ಹೊಸದಿಲ್ಲಿ: ಕಳೆದ ಹಲವು ವರ್ಷಗಳಿಂದ ನಾಯಕತ್ವದ ತಂಡಕ್ಕೆ ಎಬಿ ಡಿ ವಿಲಿಯರ್ಸ್ ಮುಂಚೂಣಿ ಮ್ಯಾಚ್ ವಿನ್ನರ್ ಆಗಿದ್ದಾರೆಂದು ಭಾರತದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿರಾಟ್ ಕೊಹ್ಲಿ(5878) ಬಳಿಕ ಐಪಿಎಲ್ ಇತಿಹಾಸದಲ್ಲಿಯೇ ಅತಿ ಹೆಚ್ಚು ರನ್ ಗಳಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಎರಡನೇ ಬ್ಯಾಟ್ಸ್‌ಮನ್ ಎಂಬ ಸಾಧನೆಯನ್ನು ಎಬಿ ಡಿವಿಲಿಯರ್ಸ್(4178) ಮಾಡಿದ್ದಾರೆ. 2020ರ ಆವೃತ್ತಿಯಲ್ಲಿಯೂ ದಕ್ಷಿಣ ಆಫ್ರಿಕಾ ಮಾಜಿ ನಾಯಕ ಮಿಂಚಿದ್ದರು. ಅವರು 45.40 ಸರಾಸರಿ ಹಾಗೂ 158.74 ಸ್ಟ್ರೈಕ್‌ರೇಟ್‌ನೊಂದಿಗೆ 454 ರನ್ ದಾಖಲಿಸಿದ್ದಾರೆ. ತಾವು ಪ್ರತಿನಿಧಿಸುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಚೊಚ್ಚಲ ಪ್ರಶಸ್ತಿ ತಂದುಕೊಡುವ ನಿಟ್ಟಿನಲ್ಲಿ ಎಬಿ ಡಿ ವಿಲಿಯರ್ಸ್ 2021ರ ಆವೃತ್ತಿಯನ್ನು ವಿಭಿನ್ನವಾಗಿ ಆಡಬೇಕೇ ಎಂದು ಸ್ಟಾರ್ ಸ್ಪೋರ್ಟ್ಸ್ ಚರ್ಚೆಯಲ್ಲಿ ಕೇಳಿದ ಪ್ರಶ್ನೆಗೆ ಆಕಾಶ್ ಚೋಪ್ರಾ ನಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು. "ವಿಭಿನ್ನವಾಗಿ ಅವರು() ಮಾಡುವ ಅಗತ್ಯವೇನಿದೆ? ಅವರು ಆರ್‌ಸಿಬಿಗೆ ಅಸಾಧಾರಣ ಆಟಗಾರ ಹಾಗೂ ಮುಂಚೂಣಿಯಲ್ಲಿ ನಿಲ್ಲುವ ಪಂದ್ಯ ವಿಜೇತ. ಕಳೆದ ಹಲವು ವರ್ಷಗಳಿಂದ ಗೆದ್ದಿರುವ ಪಂದ್ಯಗಳ ಮೇಲೆ ಒಮ್ಮೆ ಗಮನಿಸಿ, ಇದರಲ್ಲಿ ಹೆಚ್ಚಿನ ಪಂದ್ಯಗಳಲ್ಲಿ ಡಿವಿಲಿಯರ್ಸ್ ಪಂದ್ಯ ಶ್ರೇಷ್ಠ ಪ್ರಶಸ್ತಿಗಳನ್ನು ಪಡೆದಿದ್ದಾರೆ," ಎಂದು ಚೋಪ್ರಾ ತಿಳಿಸಿದರು. ಎಬಿ ಡಿವಿಲಿಯರ್ಸ್ ಯಾವಾಗಲೂ ಪಂದ್ಯ ನಿರ್ಧರಿಸುವ ಬ್ಯಾಟಿಂಗ್ ಮಾಡುತ್ತಾರೆ ಹಾಗೂ ಇದನ್ನೇ ಅವರು ಮುಂದುವರಿಸಬೇಕು ಎಂದು ಭಾರತದ ಮಾಜಿ ಕ್ರಿಕೆಟಿಗ ಅಭಿಪ್ರಾಯ ವ್ಯಕ್ತಪಡಿಸಿದರು. "ಈ ರೀತಿಯ ಇನಿಂಗ್ಸ್‌ಗಳನ್ನು ಆಡುವುದು ಅವರ ಶೈಲಿ. ಹಲವು ಬಾರಿ ಎಬಿ ಡಿವಿಲಿಯರ್ಸ್ ಅವರಿಂದ ಪ್ರಭಾವಿತ ಇನಿಂಗ್ಸ್‌ಗಳು ಮೂಡಿಬಂದಿವೆ. ಇದೇ ರೀತಿಯ ಇನಿಂಗ್ಸ್‌ಗಳು ಅವರಿಂದ ಮೂಡಿಬರಲಿ ಹಾಗೂ ಇದರಲ್ಲಿ ಯಾವುದೇ ಬದಲಾವಣೆ ಬೇಡ. ಪ್ರತಿಯೊಬ್ಬರು ಇವರ ಹಾದಿಯಲ್ಲಿಯೇ ಬ್ಯಾಟ್ ಮಾಡಬೇಕು. ಆದರೆ, ಎಬಿಡಿ ನಿರೀಕ್ಷೆಯಂತೆ ಉತ್ತಮ ಪ್ರದರ್ಶನ ತೋರಲಿದ್ದಾರೆ," ಎಂದು ಆಕಾಶ್ ಚೋಪ್ರಾ ವಿಶ್ವಾಸ ವ್ಯಕ್ತಪಡಿಸಿದರು. 2020ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮೂರು ಪಂದ್ಯಗಳಲ್ಲಿ ಎಬಿ ಡಿವಿಲಿಯರ್ಸ್ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಸ್ವೀಕರಿಸಿದ್ದರು. ರಾಜಸ್ಥಾನ್ ರಾಯಲ್ಸ್ ವಿರುದ್ಧ ಪಂದ್ಯದ ಆರ್‌ಸಿಬಿ ಚೇಸಿಂಗ್‌ನಲ್ಲಿ ಜಯದೇವ್ ಉನದ್ಕಟ್ ಅವರ ಬೌಲಿಂಗ್‌ನಲ್ಲಿ ಎಬಿ ಡಿವಿಲಿಯರ್ಸ್ ಸ್ಫೋಟಕ ಬ್ಯಾಟಿಂಗ್ ಮಾಡಿದ್ದರು. ಕಳೆದ ಆವೃತ್ತಿಯಲ್ಲಿ ಇದು ಆರ್‌ಸಿಬಿ ಆಟಗಾರನ ಸ್ಮರಣೀಯ ಇನಿಂಗ್ಸ್ ಆಗಿದೆ. 2021ರ ಆವೃತ್ತಿಯ ಐಪಿಎಲ್ ಆಡಲು ಕಳೆದ ಎರಡು ದಿನಗಳ ಹಿಂದೆ ಎಬಿ ಡಿವಿಲಿಯರ್ಸ್ ಚೆನ್ನೈಗೆ ಬಂದಿಳಿದಿದ್ದು, 7 ದಿನಗಳ ಕ್ವಾರಂಟೈನ್‌ನಲ್ಲಿದ್ದಾರೆ. ಪ್ರಸಕ್ತ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಆರ್‌ಸಿಬಿ ತನ್ನ ಮೊದಲನೇ ಪಂದ್ಯವಾಡಲಿದೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3cJGaWs