- ಹ.ಚ.ನಟೇಶಬಾಬು, ಬೆಂಗಳೂರು 2019ರ ಮುಕ್ತಾಯಕ್ಕೆ ಎರಡು ದಿನಗಳಷ್ಟೇ ಬಾಕಿ ಉಳಿದಿವೆ. ಈ ವರ್ಷ ಯಾರೂ ನಿರೀಕ್ಷಿಸದ ಮಟ್ಟದಲ್ಲಿತ್ತು. ಆರ್ಥಿಕ ಹಿಂಜರಿತ, ಸ್ಥಳೀಯ ಮತ್ತು ಜಾಗತಿಕ ಬೆಳವಣಿಗೆಗಳು ಸೆನ್ಸೆಕ್ಸ್ನ ಏರಿಳಿತಕ್ಕೆ ಕಾರಣವಾದವು. ಈ ವರ್ಷ ಐತಿಹಾಸಿಕ ಮತ್ತು ಸಾರ್ವಕಾಲಿಕ ದಾಖಲೆಯ 40,000 ಅಂಕವನ್ನು ದಾಟಿದರೆ, ನಿಫ್ಟಿ 12,000 ಅಂಕ ಮುಟ್ಟಿತು. ಆದಾಗ್ಯೂ, ಹೂಡಿಕೆದಾರರಿಗೆ ಈ ವರ್ಷ ಸಮಾಧಾನಕರವಾಗಿಯೇನೂ ಇರಲಿಲ್ಲ. ಸೆನ್ಸೆಕ್ಸ್ ಏರಿಳಿತದ ಹಾವು-ಏಣಿಯಾಟ ಈ ವರ್ಷ ಬಿರುಸಾಗಿತ್ತು. ಸೆನ್ಸೆಕ್ಸ್ ದಾಖಲೆಯ ಜಿಗಿತ ಕಂಡಿದ್ದರೂ, ಕಾರ್ಪೊರೇಟ್ ಆದಾಯ ಆಶಾದಾಯಕವಾಗಿಲ್ಲ. ಐಎಲ್ಆ್ಯಂಡ್ಎಫ್ಎಸ್ನ 91 ಸಾವಿರ ಕೋಟಿ ರೂ. ಸಾಲ ಬಿಕ್ಕಟ್ಟು, ದಿವಾನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ನ(ಡಿಎಚ್ಎಫ್ಎಲ್) 31 ಸಾವಿರ ಕೋಟಿ ರೂ. ಅವ್ಯವಹಾರ, ಪಂಜಾಬ್ ಆ್ಯಂಡ್ ಮಹಾರಾಷ್ಟ್ರ ಕೋ-ಆಪರೇಟಿವ್ ಬ್ಯಾಂಕ್ನ(ಪಿಎಂಸಿ) 6,700 ಕೋಟಿ ರೂ. ಹಗರಣ ಮತ್ತು ಅವ್ಯವಹಾರಗಳು ಷೇರು ಮಾರುಕಟ್ಟೆ ಮೇಲೆ ಈ ವರ್ಷ ನಕಾರಾತ್ಮಕ ಪ್ರಭಾವ ಬೀರಿವೆ. ಮಾರುಕಟ್ಟೆ ಮತ್ತು ಹೂಡಿಕೆದಾರರ ಮೇಲೆ ತೀವ್ರ ಒತ್ತಡ ಸೃಷ್ಟಿಯಾಗಿ, ನಿರಾಶಾದಾಯಕ ಪರಿಸ್ಥಿತಿ ನಿರ್ಮಾಣವಾಗಿತ್ತು. 2019ನೇ ವರ್ಷದ ಆರಂಭದಲ್ಲಿ ಸೆನ್ಸೆಕ್ಸ್ 36,254.57 ತಲುಪಿತ್ತು. ಮಾರ್ಚ್ ತನಕ ಮೇಲ್ಮುಖವಾಗಿಯೇ ಸೆನ್ಸೆಕ್ಸ್ ಸಾಗಿತು. ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನದ ಬಳಿಕ ಏ.2ರಂದು ಸೆನ್ಸೆಕ್ಸ್ 39,000ಕ್ಕೆ ಜಿಗಿಯಿತು. ಮೋದಿ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬರಲಿದೆ ಎನ್ನುವ ನಿರೀಕ್ಷೆ ಮಾರುಕಟ್ಟೆಗೆ ಚೈತನ್ಯ ನೀಡಿತ್ತು. ಸರಕಾರ ಅಸ್ತಿತ್ವಕ್ಕೆ ಬಂದು ಜು.5ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಿದರು. ಬಜೆಟ್ನಲ್ಲಿನ ತೆರಿಗೆ-ಮೇಲ್ತೆರಿಗೆ ತೀರ್ಮಾನಗಳಿಂದ ಬಜೆಟ್ ದಿನವೇ ಸೆನ್ಸೆಕ್ಸ್ 400 ಅಂಕ, ಮಾರನೇ ದಿನ 793 ಅಂಕ ನಷ್ಟವಾಯಿತು. ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಗೆ(ಎಫ್ಪಿಐ) ಮೇಲ್ತೆರಿಗೆ ಹೆಚ್ಚಿಸುವ ಸರಕಾರದ ತೀರ್ಮಾನ ಷೇರು ಮಾರುಕಟ್ಟೆಗೆ ಪೆಟ್ಟು ನೀಡಿತು. ಇದರಿಂದಾಗಿ ಭಾರತದ ಈಕ್ವಿಟಿ ಮಾರುಕಟ್ಟೆಯಿಂದ ಜುಲೈನಲ್ಲಿ ಎಫ್ಪಿಐಗಳು 12,418.73 ಕೋಟಿ ರೂ. ಹೊರ ತೆಗೆದರು. ಉದ್ಯಮ ಮತ್ತು ಮಾರುಕಟ್ಟೆ ಪ್ರತಿರೋಧದಿಂದ ಆಗಸ್ಟ್ನಲ್ಲಿ ಸರ್ಚಾರ್ಜ್ಅನ್ನು ಸರಕಾರ ವಾಪಸ್ ಪಡೆಯಿತು. ಆರ್ಥಿಕತೆ ಉತ್ತೇಜನಕ್ಕೆ ಸರಕಾರ ಕ್ರಮಗಳನ್ನು ಪ್ರಕಟಿಸಿತು. ಕಾರ್ಪೊರೇಟ್ ತೆರಿಗೆ ಇಳಿಕೆ ಮಾಡಿದ ಕ್ರಮ, ಷೇರುಪೇಟೆಗೆ ಚೈತನ್ಯ ನೀಡಿತು. ಸೆ.20ರಂದು ಸೆನ್ಸೆಕ್ಸ್ 1,921 ಅಂಕ ಏರಿಕೆ ಕಂಡಿತು. ಇದು ದಶಕದಲ್ಲೇ ದೊಡ್ಡ ಏರಿಕೆ. ಖರೀದಿ ಭರಾಟೆಯಿಂದ ನ.27ರಂದು ಸೆನ್ಸೆಕ್ಸ್ 41,000 ಮುಟ್ಟಿತು. ಡಿ.27ರ ತನಕದ ಷೇರು ಪೇಟೆ ಗಮನಿಸಿದರೇ, ಸೆನ್ಸೆಕ್ಸ್ ಶೇ.15.26 ಮತ್ತು ನಿಫ್ಟಿ 12.73ರಷ್ಟು ಏರಿಕೆಯಾಗಿದೆ. ಆದಾಗ್ಯೂ, ಮೌಲ್ಯದ ವಿಷಯದಲ್ಲಿ ಮಾರುಕಟ್ಟೆ ತಜ್ಞರು ಸಮಾಧಾನಗೊಂಡಿಲ್ಲ. 30 ಸೆನ್ಸೆಕ್ಸ್ ಸ್ಟಾಕ್ಗಳ ಷೇರು ದರ-ಆದಾಯದ ದರದ(ಪಿಇ) ಅನುಪಾತ 29ಕ್ಕೆ ಮುಟ್ಟಿದೆ. ಅಂದರೇ, ಹೂಡಿಕೆದಾರರು ಭವಿಷ್ಯದ ಗಳಿಕೆಗೆ ಹೆಚ್ಚಿನ ಹಣವನ್ನು ಸುರಿದಿದ್ದಾರೆ. 2020 ಷೇರುಪೇಟೆಗೆ ಪುಷ್ಟಿ ನೀಡುವುದೇ?ಈ ವರ್ಷದ ಕೇಂದ್ರ ಬಜೆಟ್ ಹೇಗಿರಲಿದೆ ಅನ್ನುವುದನ್ನು ನೋಡಬೇಕು. ಆರ್ಥಿಕ ಮತ್ತು ಕಾರ್ಪೊರೇಟ್ ವಲಯದ ಬೆಳವಣಿಗೆಗೆ ಪ್ರೋತ್ಸಾಹದಾಯಕ ಕ್ರಮಗಳನ್ನು ಕೇಂದ್ರ ಸರಕಾರ ಹೇಗೆ ಪ್ರಕಟಿಸಲಿದೆಯೋ ಅದು ಷೇರು ಮಾರುಕಟ್ಟೆ ಮೇಲೆ ಪ್ರಭಾವ ಬೀರಲಿದೆ. ಇದರ ಜೊತೆಗೆ ವಿದೇಶಿ ವಿತ್ತೀಯ ಸಂಸ್ಥೆಗಳೂ ಪ್ರಭಾವ ಬೀರಲಿವೆ. ಅವುಗಳ ಸಾಧನೆಗಿಂತಲೂ ಚಟುವಟಿಕೆಗಳು ಪ್ರಮುಖ ಪ್ರಭಾವವನ್ನು ಬೀರುತ್ತವೆ ಎನ್ನುತ್ತಾರೆ ಷೇರು ತಜ್ಞ ಕೆ.ಜಿ.ಕೃಪಾಲ್. ''ಆರ್ಬಿಐ ರೆಪೊ ದರವನ್ನು ಕಡಿಮೆ ಮಾಡಿ, ಆರ್ಥಿಕತೆ ಉತ್ತೇಜಿಸಲು ಪ್ರಯತ್ನಿಸುತ್ತಿದೆ. ಹಣದ ಅಭಾವ ಆರ್ಥಿಕತೆಗೆ ಅಡ್ಡಿಯಾಗಬಾರದು ಎಂದು ಬಡ್ಡಿ ದರ ಕಡಿಮೆ ಮಾಡಿ ಸಾಲಗಳನ್ನು ಉತ್ತೇಜಿಸುತ್ತಿದೆ. ಆದರೆ, ಇಷ್ಟೇ ಸಾಲದು. ಉತ್ಪಾದನಾ ಆಧಾರಿತ ಸಾಲ ಚಟುವಟಿಕೆಗಳು ಅಗತ್ಯವಾಗಿವೆ. ಈ ನಿಟ್ಟಿನಲ್ಲಿ ಸರಕಾರ ಗಮನ ಹರಿಸಿದರೆ, ಷೇರುಮಾರುಕಟ್ಟೆಗೆ ಮುಂದಿನ ದಿನಗಳಲ್ಲಿ ಚೈತನ್ಯ ಬರುತ್ತದೆ,'' ಎಂದು ಕೃಪಾಲ್ ಅಭಿಪ್ರಾಯಪಟ್ಟಿದ್ದಾರೆ. ಭಾರತದ ಜಿಡಿಪಿ ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿಶೇ.4.5ಕ್ಕೆ ಕುಸಿದಿದೆ. ಗ್ರಾಹಕ ಅನುಭೋಗ ಕುಸಿದಿದೆ. ಸರಕಾರ ಕೈಗೊಂಡಿರುವ ಕ್ರಮಗಳು ಫಲ ನೀಡಿದರೇ, ಆರ್ಥಿಕತೆ ಚೇತರಿಕೆ ಕಾಣಲಿದೆ. ಚೀನಾ-ಅಮೆರಿಕ ವಾಣಿಜ್ಯ ಸಂಘರ್ಷ ಒಂದು ಹದಕ್ಕೆ ಬಂದಿದ್ದು, ಇದು 2020ರ ಷೇರುಪೇಟೆ ಮೇಲೆ ಸಕಾರಾತ್ಮಕ ಪ್ರಭಾವ ಬೀರಲಿದೆ. ಹೂಡಿಕೆದಾರರೇ ವ್ಯಾಲ್ಯು ಪಿಕ್ ಮಾಡಿ ಷೇರುಪೇಟೆಯಲ್ಲಿ ಏರಿಳಿತಗಳು ಸಹಜ. ವಿಚಲಿತರಾಗಬಾರದು. ಹೂಡಿಕೆದಾರರು 'ವ್ಯಾಲ್ಯು ಪಿಕ್, ಪ್ರಾಫಿಟ್ ಬುಕ್' ಎನ್ನುವ ಸೂತ್ರವನ್ನು ಸದಾ ನೆನಪಲ್ಲಿಟ್ಟುಕೊಳ್ಳಬೇಕು. ಯಾವುದೋ ಕಾರಣಕ್ಕೆ ಮಾರುಕಟ್ಟೆ ಬೀಳುತ್ತದೆ. ಆಗ ಷೇರು ದರ ಕುಸಿಯಬಹುದು. ಇಂಥ ಪರಿಸ್ಥಿತಿಯಲ್ಲಿ ಹೂಡಿಕೆದಾರರು ಒಳ್ಳೆಯ ಕಂಪನಿಗಳ ಷೇರುಗಳನ್ನು ಖರೀದಿಸಬೇಕು. ಇದು ಸುವರ್ಣ ಅವಕಾಶ. ಷೇರುಪೇಟೆಯಲ್ಲಿ ಅಧ್ಯಯನ ಮತ್ತು ತಜ್ಞರ ಮಾರ್ಗದರ್ಶನ ಅಗತ್ಯ. - ಕೆ.ಜಿ.ಕೃಪಾಲ್, ಷೇರುಪೇಟೆ ತಜ್ಞ
from India & World News in Kannada | VK Polls https://ift.tt/2F6cLE6