ಗದಗ: ಶಾಲಾ ಕಾಲೇಜು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವೀರ ಸೈನಿಕನ ವೇಷ ಧರಿಸಿ ವೈರಿಗಳ ವಿರುದ್ಧ ಆರ್ಭಟಿಸುತ್ತಿದ್ದ ಹಳ್ಳಿ ಹುಡುಗಿಯೊಬ್ಬಳು ಬಿಎಸ್‌ಎಫ್ (ಬಾರ್ಡರ್ ಸೆಕ್ಯುರಿಟಿ ಫೋರ್ಸ್ ) ಸೇರುವ ಮೂಲಕ ನಿಜ ಜೀವನದಲ್ಲೂ ಯೋಧಳಾಗಿ ದೇಶ ಕಾಯಲು ಸಿದ್ಧಳಾಗುತ್ತಿದ್ದಾಳೆ. ತಾಲೂಕಿನ ಹಿರೇಹಾಳ ಗ್ರಾಮದ 23ರ ಯುವತಿ , ಜಿಲ್ಲೆಯಲ್ಲಿಯೇ ಬಿಎಸ್‌ಎಫ್ ಸೇರಿದ ಪ್ರಥಮ ಮಹಿಳೆ ಎಂಬ ಕೀರ್ತಿಗೆ ಪಾತ್ರಳಾಗಿದ್ದಾರೆ. ಕವಿತಾ ಚಿಕ್ಕವಳಿದ್ದಾಗಲೇ ತನ್ನ ಮನೆ ಸುತ್ತ ಸೇನೆ ಸೇರಿದವರ ಒಡನಾಟದಲ್ಲಿ ಬೆಳೆದರು. ಅಣ್ಣ ಸಿದ್ದಪ್ಪ 7 ವರ್ಷದಿಂದ ಸಿಆರ್‌ಪಿಎಫ್‌ನಲ್ಲಿದ್ದು ಅವನಂತೆ ತಾನಾಗಬೇಕೆಂದು ಕನಸು ಕಟ್ಟಿಕೊಂಡವರು. ತಂದೆ ಮಾಗುಂಡಪ್ಪ ಲಾರಿ ಡ್ರೈವರ್ ಆಗಿದ್ದರೂ ತಮ್ಮ ಮೂವರು ಮಕ್ಕಳಿಗೆ ನಿತ್ಯ ದೇಶಭಕ್ತಿ ಪಾಠ ಮಾಡುತ್ತಿದ್ದರು. ಈ ನಡುವೆ, ಕವಿತಾ ಶಾಲಾ ಕಾಲೇಜಿನ ನಾಟಕ, ರೂಪಕ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪೊಲೀಸ್ ಮತ್ತು ಸೈನಿಕ ಪಾತ್ರ ಮಾಡಿ ವೈರಿಗಳ ವಿರುದ್ಧ ವೀರಾವೇಷದಿಂದ ಆರ್ಭಟಿಸುತ್ತಿದ್ದರು. ಎನ್‌ಸಿಸಿಯನ್ನೂ ಸೇರಿದ್ದರು. ಹೀಗೆ ಕವಿತಾ ಬಾಲ್ಯ ಹಾಗೂ ವಿದ್ಯಾರ್ಥಿ ದಿಸೆಯಲ್ಲಿಯೇ ದೇಶಕ್ಕಾಗಿ ದುಡಿಯುವ ಹಂಬಲ ಹೊಂದಿದ್ದರು. ಅದಕ್ಕೆ ಅಣ್ಣ ಸಿದ್ದಪ್ಪ, ತಂದೆ, ತಾಯಿ, ತಮ್ಮ ಸ್ಫೂರ್ತಿ, ಪ್ರೇರಣೆಯಾಗಿದ್ದರು. ಬೆಂಗಳೂರಿನ ಯಲಹಂಕದಲ್ಲಿರುವ ಬಿಎಸ್‌ಎಫ್ ತರಬೇತಿ ಶಿಬಿರಕ್ಕೆ ಸೋಮವಾರ ತೆರಳಲಿದ್ದು, ದೇಶ ಕಾಯುವ ಕಾರ್ಯಕ್ಕೆ ಅಣಿಯಾಗಲಿದ್ದಾರೆ. ಅವಮಾನ ಸಹಿಸದಾದೆ..!ನಾನು ಹುಡುಗರಂತೆ ಟ್ರ್ಯಾಕ್ ಸೂಟ್ ಧರಿಸಿದಾಗ ಅವಮಾನಿಸುತ್ತಿದ್ದರು. ಅದನ್ನು ಸವಾಲಾಗಿ ಸ್ವೀಕರಿಸಿ ಮುನ್ನಡೆದೆ. ಈಗ ದೈಹಿಕ ಪರೀಕ್ಷೆಯಲ್ಲಿ ಕಡಿಮೆ ಅವಧಿಯಲ್ಲಿ ಹೆಚ್ಚು ಓಡಿ ಸೇನೆಗೆ ಆಯ್ಕೆಯಾಗಿರುವೆ ಎಂದು ಕವಿತಾ ಹೆಮ್ಮೆಯಿಂದ ಹೇಳುತ್ತಾರೆ. ಕವಿತಾ ಸೇನೆಗೆ ಆಯ್ಕೆಯಾಗಿದ್ದು ಖುಷಿ ತಂದಿದೆ ಎಂದು ಗೆಳತಿ ವೀರಮ್ಮ ಗಾಣಿಗೇರ (ಮೂಲಿಮನಿ) ಹಾಗೂ ತಾಪಂ ಮಾಜಿ ಅಧ್ಯಕ್ಷ ಶಿವಕುಮಾರ ಸಾಲಮನಿ ಸಂತಸ ವ್ಯಕ್ತಪಡಿಸುತ್ತಾರೆ.
from India & World News in Kannada | VK Polls https://ift.tt/2PXDc7S