ವಯನಾಡ್: ಕೇರಳದ ಪಶು ವೈದ್ಯರೊಬ್ಬರು ಕೋಳಿ ಮಾಂಸದ ತ್ಯಾಜ್ಯದಿಂದ ಲೀಟರ್‌ಗೆ 38 ಕಿ.ಮೀ ಮೈಲೇಜ್ ನೀಡುವ ಬಯೋ ಡೀಸೆಲ್ ಸಂಶೋಧಿಸಿದ್ದಾರೆ. ಸುಮಾರು 7 ವರ್ಷಗಳ ಕಾಯುವಿಕೆ ಬಳಿಕ ಅದಕ್ಕೆ ಪೇಟೆಂಟ್ ಸಹ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಡೀಸೆಲ್ ಪ್ರಸ್ತುತ ಡೀಸೆಲ್‌ಗಿಂತಲೂ ಶೇ. 40ರಷ್ಟು ಅಗ್ಗವಾಗಿದ್ದು, ವಾಯು ಮಾಲಿನ್ಯ ಸಹ ಅರ್ಧಕ್ಕರ್ಧ ಕಡಿಮೆ ಎಂದು ಜಾನ್ ಅಬ್ರಹಾಂ ಹೇಳಿದ್ದಾರೆ. ಅವರು ಕೇರಳ ಪಶುವೈದ್ಯಕೀಯ ಮತ್ತು ಪಶು ವಿಜ್ಞಾನ ವಿಶ್ವವಿದ್ಯಾಲಯದಲ್ಲಿಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2009-12ರ ಅವಧಿಯಲ್ಲಿ ಅಬ್ರಹಾಂ ಅವರು ಬ್ರಾಯ್ಲರ್ ಕೋಳಿಯ ಕತ್ತರಿಸಿದ ತ್ಯಾಜ್ಯ ಮತ್ತು ಮೃತ ಪಕ್ಷಿಗಳಿಂದ ಡೀಸೆಲ್ ಸಂಶೋಧನೆ ನಡೆಸಿದರು. ಆದರೆ, ಬಯೋ ಡೀಸೆಲ್ ಉತ್ಪಾದನೆಗೆ ಬಳಸಲಾದ ಉತ್ಪನ್ನವು ಸ್ಥಳೀಯ ಮೂಲದ್ದಾದ್ದರಿಂದ ಪೇಟೆಂಟ್ ಪಡೆಯಲು 'ರಾಷ್ಟ್ರೀಯ ಜೀವ ವೈವಿಧ್ಯ ಪ್ರಾಧಿಕಾರ'ದಿಂದ ಅನುಮತಿ ಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ಪೇಟೆಂಟ್‌ಗಾಗಿ ಅರ್ಜಿ ಸಲ್ಲಿಸಿ ಹಲವು ವರ್ಷಗಳು ಕಾಯಬೇಕಾಯಿತು ಎಂದು ಅವರು ತಿಳಿಸಿದ್ದಾರೆ. ವಯನಾಡಿನ ಕಲ್ಪೆಟ್ಟ ಬಳಿ ಪೂಕೊಡೆ ಪಶುವೈದ್ಯ ಕಾಲೇಜಿನಲ್ಲಿ ಅಬ್ರಹಾಂ 2014ರಲ್ಲೇ 18 ಲಕ್ಷ ರೂ. ವೆಚ್ಚದಲ್ಲಿ ಪ್ರಾಯೋಗಿಕವಾಗಿ ಉತ್ಪಾದನಾ ಘಟಕವನ್ನು ಆರಂಭಿಸಿದ್ದರು. ಈ ಯೋಜನೆಗೆ ಅವರು ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಆರ್ಥಿಕ ನೆರವನ್ನು ಪಡೆದಿದ್ದರು. 2015ರ ಏಪ್ರಿಲ್‌ನಲ್ಲಿ ಕೊಚ್ಚಿಯ ಭಾರತ್ ಪೆಟ್ರೋಲಿಯಂ ಸಂಸ್ಕರಣಾ ಘಟಕವು ಅಬ್ರಾಹಂ ಅವರು ಸಂಶೋಧಿಸಿದ ಡೀಸೆಲ್‌ಗೆ ಗುಣಮಟ್ಟದ ಪ್ರಮಾಣ ಪತ್ರ ನೀಡಿತ್ತು. ಕಾಲೇಜಿನ ಬಸ್ಸೊಂದಕ್ಕೆ ಇದೇ ಡೀಸೆಲ್ ಬಳಸಲಾಗುತ್ತಿತ್ತು. ಪಕ್ಷಿಗಳು ಮತ್ತು ಹಂದಿಗಳ ಮಾಂಸದಲ್ಲಿ ಕೊಬ್ಬಿನ ಅಂಶ ಹೆಚ್ಚಾಗಿರುವ ಕಾರಣ, ಅವುಗಳಿಂದ ತೈಲವನ್ನು ತೆಗೆಯುವುದು ಸುಲಭ ಎಂದು ಅಬ್ರಾಹಂ ಕೋಳಿ ಮಾಂಸ ಆಯ್ಕೆಗೆ ಕಾರಣ ನೀಡಿದ್ದರೆ. ಅಬ್ರಹಾಂ ಅವರ ಮೂವರು ವಿದ್ಯಾರ್ಥಿಗಳು ಈಗಾಗಲೇ ಹಂದಿ ಮಾಂಸದಿಂದಲೂ ಡೀಸೆಲ್ ಉತ್ಪಾದಿಸುವ ಪ್ರಯೋಗದಲ್ಲಿ ತೊಡಗಿದ್ದಾರೆ.
from India & World News in Kannada | VK Polls https://ift.tt/3kVEYDK