ಹೊಸದಿಲ್ಲಿ: ಪಶ್ಚಿಮ ಬಂಗಾಳದ ಬಂಕೂರ ಜಿಲ್ಲೆಯ ಸಲ್ಟೋರಾ ವಿಧಾನಸಭೆ ಕ್ಷೇತ್ರದಲ್ಲಿ ಕಡು ಬಡ ಕುಟುಂಬದ ಯುವತಿಯೊಬ್ಬರು ಗೆದ್ದು ಅಚ್ಚರಿ ಮೂಡಿಸಿದ್ದಾರೆ. ಬುಡಕಟ್ಟು ಹಿನ್ನೆಲೆಯ ಚಂದನಾ ಬೌರಿ ಅಭ್ಯರ್ಥಿಯಾಗಿ ಇಲ್ಲಿ 4145 ಮತಗಳ ಅಂತರದ ಗೆಲುವು ದಾಖಲಿಸಿದ್ದಾರೆ. ಇವರು ಟಿಎಂಸಿಯ ಸಂತೋಷ್ ಕುಮಾರ್ ಮೊಂಡಲ್ ಅವರನ್ನು ಸೋಲಿಸಿದ್ದಾರೆ. ಚುನಾವಣೆ ಸ್ಪರ್ಧೆಗೆ ಮೊದಲು ಯವರ ಬ್ಯಾಂಕ್ ಖಾತೆಯಲ್ಲಿ ಇದ್ದದ್ದು ಬಿಡಿಗಾಸು. ಮೂರು ಮೇಕೆ, ಮೂರು ಹಸು ಮತ್ತು ಒಂದು ಗುಡಿಸಲು ಸೇರಿ ಒಟ್ಟು ಆಸ್ತಿ ಮೌಲ್ಯ 31,985 ರೂ. ಮಾತ್ರ ಇವರ ಬಳಿ ಇತ್ತು. ಅಲ್ಲದೇ ಇವರ ಪತಿ ದಿನಗೂಲಿ ಕಾರ್ಮಿಕರಾಗಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚಂದನಾ ಬೌರಿ ಈ ಗೆಲುವು ಖುಷಿ ತಂದಿದೆ. ಟಿಕೆಟ್ ಘೋಷಣೆಯಾಗುವ ವರೆಗೆ ನಾನು ಅಭ್ಯರ್ಥಿ ಎಂದು ತಿಳಿದಿರಲಿಲ್ಲ. ಅಲ್ಲದೇ ನನಗೆ ಟಿಕೆಟ್ ಸಿಗುತ್ತೆ ಎಂದು ಗೊತ್ತಿರಲಿಲ್ಲ ಎಂದು ಅವರು ತಿಳಿಸಿದ್ದಾರೆ. ಇನ್ನು ಇವರ ಗೆಲುವನ್ನು ಅನೇಕರು ಟ್ವಿಟ್ಟರ್‌ನಲ್ಲಿ ಕೊಂಡಾಡಿದ್ದಾರೆ. ಕೋರ್ಟ್ ಅಂಗಳಕ್ಕೆ ನಂದಿಗ್ರಾಮ ಕದನ ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸಿದ್ದ ಹೈ ವೋಲ್ಟೇಜ್ ಕ್ಷೇತ್ರ ನಂದಿಗ್ರಾಮದ ಫಲಿತಾಂಶವು ಕೋರ್ಟ್ ಅಂಗಳಕ್ಕೆ ತಲುಪುವ ಸಾಧ್ಯತೆಯಿದೆ. ಮೊದಲು ಗೆಲುವು ಘೋಷಿಸಿ, ನಂತರ ಸೋಲು ಎಂದ ಚುನಾವಣಾ ಆಯೋಗದ ವಿರುದ್ಧ ಕೋರ್ಟ್ ಮೆಟ್ಟಿಲೇರುವುದಾಗಿ ಮಮತಾ ಹೇಳಿದ್ದಾರೆ. ಮತ ಎಣಿಕೆಯುದ್ದಕ್ಕೂ ಮಮತಾ ಮತ್ತು ಬಿಜೆಪಿಯ ಸುವೇಂದು ಅಧಿಕಾರಿ ನಡುವೆ ತೀವ್ರ ಜಿದ್ದಾಜಿದ್ದಿಗೆ ಏರ್ಪಟ್ಟಿತು. ಕೆಲವು ಸುತ್ತಿನಲ್ಲಂತೂ ಮತಗಳ ಅಂತರ ಕೇವಲ 6ಕ್ಕೆ ಕುಸಿದಿತ್ತು. 1,200 ಮತಗಳ ಅಂತರದಿಂದ ಮಮತಾ ಗೆಲುವು ಸಾಧಿಸಿದ್ದಾರೆ ಎಂದು ಮೊದಲು ಘೋಷಿಸಲಾಯಿತು. ಬಳಿಕ 1,957 ಮತಗಳ ಅಂತರದಿಂದ ಸುವೇಂದು ಅಧಿಕಾರಿ ಗೆದ್ದಿದ್ದಾರೆಂದು ಘೋಷಿಸಲಾಯಿತು.
from India & World News in Kannada | VK Polls https://ift.tt/3tc0CnT