ಹೊಸದಿಲ್ಲಿ: ಸಂಕಷ್ಟದ ವಿರುದ್ಧದ ಹೋರಾಟಕ್ಕೆ ವೈದ್ಯಕೀಯ ವಿದ್ಯಾರ್ಥಿಗಳನ್ನು ಬಳಸಿಕೊಳ್ಳುವ ಸಾಧ್ಯತೆ ಇದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಹೆಚ್ಚುತ್ತಿರುವ ಕೊವಿಡ್ ಪ್ರಕರಣಗಳು ಮತ್ತು ಆರೋಗ್ಯ ವ್ಯವಸ್ಥೆಯಲ್ಲಿನ ಸಮಸ್ಯೆಗಳ ಕುರಿತು ಪರಾಮರ್ಶೆ ನಡೆಸಲು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಸಭೆ ನಡೆಸಿದ ಬಳಿಕ ಈ ಹೇಳಿಕೆ ಹೊರಬಂದಿದೆ. ದೇಶದಲ್ಲಿ ಕೋವಿಡ್ ಸಾಂಕ್ರಾಮಿಕ ನಿಯಂತ್ರಣಕ್ಕಾಗಿ ಮಾನವ ಸಂಪನ್ಮೂಲದ ಸಮರ್ಪಕ ಬಳಕೆಗೆ ವಿವಿಧ ಮಾರ್ಗಗಳ ಬಗ್ಗೆ ಪ್ರಧಾನಿ ಮೋದಿ ಸಮಾಲೋಚನೆ ನಡೆಸಿದರು. ವಿದ್ಯಾರ್ಥಿಗಳು ಹಾಗೂ ವೈದ್ಯಕೀಯ ಮತ್ತು ನರ್ಸಿಂಗ್ ಕೋರ್ಸ್‌ಗಳಿಂದ ಉತ್ತೀರ್ಣರಾದವರನ್ನು ಸೂಕ್ತ ಅನುದಾನ ನೀಡುವ ಮೂಲಕ ಕೋವಿಡ್ ಕರ್ತವ್ಯಗಳಿಗೆ ಸೇರಿಸಿಕೊಳ್ಳುವ ಸಂಬಂಧ ಸಭೆಯಲ್ಲಿ ವಿವಿಧ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಈ ಕುರಿತಾದ ವಿವರಗಳು ಸೋಮವಾರ ಲಭ್ಯವಾಗಲಿವೆ ಎಂದು ಮೂಲಗಳು ತಿಳಿಸಿವೆ. 'ನೀಟ್ ಪರೀಕ್ಷೆ ಬರೆಯಬೇಕಿರುವ ಮತ್ತು ಎಂಬಿಬಿಎಸ್ ತೇರ್ಗಡೆಯಾದ ವಿದ್ಯಾರ್ಥಿಗಳನ್ನು ಕೋವಿಡ್ ಕರ್ತವ್ಯಕ್ಕೆ ಬಳಸಿಕೊಳ್ಳಬಹುದು. ಅಲ್ಲದೆ, ಅಂತಿಮ ವರ್ಷದ ಎಂಬಿಬಿಎಸ್ ಹಾಗೂ ನರ್ಸಿಂಗ್ ವಿದ್ಯಾರ್ಥಿಗಳ ಸೇವೆಯನ್ನು ಉಪಯೋಗಿಸುವಂತೆಯೂ ನಿರ್ಧಾರ ತೆಗೆದುಕೊಳ್ಳುವ ನಿರೀಕ್ಷೆಯಿದೆ. ಕೋವಿಡ್ ಕರ್ತವ್ಯದಲ್ಲಿರುವ ವೈದ್ಯಕೀಯ ಸಿಬ್ಬಂದಿಗೆ ಸರ್ಕಾರದ ನೇಮಕಾತಿಯ ಹಾಗೂ ಆರ್ಥಿಕ ಅನುದಾನದಲ್ಲಿ ಆದ್ಯತೆ ನೀಡಲಾಗುತ್ತದೆ' ಎಂದು ಹೇಳಲಾಗಿದೆ. ಕೋವಿಡ್ ಪ್ರಕರಣಗಳ ಏರಿಕೆ ಒಂದೆಡೆಯಾದರೆ, ವೈದ್ಯಕೀಯ ಸವಲತ್ತುಗಳ ಕೊರತೆ ಇನ್ನೊಂದೆಡೆ ತೀವ್ರವಾಗಿ ಬಾಧಿಸುತ್ತಿರುವುದರಿಂದ ವೈದ್ಯಕೀಯ ಸಿಬ್ಬಂದಿ, ರೋಗಿಗಳಿಗೆ ಸೂಕ್ತ ಚಿಕಿತ್ಸೆ ಒದಗಿಸಲಾಗದೆ ಹೈರಾಣಾಗುತ್ತಿದ್ದಾರೆ. ಅನೇಕ ವೈದ್ಯಕೀಯ ಸಿಬ್ಬಂದಿ ಕೂಡ ಕೋವಿಡ್‌ಗೆ ತುತ್ತಾಗಿದ್ದಾರೆ. ಇದರಿಂದ ರೋಗಿಗಳ ಚಿಕಿತ್ಸೆಗೆ ಸಾಕಷ್ಟು ವೈದ್ಯರೂ ಲಭ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ವೈದ್ಯಕೀಯ ಕೋರ್ಸ್‌ಗಳ ವಿವಿಧ ವಿಭಾಗದ ವಿದ್ಯಾರ್ಥಿಗಳನ್ನು ಸೇವೆಗೆ ಬಳಸಿಕೊಳ್ಳಲು ಸರ್ಕಾರ ಮುಂದಾಗಿದೆ. ದೆಹಲಿ ಬಾತ್ರಾ ಆಸ್ಪತ್ರೆಯಲ್ಲಿ ಶನಿವಾರ ವೈದ್ಯಕೀಯ ಆಕ್ಸಿಜನ್ ಕೊರತೆಯಿಂದ 12 ಮಂದಿ ಮೃತಪಟ್ಟಿದ್ದರು. ಅವರಲ್ಲಿ ಒಬ್ಬ ವೈದ್ಯ ಕೂಡ ಸೇರಿದ್ದರು. ಕೋವಿಡ್ ಕರ್ತವ್ಯದ ಒತ್ತಡ ತಡೆಯಲಾಗದೆ ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು.
from India & World News in Kannada | VK Polls https://ift.tt/3tbgk2z