ಹೊಸದಿಲ್ಲಿ: ನ್ಯೂಜಿಲೆಂಡ್ ವಿರುದ್ಧ ಉದ್ಘಾಟನಾ ಆವೃತ್ತಿಯ ಹಣಾಹಣಿಯಲ್ಲಿ ಭಾರತ ತಂಡದ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಪಿನ್ ಆಲ್‌ರೌಂಡರ್ ಬದಲು ವೇಗದ ಬೌಲಿಂಗ್ ಆಲ್‌ರೌಂಡರ್ ಶಾರ್ದುಲ್ ಠಾಕೂರ್‌ಗೆ ಅವಕಾಶ ನೀಡಬೇಕಾಗಿತ್ತೆಂದು ಪಾಕಿಸ್ತಾನದ ಮಾಜಿ ವೇಗಿ ಅಕಿಬ್ ಜಾವೆದ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬುಧವಾರ ಅಂತ್ಯವಾಗಿದ್ದ ಪಂದ್ಯದಲ್ಲಿ ಎಂಟು ವಿಕೆಟ್‌ಗಳ ಗೆಲುವು ಪಡೆಯುವ ಮೂಲಕ ಕೇನ್ ವಿಲಿಯಮ್ಸನ್ ನಾಯಕತ್ವದ ನ್ಯೂಜಿಲೆಂಡ್ ತಂಡ, ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್ಸ್ ಆಗುವ ಮೂಲಕ ಐತಿಹಾಸಿಕ ಸಾಧನೆ ಮಾಡಿತು. ಆದರೆ, ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿದ ಟೀಮ್ ಇಂಡಿಯಾ ರನ್ನರ್ ಅಪ್‌ಗೆ ತೃಪ್ತಿಪಟ್ಟುಕೊಂಡಿತು. ಪಾಕಿಸ್ತಾನದ ತಂಡದ ಮಾಜಿ ಬ್ಯಾಟ್ಸ್‌ಮನ್ ಸಲ್ಮಾನ್ ಬಟ್ ಅವರ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಮಾಜಿ ವೇಗಿ ಅಕಿಬ್ ಜಾವೆದ್ ಭಾರತ ತಂಡದ ಪ್ಲೇಯಿಂಗ್ ಇಲೆವೆನ್ ಬಗ್ಗೆ ಚರ್ಚೆ ನಡೆಸಿದರು. ಡಬ್ಲ್ಯುಟಿಸಿ ಫೈನಲ್ ಹಣಾಹಣಿಯಲ್ಲಿ ಸ್ಪಿನ್ ಆಲ್‌ರೌಂಡರ್ ರವೀಂದ್ರ ಜಡೇಜಾ ಬದಲು, ಸೀಮ್ ಬೌಲಿಂಗ್ ಆಲ್‌ರೌಂಡರ್ ಶಾರ್ದುಲ್ ಠಾಕೂರ್‌ಗೆ ಅವಕಾಶ ನೀಡಬೇಕಾಗಿತ್ತು ಎಂದು ಹೇಳಿದರು. "ರವೀಂದ್ರ ಜಡೇಜಾ ಬದಲು ಸೀಮ್ ಬೌಲಿಂಗ್ ಆಲ್‌ರೌಂಡರ್ ತಂಡದ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶ ನೀಡಿದ್ದರೆ, ಟೀಮ್ ಇಂಡಿಯಾಗೆ ಹೆಚ್ಚುವರಿ ಲಾಭವಾಗುತ್ತಿತ್ತು. ಆದರೆ, ವಿದೇಶಿ ಬ್ಯಾಟ್ಸ್‌ಮನ್‌ಗಳು ಸ್ಪಿನ್‌ಗೆ ಆಡುವುದಿಲ್ಲ ಎಂಬುದು ಭಾರತ ಹಾಗೂ ಪಾಕಿಸ್ತಾನ ತಂಡಗಳ ಸಾಮಾನ್ಯ ತಂತ್ರವಾಗಿದೆ. ಆರ್ ಅಶ್ವಿನ್ ಅವರ ಜೊತೆಗೆ ಸೀಮ್ ಬೌಲಿಂಗ್ ಆಲ್‌ರೌಂಡರ್ ಶಾರ್ದುಲ್ ಠಾಕೂರ್ ಆಡಿಸಿದ್ದರೆ ಖಂಡಿತಾ ಭಾರತ ಮುನ್ನಡೆ ಸಾಧಿಸುತ್ತಿತ್ತು," ಎಂದು ಜಾವೆದ್ ಅಭಿಪ್ರಾಯ ವ್ಯಕ್ತಪಡಿಸಿದರು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಭಾರತ ತಂಡ ಪ್ರಥಮ ಇನಿಂಗ್ಸ್‌ನಲ್ಲಿ ಒಂದು ಹಂತದಲ್ಲಿ 146 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿತ್ತು . ಆದರೆ, ಕಿವೀಸ್ ವೇಗಿಗಳ ಮಾರಕ ದಾಳಿಗೆ 217 ರನ್‌ಗಳಿಗೆ ಆಲೌಟ್ ಆಯಿತು. ಟ್ರೆಂಟ್ ಬೌಲ್ಟ್‌ಗೆ ಜಡೇಜಾ ಔಟ್ ಆಗುವುದಕ್ಕೂ ಮುನ್ನ 53 ಎಸೆತಗಳಲ್ಲಿ ಕೇವಲ 15 ರನ್ ಗಳಿಸಿದ್ದರು. ನಂತರ ಬೌಲಿಂಗ್‌ನಲ್ಲಿಯೂ ಜಡೇಜಾ ಹೇಳಿಕೊಳ್ಳುವಂತಹ ಪ್ರದರ್ಶನ ತೋರಲಿಲ್ಲ. ಹಾಕಿದ 7. ಓವರ್‌ಗಳಿಗೆ 20 ರನ್ ನೀಡಿ ಒಂದು ವಿಕೆಟ್ ಪಡದಿದ್ದರು. ಆದರೆ, ವೇಗಿ ಮೊಹಮ್ಮದ್ ಶಮಿ ನಾಲ್ಕು ವಿಕೆಟ್ ಪಡೆಯುವ ಮೂಲಕ ನ್ಯೂಜಿಲೆಂಡ್ ತಂಡವನ್ನು 249 ರನ್‌ಗಳಿಗೆ ಆಲೌಟ್ ಮಾಡಲು ಭಾರತಕ್ಕೆ ನೆರವಾದರು. ಪ್ರಥಮ ಇನಿಂಗ್ಸ್‌ನಲ್ಲಿ 32 ರನ್ ಹಿನ್ನೆಡೆ ಅನುಭವಿಸಿದ್ದ ಭಾರತ ತಂಡ ದ್ವಿತೀಯ ಇನಿಂಗ್ಸ್‌ನಲ್ಲಿ 170 ರನ್‌ಗಳಿಗೆ ಆಲೌಟ್ ಆಯಿತು. ಆ ಮೂಲಕ ನ್ಯೂಜಿಲೆಂಡ್ ತಂಡಕ್ಕೆ 139 ರನ್ ಸಾಧಾರಣ ಗುರಿ ನೀಡಿತು. ಟಿಮ್ ಸೌಥಿ ಅತ್ಯುತ್ತಮವಾಗಿ ಬೌಲ್ ಮಾಡಿ 4 ವಿಕೆಟ್‌ಗಳನ್ನು ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರು. 41 ರನ್ ಗಳಿಸಿದ ರಿಷಭ್ ಪಂತ್ ದ್ವಿತೀಯ ಇನಿಂಗ್ಸ್‌ನಲ್ಲಿ ಭಾರತದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಆದರೆ, ರವೀಂದ್ರ ಜಡೇಜಾ 49 ಎಸೆತಗಳಲ್ಲಿ ಕೇವಲ 16 ರನ್‌ಗಳಿಗೆ ಸುಸ್ತಾದರು. ಇನ್ನು ಬೌಲಿಂಗ್‌ನಲ್ಲಿ ಹಾಕಿದ ಎಂಟು ಓವರ್‌ಗಳಲ್ಲಿ 25 ರನ್ ನೀಡಿದ ಜಡ್ಡು, ಒಂದೂ ವಿಕೆಟ್ ಪಡೆದಿರಲಿಲ್ಲ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3gUgYgM