ದ ಪಿಐಎಲ್ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ್ ನೇತೃತ್ವದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ನ್ಯಾಯಾಲಯದ ನಿರ್ದೇಶನದಂತೆ ಪ್ರಮಾಣಪತ್ರ ಸಲ್ಲಿಸಿದ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ''ಶಬ್ದ ಮಾಲಿನ್ಯ ಉಂಟು ಮಾಡಿದ ನಗರದ 8 , ಒಂದು ಮತ್ತು ಮೂರು ದೇವಸ್ಥಾನಗಳ ವಿರುದ್ಧ ಆಯಾ ವಿಭಾಗದ ಎಸಿಪಿ ಕಾನೂನು ಕ್ರಮ ಜರುಗಿಸಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ನೋಡಿಕೊಳ್ಳುವ ನಗರದ ಎಲ್ಲ ಪೊಲೀಸ್ ಠಾಣೆಗಳಿಗೆ ಶಬ್ದ ಮಾಲಿನ್ಯ ಅಳೆಯುವ ಮಾಪಕ ಒದಗಿಸಲಾಗಿದೆ,'' ಎಂದು ಮಾಹಿತಿ ನೀಡಿದರು. ''ಅಲ್ಲದೆ, ಶಬ್ದ ಮಾಲಿನ್ಯ ಪ್ರಮಾಣ ಅಳತೆ ಮಾಡಿ ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಕ್ರಮ ಜರುಗಿಸಲು ಸೂಚನೆ ನೀಡಲಾಗಿದೆ. ಪೊಲೀಸ್ ಠಾಣೆಗಳಿಗೆ ಒದಗಿಸಲಾಗಿರುವ ಎಲ್ಲಾ ಮಾಪಕಗಳು ಕಾರ್ಯನಿರ್ವಹಣೆ ಸ್ಥಿತಿಯಲ್ಲಿವೆ. ಅವುಗಳನ್ನು ಬಳಸುವ ಪೊಲೀಸರಿಗೆ ತರಬೇತಿ ನೀಡಲಾಗಿದೆ. ಶಬ್ದ ಮಾಲಿನ್ಯ(ನಿಯಂತ್ರಣ ನಿಯಮ) ಅಧಿನಿಯಮ-2000 ಜಾರಿಗೆ ತರಬೇಕು,'' ಎಂದು ಸೂಚಿಸಿರುವುದಾಗಿ ಹೇಳಿದ್ದಾರೆ. ಕ್ಷಮೆ ಕೋರಿದ ಆಯುಕ್ತರು ''ಇದಲ್ಲದೆ, ನಿಯಮಗಳನ್ನು ಉಲ್ಲಂಘಿಸಿದವರ ವಿರುದ್ಧ ಪರಿಸರ ಸಂರಕ್ಷಣಾ ಕಾಯಿದೆ-1986ರ ಸೆಕ್ಷನ್ 15ರಡಿ ದೂರು ದಾಖಲಿಸಬೇಕು ಎಂದು ನಗರ ವ್ಯಾಪ್ತಿಯ ಎಲ್ಲಾ ಪೊಲೀಸ್ ಠಾಣೆಗಳ ಇನ್ಸ್‌ಪೆಕ್ಟರ್‌ಗಳಿಗೆ ಸೂಚನೆ ನೀಡಲಾಗಿದೆ,'' ಎಂದು ತಿಳಿಸಿರುವ ನಗರ ಪೊಲೀಸ್ ಆಯುಕ್ತರು, ಗುಪ್ತಚರ ವಿಭಾಗದ ಡಿಸಿಪಿಯ ನಡವಳಿಕೆಗೆ ಕ್ಷಮೆ ಕೋರಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ''ಪ್ರಮಾಣ ಪತ್ರದಲ್ಲಿ ನಗರದ ಪೊಲೀಸ್ ಠಾಣೆಗೆಳಿಗೆ ಎಷ್ಟು ಮಾಪಕಗಳ ಅಗತ್ಯವಿದೆ ಎಂಬ ಬಗ್ಗೆ ಮಾಹಿತಿ ನೀಡಿಲ್ಲ. ಮುಂದಿನ ವಿಚಾರಣೆ ವೇಳೆ ಈ ಕುರಿತು ಮಾಹಿತಿ ನೀಡಿ ಪ್ರಮಾಣ ಪತ್ರ ಸಲ್ಲಿಸಬೇಕು,'' ಎಂದು ನಗರ ಪೊಲೀಸ್ ಆಯುಕ್ತರಿಗೆ ಸೂಚಿಸಿ ವಿಚಾರಣೆ ಮುಂದೂಡಿತು. ಕಳೆದ ವಿಚಾರಣೆ ವೇಳೆ ನಗರ ಪೊಲೀಸ್ ಆಯುಕ್ತರ ಕಚೇರಿಯ ಗುಪ್ತಚರ ವಿಭಾಗದ ಡಿಸಿಪಿ ಪ್ರಮಾಣ ಪತ್ರ ಸಲ್ಲಿಸಿ, ''ಶಬ್ದಮಾಲಿನ್ಯ ಉಂಟು ಮಾಡಿದ 12 ಧಾರ್ಮಿಕ ಕೇಂದ್ರಗಳ ಸ್ಥಳ ಪರಿಶೀಲಿಸಲಾಯಿತು. ಅವುಗಳ ಉಸ್ತುವಾರಿಗಳಿಗೆ ಮಾಲಿನ್ಯ ಉಂಟು ಮಾಡದಂತೆ ಸೂಚಿಸಲಾಗಿದೆ. ಪ್ರಸ್ತುತ ಸನ್ನಿವೇಶಕ್ಕೆ ಪರಿಗಣಿಸಿ ಶಬ್ದ ಮಾಲಿನ್ಯ ಕಾಯಿದೆ ನಿಯಮಗಳನ್ನು ಮರು ಪರಿಶೀಲಿಸುವ ಅಗತ್ಯವಿದೆ,'' ಎಂದು ಹೈಕೋರ್ಟ್‌ಗೆ ತಿಳಿಸಿದ್ದರು. ಅದನ್ನು ತೀವ್ರವಾಗಿ ಆಕ್ಷೇಪಿಸಿದ್ದ ನ್ಯಾಯಪೀಠ, ''ದೂರು ಪರಿಶೀಲಿಸಿ ಕಾನೂನು ಪ್ರಕಾರ ಕ್ರಮ ಜರುಗಿಸದೆ ಧಾರ್ಮಿಕ ಕೇಂದ್ರಗಳ ಉಸ್ತುವಾರಿಗಳಿಗೆ ಶಬ್ದ ಮಾಲಿನ್ಯ ಉಂಟು ಮಾಡದಂತೆ ಸೂಚಿಸಿರುವುದು ಮತ್ತು ಶಬ್ದ ಮಾಲಿನ್ಯ ನಿಯಮಗಳನ್ನು ಪರಿಶೀಲಿಸುವ ಅಗತ್ಯವಿದೆ ಎಂದು ಡಿಸಿಪಿ ಹೇಳಿರುವುದು ಸರಿಯಲ್ಲ. ಆದ್ದರಿಂದ ಡಿಸಿಪಿ ಪ್ರಮಾಣ ಪತ್ರಕ್ಕೆ ವಿವರಣೆ ನೀಡಿ ನಗರ ಪೊಲೀಸ್ ಆಯುಕ್ತರು ವೈಯಕ್ತಿಕ ಪ್ರಮಾಣ ಪತ್ರ ಸಲ್ಲಿಸಬೇಕು,'' ಎಂದು ಆದೇಶಿಸಿತ್ತು. ನ್ಯಾಯಾಂಗ ನಿಂದನೆ ಎಚ್ಚರಿಕೆ ''ಶಬ್ದ ಮಾಲಿನ್ಯ ಸಂಬಂಧ ಬಂದಿದ್ದ ದೂರುಗಳನ್ನು ಪರಿಶೀಲಿಸಿ ಕ್ರಿಮಿನಲ್ ಪ್ರಕರಣ ದಾಖಲಿಸುವ ಬದಲು ನಗರ ಪೊಲೀಸ್ ಆಯುಕ್ತರು ಮತ್ತು ಬಿಬಿಎಂಪಿ ಆಯುಕ್ತರಿಗೆ ದೂರುಗಳನ್ನು ರವಾನಿಸುವ ಮೂಲಕ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ(ಕೆಪಿಎಸ್‌ಪಿಸಿ) ಪರಿಸರ ಅಧಿಕಾರಿ ಪೋಸ್ಟ್‌ಮ್ಯಾನ್ ರೀತಿ ನಡೆದುಕೊಂಡಿದ್ದಾರೆ,'' ಎಂದು ನ್ಯಾಯಪೀಠ ತರಾಟೆಗೆ ತೆಗೆದುಕೊಂಡಿತು. ''ಅಲ್ಲದೆ, ಅವರ ನಡಾವಳಿ ಮತ್ತು ಕೆಎಸ್‌ಪಿಸಿಬಿಗೆ ಬಂದಿದ್ದ ದೂರುಗಳ ಸಂಬಂಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ ಎಂಬುದನ್ನು ಪರಿಶೀಲಿಸಿ ಪ್ರಮಾಣ ಪತ್ರ ಸಲ್ಲಿಸುವಂತೆ ಏ.19ರಂದು ಮಂಡಳಿಯ ಮುಖ್ಯಸ್ಥರಿಗೆ ನ್ಯಾಯಾಲಯ ನಿರ್ದೇಶಿಸಿತ್ತು. ಆದರೆ, ಮುಖ್ಯಸ್ಥರು ಪ್ರಮಾಣಪತ್ರ ಸಲ್ಲಿಸಿಲ್ಲ. ಹಾಗಾಗಿ, ಎರಡು ವಾರಗಳಲ್ಲಿ ಪ್ರಮಾಣಪತ್ರ ಸಲ್ಲಿಸಬೇಕು. ತಪ್ಪಿದರೆ ಮುಖ್ಯಸ್ಥರ ವಿರುದ್ಧ ಸಿವಿಲ್ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಾಗುವುದು,'' ಎಂದು ನ್ಯಾಯಪೀಠ ಎಚ್ಚರಿಕೆ ನೀಡಿದೆ.
from India & World News in Kannada | VK Polls https://ift.tt/2V7ODwp