ನಕಲಿ ಸಿಸಿಬಿ ಪೊಲೀಸರ ಸೋಗಿನಲ್ಲಿ ಅಂಗಡಿ ಮಾಲೀಕನಿಗೆ ಬೆದರಿಸಿ ದರೋಡೆ; 8 ಮಂದಿಯ ಬಂಧನ

ಕೆಆರ್‌ ಪುರ: ನಕಲಿ ಸಿಸಿಬಿ ಪೊಲೀಸರ ವೇಷದಲ್ಲಿ ಬಂದು ಅಂಗಡಿ ಮಾಲೀಕನನ್ನು ಬೆದರಿಸಿ ಮತ್ತು ಅಂಗಡಿಗೆ ಬಂದ ಗ್ರಾಹಕನ ಮೇಲೆ ಹಲ್ಲೆ ಮಾಡಿ, 2 ಸಾವಿರ ರೂ. ಹಾಗೂ ಮೊಬೈಲ್‌ ದೋಚಿ ಪರಾರಿಯಾಗಿದ್ದ ಎಂಟು ಮಂದಿ ಆರೋಪಿಗಳನ್ನು ಘಟನೆ ನಡೆದ 12 ಗಂಟೆಗಳ ಒಳಗೆ ಬಂಧಿಸುವಲ್ಲಿ ಕೆಆರ್‌ ಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ರಾಮಮೂರ್ತಿ ನಗರ ಕಲ್ಕೆರೆ ಮುಖ್ಯ ರಸ್ತೆಯ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಎದುರು ಇರುವ ಸ್ಟೇಷನರಿ ಅಂಗಡಿಗೆ ಬುಧವಾರ ಮಧ್ಯಾಹ್ನ ಸುಮಾರು 3 ಗಂಟೆ ವೇಳೆಗೆ ಕಾರ್‌ ಮತ್ತು ಬೈಕ್‌ಗಳಲ್ಲಿ ಬಂದ ಎಂಟು ಮಂದಿ ಆರೋಪಿಗಳು, ‘ನಿಮ್ಮ ಅಂಗಡಿಯಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಇದ್ದು, ನಾವು ಸಿಸಿಬಿ ಪೊಲೀಸರು, ಪರಿಶೀಲನೆಗೆ ಬಂದಿದ್ದೇವೆ. 3 ಲಕ್ಷ ರೂ. ನೀಡಿದರೆ ಬಿಟ್ಟು ಹೋಗುತ್ತೇವೆ. ಇಲ್ಲವಾದಲ್ಲಿ ಅಂಗಡಿಯನ್ನು ಸೀಜ್‌ ಮಾಡಿ, ಪ್ರಕರಣ ದಾಖಲಿಸಿ, ನಿಮ್ಮನ್ನು ಜೈಲಿಗೆ ಕಳುಹಿಸುತ್ತೇವೆ’ ಎಂದು ಅಂಗಡಿಗೆ ಮಾಲೀಕರಿಗೆ ಬೆದರಿಸಿದ್ದಾರೆ. ನಂತರ ಅಂಗಡಿಗೆ ಬಂದಿದ್ದ ಗ್ರಾಹಕರಾದ ಸಾದಿಕ್‌ ಎಂಬುವವರಿಗೆ ಡ್ಯಾಗರ್‌ ತೋರಿಸಿ ಬೆದರಿಸಿ, ಹಲ್ಲೆ ಮಾಡಿ, ಅವರ ಬಳಿ ಇದ್ದ ಮೊಬೈಲ್‌ ಫೋನ್‌ ಮತ್ತು 2 ಸಾವಿರ ರೂ. ಕಸಿದುಕೊಂಡು, ‘ಮಾದಕ ವಸ್ತು ಖರೀದಿಸಲು ಬಂದಿರುವ ಗಿರಾಕಿ ಎಂದು ನಿನ್ನ ಮೇಲೆಯೂ ಪ್ರಕರಣ ದಾಖಲಿಸುತ್ತೇವೆ’ ಎಂದು ಬೆದರಿಸಿ ಅಲ್ಲಿಂದ ಪರಾರಿಯಾಗಿದ್ದರು. ಈ ಬಗ್ಗೆ ಅಂಗಡಿಯ ಮಾಲೀಕ ನಿಹಾಲ್‌ ಸಿಂಗ್‌ ಬುಧವಾರ ಸಂಜೆ ಕೆಆರ್‌ ಪುರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಇನ್ಸ್‌ಪೆಕ್ಟರ್‌ ಅಂಬರೀಶ್‌ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ 12 ಗಂಟೆಗಳ ಒಳಗೆ ಎಂಟು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಅಫ್ರೋಜ್‌, ರೂಹಿದ್‌, ಸಾದಿಕ್‌, ಮನ್ಸೂರ್‌, ಕುರಮ್‌, ಶೇಖ್‌ ಸಲ್ಮಾನ್‌, ರುದ್ರೇಶ, ಮುಸ್ತಾಫರ್‌ ಬಂಧಿತ ಆರೋಪಿಗಳು. ಈ ಪೈಕಿ ಪ್ರಮುಖ ಆರೋಪಿ ಅಫ್ರೋಜ್‌ ಅಲಿಯಾಸ್‌ ಕಾಲು ಕುಖ್ಯಾತ ದರೋಡೆಕೋರನಾಗಿದ್ದು, ತನ್ನ ಸಹಚರನೊಂದಿಗೆ ಸೇರಿ ಮತ್ತಿತರ ಕಡೆಗಳಲ್ಲಿ ಹಲವು ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತಿಳಿದುಬಂದಿದೆ. ಆರೋಪಿಗಳಿಂದ ಮೊಬೈಲ್‌ ಫೋನ್‌ಗಳು, ಒಂದು ಡ್ಯಾಗರ್‌, 2 ಸಾವಿರ ರೂ., ಎರಡು ಬೈಕ್‌ಗಳು, ನಕಲಿ ಪೊಲೀಸ್‌ ಐಡಿ ಕಾರ್ಡ್‌ ಮತ್ತು ಒಂದು ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.


from India & World News in Kannada | VK Polls https://ift.tt/3m9VdvG

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...