ತುಮಕೂರು: ಆಕಸ್ಮಿಕವಾಗಿ ಬಾವಿಗೆ ಬಿದ್ದ ತನ್ನ ಇಬ್ಬರು ಮಕ್ಕಳನ್ನು ರಕ್ಷಿಸಲು ಮುಂದಾದ ತಾಯಿಯೂ ಸಾವನ್ನಪ್ಪಿದ್ದಾರೆ. ತಾಲೂಕಿನ ಕೋರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿಗುರುವಾರ ಈ ದುರ್ಘಟನೆ ನಡೆದಿದೆ. ತಾಲೂಕಿನ ತುಳಸಿಪುರ ಗ್ರಾಮದ ಸಮೀಪವಿರುವ ತಿರುಮಲಪಾಳ್ಯದ ವಾಸಿ ಕುಮಾರ್ ಎಂಬುವವರ ಪತ್ನಿ ಹೇಮಲತಾ(34) ಹಾಗೂ ಮಕ್ಕಳಾದ ಮಾನಸಾ(6) ಮತ್ತು ಪೂರ್ವಿಕಾ(3) ಎಂಬುವರೇ ಬಾವಿಗೆ ಬಿದ್ದು ಸಾವನ್ನಪ್ಪಿರುವ ದುರ್ದೈವಿಗಳು. ಹುಣ್ಣಿಮೆ ದಿನವಾದ ಪ್ರಯುಕ್ತ ತೋಟಕ್ಕೆ ಮೊಸರನ್ನ ಎಡೆ ಇಡಲೆಂದು ಹೋಗಿದ್ದ ಸಂದರ್ಭದಲ್ಲಿ ಮಗಳು ಮಾನಸ, ಬಾವಿಯ ದಡದಲ್ಲಿದ್ದ ಸೀಬೆ ಹಣ್ಣಿನ ಮರದಿಂದ ಹಣ್ಣು ಕೀಳಲು ಹೋಗಿ ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದಾಳೆ. ಇದೇ ವೇಳೆ ಜತೆಯಲ್ಲಿದ್ದ ಮತ್ತೊಂದು ಮಗು ಪೂರ್ವಿಕಾಳು ಸಹ ಅಕ್ಕನಂತೆಯೇ ಬಾವಿಗೆ ಬಿದ್ದಿದ್ದಾಳೆ. ತನ್ನ ಇಬ್ಬರು ಮಕ್ಕಳು ಬಾವಿಗೆ ಬಿದ್ದಿದ್ದನ್ನು ನೋಡಿದ ಹೇಮಲತಾ, ಮಕ್ಕಳನ್ನು ರಕ್ಷಿಸಲೆಂದು ಬಾವಿಗೆ ಹಾರಿದ್ದಾರೆ. ದುರದೃಷ್ಟವಶಾತ್ ತಾಯಿ ಮತ್ತು ಇಬ್ಬರು ಮಕ್ಕಳು ಬಾವಿಯಿಂದ ಮೇಲೆ ಬರಲು ಸಾಧ್ಯವಾಗದೆ ಸಾವನ್ನಪ್ಪಿದ್ದಾರೆ.
from India & World News in Kannada | VK Polls https://ift.tt/3dahCWc