ಟಿಮ್‌ ಪೇಯ್ನ್‌ ನಿರ್ಧಾರದಿಂದ ವಾರ್ನರ್‌ ಕೈತಪ್ಪಿದ ವಿಶ್ವ ದಾಖಲೆ: ಲಾರಾ ಬೇಸರ

ಅಡಿಲೇಡ್‌: ವಿರುದ್ಧ ಅಡಿಲೇಡ್‌ ಓವಲ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಡೇ-ನೈಟ್ ಟೆಸ್ಟ್‌ ಪಂದ್ಯದಲ್ಲಿ ವಿಶ್ವ ದಾಖಲೆಯ 400 ರನ್‌ ಗಳಿಸುವ ಎಲ್ಲಾ ಸಾಧ್ಯತೆಗಳಿತ್ತಾದರೂ, ಆಸೀಸ್‌ ನಾಯಕ ಟಿಮ್‌ ಪೇಯ್ನ್‌ ಇನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡದ್ದು ಬೇಸರ ತಂದಿದೆ ಎಂದು ವೆಸ್ಟ್‌ ಇಂಡೀಸ್‌ನ ದಿಗ್ಗಜ ಬ್ರಿಯಾನ್‌ ಚಾರ್ಲ್ಸ್‌ ಲಾರಾ ಹೇಳಿಕೊಂಡಿದ್ದಾರೆ. ಲಾರಾ, 2004ರಲ್ಲಿ ಇಂಗ್ಲೆಂಡ್‌ ಎದುರು ಅಜೇಯ 400 ರನ್‌ ಗಳಿಸಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ವೈಯಕ್ತಿಕ ಗರಿಷ್ಠ ಸ್ಕೋರ್‌ನ ವಿಶ್ವ ದಾಖಲೆ ಬರೆದಿದ್ದರು. ಇದೀಗ ಪಾಕ್‌ ಎದುರು 418 ಎಸೆತಗಳಲ್ಲಿ ಅಜೇಯ 335 ರನ್‌ ಗಳಿಸಿದ್ದ ವಾರ್ನರ್‌ಗೆ ಈ ದಾಖಲೆ ಮುರಿಯಲು ಇನ್ನು ಕೇವಲ 65 ರನ್‌ ಮಾತ್ರವೇ ಗಳಿಸಬೇಕಿತ್ತು. ಇನ್ನು ಲಾರಾ ಕೂಡ ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಅಡಿಲೇಡ್‌ನಲ್ಲಿ ಇದ್ದಂತಹ ಸಂದರ್ಭದಲ್ಲಿ ವಾರ್ನರ್‌ ಈ ದಾಖಲೆಯ ಹತ್ತಿರ ಕಾಲಿಟ್ಟಿದ್ದರು. ಇಡೀ ಕ್ರಿಕೆಟ್‌ ಜಗತ್ತೇ ವಾರ್ನರ್‌ ಕಡೆಗೆ ತಿರುಗಿ ನೋಡುವ ಮೂಲಕ ಲಾರಾ ದಾಖಲೆ ಮುರಿತ್ತಾರೆಯೇ ಎಂದು ಕಾದು ಕುಳಿತಿರುವಾಗ ಕಾಂಗರೂ ಪಡೆಯ ನಾಯಕ ಟಿಮ್‌ ಪೇಯ್ನ್‌ ಅಚ್ಚರಿಯ ರೀತಿಯಲ್ಲಿ 589/3 ರನ್‌ಗಳಿಗೆ ಇನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡರು. "ಅದೊಂದು ಅದ್ಭುತ ಇನಿಂಗ್ಸ್‌. ಆಸ್ಟ್ರೇಲಿಯಾಗೆ ಇಲ್ಲಿ ಪಂದ್ಯ ಗೆಲ್ಲುವುದು ಮುಖ್ಯವಾಗಿತ್ತು. ಜೊತೆಗೆ ಹವಾಮಾನ ಕೂಡ ಪೂರಕವಾಗಿರಲಿಲ್ಲ. ಆದರೂ ತಂಡ ವಾರ್ನರ್‌ಗೆ ಅವಕಾಶ ನೀಡಿದ್ದರೆ ನಿಜಕ್ಕೂ ಮತ್ತಷ್ಟು ಅದ್ಭುತವಾಗಿರುತ್ತಿತ್ತು. ನಾನೂ ಕೂಡ ಇಲ್ಲೇ ಇದಿದ್ದರಿಂದ ನನ್ನ ದಾಖಲೆ ಮುರಿಯುವ ಕ್ಷಣವನ್ನು ಕಣ್ತುಂಬಿಕೊಳ್ಳುವ ಆಸೆಯಿತ್ತು. ಈ ಸಂದರ್ಭದಲ್ಲಿ ಡೇವಿಡ್‌ ನಿಮಗೆ 12 ಓವರ್‌ಗಳಿದೆ, ಟೀ ವಿರಾಮಕ್ಕೂ ಮುನ್ನ ಪ್ರಯತ್ನಿಸಿ ಎಂದು ಹೇಳಬಹುದಿತ್ತು," ಎಂದು ಲಾರಾ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ. "ಆಸ್ಟ್ರೇಲಿಯಾ ಡಿಕ್ಲೇರ್‌ ಮಾಡಿದ ತನ್ನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವ ಹಾಗೆ ಎದುರಾಳಿ ತಂಡದ 6 ವಿಕೆಟ್‌ ಉರುಳಿಸಿತ್ತು. ಈಗ ಆಟ ನಿಧಾನ ಗತಿಯಲ್ಲಿ ಸಾಗುತ್ತಿದ್ದು, ಸರಿಯಾದ ಸಮಯಕ್ಕೆ ಆಸೀಸ್‌ ಇನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿದೆ ಎಂದನಿಸುತ್ತಿದೆ. ಆದರೂ ಸರ್‌ ಡೊನಾಲ್ಡ್‌ ಬ್ರಾಡ್ಮನ್‌ ಅವರ ದಾಖಲೆ ಮುರಿದ ಬಳಿಕ ನನ್ನ ದಾಖಲೆ ಕಡೆಗೆ ಮುನ್ನುಗ್ಗಬೇಕಿತ್ತು. ಈ ಸಂದರ್ಭದಲ್ಲಿ ಕಾಮೆಂಟೇಟರ್‌ಗಳು ಮ್ಯಾಥ್ಯೂ ಹೇಡನ್‌ ಅವರ 380 ರನ್‌ನತ್ತ ವಾರ್ನರ್‌ ಮುನ್ನುಗ್ಗುತ್ತಾರೆಂದು ಹೇಳುತ್ತಿದ್ದರು. ಒಂದು ವೇಳೆ ವಾರ್ನರ್‌ ಮುನ್ನುಗ್ಗಿ 381 ರನ್‌ ಗಳಿಸಿದ್ದರೆ ಖಂಡಿತವಾಗಿಯೂ ನನ್ನ ದಾಖಲೆಯನ್ನೂ ಮುರಿಯುತ್ತಿದ್ದರು," ಎಂದು ಲಾರಾ ಹೇಳಿದ್ದಾರೆ. 1994ರಲ್ಲಿ ಇಂಗ್ಲೆಂಡ್‌ ವಿರುದ್ಧದ 375 ರನ್‌ಗಳಿಸುವ ಮೂಲಕ ಅಂದಿನ ವಿಶ್ವ ದಾಖಲೆಯಾಗಿದ್ದ ಸರ್‌ ಗ್ಯಾರಿ ಸಾಬರ್ಸ್‌ ಅವರ 365 ರನ್‌ಗಳ ದಾಖಲೆ ಮುರಿದಿದ್ದರು. ಆ ಸಂದರ್ಭದಲ್ಲಿ ಬಾರ್ಬೇಡೋಸ್‌ ಕ್ರೀಡಾಂಗಣದಲ್ಲಿ ಉಪಸ್ಥಿತರಿದ್ದ ಸಾಬರ್ಸ್‌ ಅಂಗಣಕ್ಕೆ ಧಾವಿಸಿ ಲಾರಾಗೆ ಶುಭಾಶಯ ತಿಳಿಸಿದ್ದರು. "ಸಾಬರ್ಸ್‌ ರೀತಿಯಲ್ಲಿ ನಾನೂ ಅಂಗಣಕ್ಕೆ ತೆರಳಿ ವಾರ್ನರ್‌ಗೆ ಶುಭಾಶಯ ತಿಳಿಸುತ್ತಿದ್ದೆ. ದಾಖಲೆಗಳು ಇರುವುದೇ ಮುರಿಯುವುದಕ್ಕೆ. ಒಬ್ಬ ಆಕ್ರಮಣಕಾರಿ ಆಟಗಾರನಿಂದ ಈ ದಾಖಲೆ ಮುರಿದರೆ ಸಂತಸವಾಗುತ್ತದೆ," ಎಂದು ಲಾರಾ ಹೇಳಿದ್ದಾರೆ. ಲಾರಾ, ವೆಸ್ಟ್‌ ಇಂಡೀಸ್‌ ಪರ 131 ಟೆಸ್ಟ್‌ ಮತ್ತು 299 ಏಕದಿನ ಪಂದ್ಯಗಳನ್ನಾಡಿದ್ದಾರೆ. ಇನ್ನು ಪಾಕ್‌ ವಿರುದ್ಧದ ಡೇ-ನೈಟ್‌ ಟೆಸ್ಟ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಇನ್ನೊಂದು ದಿನ ಬಾಕಿ ಇರುವಾಗಲೇ ಇನಿಂಗ್ಸ್‌ ಮತ್ತು 48 ರನ್‌ಗಳ ಭರ್ಜರಿ ಜಯ ದಾಖಲಿಸಿತು. ತ್ರಿಶತಕ ವೀರ ಡೇವಿಡ್‌ ವಾರ್ನರ್‌ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರೆ, 3 ಪಂದ್ಯಗಳ ಸರಣಿಯನ್ನು ಇನ್ನೊಂದು ಪಂದ್ಯ ಬಾಕಿ ಇರುವಾಗಲೇ 2-0 ಅಂತರದಲ್ಲಿ ಆಸೀಸ್‌ ಗೆದ್ದುಕೊಂಡಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2R7vs1z

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...