ಲಂಡನ್: ಭಾರತದ ಉತ್ಪಾದಕ ಕಂಪೆನಿ ಸೀರಮ್ ಇನ್‌ಸ್ಟಿಟ್ಯೂಟ್, ಬ್ರಿಟನ್‌ನಲ್ಲಿ ಹೂಡಿಕೆ ಮಾಡಲಿದ್ದು, ಭವಿಷ್ಯದಲ್ಲಿ ಲಸಿಕೆ ಉತ್ಪಾದನೆ ಕೂಡ ಮಾಡಬಹುದು ಎಂದು ಪ್ರಧಾನಿ ಬೋರಿಸ್ ಜಾನ್ಸನ್ ತಿಳಿಸಿದೆ. ಸೀರಮ್ಸ್ ಸಂಸ್ಥೆಯು ಮಾರಾಟ ಕಚೇರಿ ಸೇರಿದಂತೆ 240 ಮಿಲಿಯನ್ ಪೌಂಡ್ ಮೊತ್ತದ ಯೋಜನೆಗೆ ಮುಂದಾಗಿದೆ. ಕ್ಲಿನಿಕಲ್ ಪ್ರಯೋಗಗಳು, ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಲಸಿಕೆಗಳ ಸಂಭಾವ್ಯ ಉತ್ಪಾದನೆ ನಡೆಯಲಿದೆ ಎಂದು ಜಾನ್ಸನ್ ಅವರ ಕಚೇರಿ ತಿಳಿಸಿದೆ. ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಒಟ್ಟಾರೆ ಪ್ರಮಾಣದಲ್ಲಿ ಜಗತ್ತಿನ ಅತ್ಯಂತ ದೊಡ್ಡ ಲಸಿಕೆ ಉತ್ಪಾದಕ ಸಂಸ್ಥೆಯಾಗಿದ್ದು, ಭಾರತದಲ್ಲಿ ಅತಿ ಕಡಿಮೆ ಬೆಲೆಯಲ್ಲಿ ಆಸ್ಟ್ರಾಜೆನಿಕಾ ಕೊರೊನಾ ವೈರಸ್ ಲಸಿಕೆಗಳನ್ನು ಉತ್ಪಾದಿಸುತ್ತಿದೆ. ಎಸ್‌ಐಐ ಮೂಗಿನ ಮೂಲಕ ನೀಡುವ ಕೊರೊನಾ ವೈರಸ್ ಲಸಿಕೆಯ ಪ್ರಯೋಗವನ್ನು ಕೂಡ ಬ್ರಿಟನ್‌ನಲ್ಲಿ ಆರಂಭಿಸಿದೆ. ಭಾರತದೊಂದಿಗಿನ ಬ್ರಿಟನ್‌ನ ವ್ಯಾಪಾರ ಮತ್ತು ಹೂಡಿಕೆಯ ಬೃಹತ್ ಯೋಜನೆಯ ಭಾಗವಾಗಿ ಎಸ್‌ಐಐ ಈ ಹೂಡಿಕೆ ಮಾಡುತ್ತಿದ್ದು, ಇದರಿಂದ ಸುಮಾರು 6,500 ಉದ್ಯೋಗ ಸೃಷ್ಟಿಯ ನಿರೀಕ್ಷೆಯಿದೆ. ಬ್ರೆಕ್ಸಿಟ್ ಬಳಿಕ ಗ್ಲೋಬಲ್ ಬ್ರಿಟನ್ ಕಾರ್ಯತಂತ್ರ ನಡೆಸುತ್ತಿರುವ ಬ್ರಿಟನ್ ಸರ್ಕಾರ, ಭಾರತದೊಂದಿಗಿನ ವ್ಯಾಪಾರ ಪಾಲುದಾರಿಕೆಯನ್ನು ವೃದ್ಧಿಸಲು ಮುಂದಾಗಿದೆ. ಭಾರತಕ್ಕೆ ಹಣ್ಣು ಮತ್ತು ವೈದ್ಯಕೀಯ ಉಪಕರಣಗಳ ರಫ್ತು ಮಾಡಲು ಇರುವ ಅಡೆತಡೆಗಳನ್ನು ನಿವಾರಿಸುವ ಸಂಬಂಧ ಪ್ರಧಾನಿಗಳಾದ ನರೇಂದ್ರ ಮೋದಿ ಮತ್ತು ಬೋರಿಸ್ ಜಾನ್ಸನ್ ಮಾತುಕತೆ ನಡೆಸಲಿದ್ದಾರೆ. ಸಿಇಒ ಅವರು ಬ್ರಿಟನ್ ಪ್ರವಾಸದಲ್ಲಿದ್ದು, ಅಲ್ಲಿ ಹೂಡಿಕೆಯ ಬಗ್ಗೆ ಸರ್ಕಾರ ಹಾಗೂ ಖಾಸಗಿ ಕಂಪೆನಿಗಳ ಜತೆ ಮಾತುಕತೆ ನಡೆಸಿದ್ದಾರೆ.
from India & World News in Kannada | VK Polls https://ift.tt/2QSc8HR