ವೆಂ. ಸುನೀಲ್ ಕುಮಾರ್ ಬೆಂಗಳೂರು: ಬೆಂಗಳೂರಿನ ಕಾರ್ಮಿಕರ ರಾಜ್ಯ ವಿಮೆ (ಇಎಸ್‌ಐಸಿ) ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸಿಬ್ಬಂದಿ ನೇಮಕ ಗುತ್ತಿಗೆ ಪಡೆದ ಏಜೆನ್ಸಿಯು ಸ್ಟಾಫ್ ನರ್ಸ್ ಹುದ್ದೆಗಳಿಗೆ ಹಣ ಪಡೆದು ನೇಮಕ ಮಾಡಿಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆ. ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಉದ್ಯೋಗ ಬೇಕಾದರೆ ಮುಂಗಡವಾಗಿ 60 ಸಾವಿರ ಹಣ ಹಾಗೂ ಪ್ರತಿ ತಿಂಗಳ ಸಂಬಳದಲ್ಲಿ12 ಸಾವಿರ ರೂ. ನೀಡಬೇಕು. ಷರತ್ತಿಗೆ ಒಪ್ಪಿದರೆ ಮಾತ್ರ ಕೆಲಸ ಎಂದು ಏಜೆನ್ಸಿ ಸಿಬ್ಬಂದಿ ಬಹಿರಂಗವಾಗಿಯೇ ಬೇಡಿಕೆ ಇಡುತ್ತಿದ್ದಾರೆ ಎಂದು ಉದ್ಯೋಗ ಸಂದರ್ಶನ ಎದುರಿಸಿದ ಹಲವರು ವಿಜಯ ಕರ್ನಾಟಕಕ್ಕೆ ಮಾಹಿತಿ ನೀಡಿದ್ದಾರೆ. ರಾಜಾಜಿ ನಗರದ ಇಎಸ್‌ಐಸಿ ವೈದ್ಯಕೀಯ ಕಾಲೇಜು, ಪಿಜಿಐಎಂಎಸ್‌ಆರ್ ಮತ್ತು ಮಾದರಿ ಆಸ್ಪತ್ರೆಗೆ ಅಗತ್ಯ ಸಿಬ್ಬಂದಿ ಪೂರೈಕೆಗಾಗಿ ಟೆಂಡರ್ ಆಹ್ವಾನಿಸಲಾಗಿತ್ತು. ಕಡಿಮೆ ಮೊತ್ತಕ್ಕೆ ಬಿಡ್ ಮಾಡಿದ ರಾಜಸ್ಥಾನ ಮೂಲದ ಟ್ರೂಟೈಪ್ ಕಂಪನಿ ಟೆಂಡರ್ ಪಡೆದುಕೊಂಡಿದೆ. ಅದರಂತೆ ಕಂಪನಿಯು ಅರ್ಜಿಗಳನ್ನು ಆಹ್ವಾನಿಸಿತ್ತು. ಈ ವೇಳೆ ಸಾವಿರಾರು ಅರ್ಜಿಗಳು ಬಂದಿದ್ದವು. ಕಳೆದ ಎರಡು ದಿನಗಳಿಂದ ಸಂದರ್ಶನ ನಡೆಯುತ್ತಿದ್ದು, ಹಣ ಕೊಟ್ಟವರಿಗಷ್ಟೇ ಉದ್ಯೋಗ ಸಿಕ್ಕಿದೆ ಎನ್ನುತ್ತಾರೆ ಆಕಾಂಕ್ಷಿಗಳು. ಲಾಕ್‌ಡೌನ್‌ನಿಂದಾಗಿ ಕೆಲಸ ಕಳೆದುಕೊಂಡಿರುವ ಸಾಕಷ್ಟು ಮಂದಿ ಸಂಕಷ್ಟದಲ್ಲಿದ್ದಾರೆ. ಈ ಪರಿಸ್ಥಿತಿಯ ಲಾಭವನ್ನು ಏಜೆನ್ಸಿ ಪಡೆಯುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಜತೆಗೆ ಹೊರ ರಾಜ್ಯದ ಕಂಪನಿಗೆ ಗುತ್ತಿಗೆ ನೀಡಿರುವುದರಿಂದ ಹೊರ ರಾಜ್ಯದವರಿಗೇ ಮುಂದೆ ಹೆಚ್ಚಿನ ಅವಕಾಶ ಸಿಗುವ ಅಪಾಯವೂ ಇದೆ.
from India & World News in Kannada | VK Polls https://ift.tt/2PX6O5m