ಮುಂಗಾರು ಮಳೆ ಲೆಕ್ಕಕ್ಕುಂಟು, ಆಟಕ್ಕಿಲ್ಲ..! ಸಕಾಲದಲ್ಲಿ ಮಳೆ ಬಾರದೆ ಬಿತ್ತನೆ ಕುಂಠಿತ

ಎಚ್‌. ಪಿ. ಪುಣ್ಯವತಿ : ರಾಜ್ಯದಲ್ಲಿ ಭರ್ಜರಿಯಾಗಿ ಆರಂಭಗೊಂಡ ಮಳೆ ನಡುವೆ ನಿಧಾನಗತಿಯನ್ನು ಪಡೆದಿದೆ. ಒಟ್ಟಾರೆ ಲೆಕ್ಕಾಚಾರದಲ್ಲಿ ಜೂನ್‌ ತಿಂಗಳಲ್ಲಿ ವಾಡಿಕೆಗಿಂತ ಉತ್ತಮ ಮಳೆಯಾಗಿದೆ. ಆದರೆ, ಸಕಾಲದಲ್ಲಿ ಮಳೆ ಬೀಳದ ಹಿನ್ನೆಲೆಯಲ್ಲಿ ಅದನ್ನೇ ನಂಬಿಕೊಂಡಿರುವ ಕಾರ್ಯಗಳಿಗೆ ತೊಂದರೆಯಾಗಿದೆ. ಪೂರ್ವ ಮುಂಗಾರು ಮಳೆಯ ಅಬ್ಬರ ಜೋರಾಗಿತ್ತು. ಹೀಗಾಗಿ ಏಪ್ರಿಲ್‌-ಮೇ ತಿಂಗಳಲ್ಲಿ ಕಾರ್ಯಗಳು ಭರದಿಂದ ಸಾಗಿದ್ದವು. ಆದರೆ ಎಂಟು ಜಿಲ್ಲೆಗಳಲ್ಲಿ ಮುಂಗಾರು ನಿರೀಕ್ಷಿತ ಪ್ರಮಾಣದಲ್ಲಿ ಬಾರದ ಕಾರಣ ಬೆಳೆಗಳು ಒಣಗುವ ಪರಿಸ್ಥಿತಿ ಇದೆ. ಒಟ್ಟಾರೆ ಮಳೆಯ ಪ್ರಮಾಣ ನೋಡಿದಾಗ ಅಂಕಿ ಅಂಶಗಳ ಪ್ರಕಾರ ಜೂನ್‌ನಲ್ಲಿ ಮಳೆ ಕಡಿಮೆಯಾಗಿಲ್ಲ. ಆದರೆ ಬೀಳಬೇಕಾದ ಸಮಯದಲ್ಲಿ ಮಳೆ ಬೀಳಲಿಲ್ಲ. ರಾಜ್ಯದ ಮೈಸೂರು, ಚಾಮರಾಜನಗರ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಮಳೆಯ ಕೊರತೆ ತೀವ್ರವಾಗಿದೆ ಎನ್ನುತ್ತಾರೆ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ಅಧಿಕಾರಿಗಳು. ವಾಡಿಕೆ ಪ್ರಕಾರ, ಜನವರಿಯಿಂದ ಜೂನ್‌ ಅಂತ್ಯದವರೆಗೆ 310 ಮಿಲಿ ಮೀಟರ್‌ ಮಳೆಯಾಗುತ್ತದೆ. ಈ ಬಾರಿ 405 ಮಿಲಿ ಮೀಟರ್‌ ಮಳೆಯಾಗಿದೆ. ಜೂನ್‌ ಒಂದೇ ತಿಂಗಳಲ್ಲಿ 191 ಮಿ.ಮೀ. ಬದಲಿಗೆ 198 ಮಿ.ಮೀ. ಮಳೆಯಾಗಿದೆ. ಜೂನ್‌ ಮಧ್ಯಭಾಗದಲ್ಲಿ ಮಳೆ ಕಡಿಮೆಯಾಗಿದ್ದರಿಂದ ಮೊದಲ ವಾರದಲ್ಲಿ ಬಿತ್ತನೆಯಾದ ಬೆಳೆಗಳಿಗೆ ತೊಂದರೆಯಾಗಿದೆ. ಕೆಂಪು ಮಣ್ಣು, ಮರಳು ಮಿಶ್ರಿತ ಮಣ್ಣಿರುವ ಭೂಮಿಗಳಲ್ಲಿ ನೀರು ಬೇಗ ಹೀರಿಕೊಂಡು ಒಣಗಿದಂತಾಗುತ್ತದೆ. ಭೂಮಿಯಲ್ಲಿನ ತೇವಾಂಶ ಕಡಿಮೆಯಾಗಿ, ಬಿತ್ತನೆಗೆ ಮತ್ತಷ್ಟು ತೊಡಕಾಗಿದೆ ಎನ್ನುತ್ತಾರೆ ಹವಾಮಾನ ತಜ್ಞರು ಮತ್ತು ಹಿರಿಯ ಸಮಾಲೋಚಕರೂ ಆದ ಡಾ. ಜಿ.ಎಸ್‌. ಶ್ರೀನಿವಾಸ ರೆಡ್ಡಿ. ಯಾವ ಜಿಲ್ಲೆಗಳಲ್ಲಿ ಕೊರತೆ: ಮೈಸೂರು ಜಿಲ್ಲೆಯಲ್ಲಿ 21 ಮಿ.ಮೀ. ಮಳೆಯ ಕೊರತೆ ಕಂಡು ಬಂದರೆ, ಚಾಮರಾಜನಗರದಲ್ಲಿ 18 ಮಿ.ಮೀ. ಮಳೆಯ ಕೊರತೆ ಉಂಟಾಗಿದೆ. ಉಳಿದಂತೆ ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ದಾವಣಗೆರೆ, ಚಿತ್ರದುರ್ಗಗಳಲ್ಲೂ ಸ್ವಲ್ಪ ಮಟ್ಟಿಗೆ ಜೂನ್‌ ಕೊನೆಯ ವಾರದಲ್ಲಿ ಮಳೆಯಾಗಿಲ್ಲ. ಜಿಲ್ಲೆಗಳಲ್ಲಿ ಎಲ್ಲೆಲ್ಲಿ ಸಮಸ್ಯೆ: ಮೈಸೂರು ಜಿಲ್ಲೆಯಲ್ಲಿ ಶೇ.31ರಷ್ಟು ಮಳೆ ಕೊರತೆಯಾಗಿದ್ದು, ಕಳೆದ 7-8 ದಿನಗಳಿಂದ ವರುಣ ಕೃಪೆ ತೋರಿಲ್ಲ. ಹೀಗಾಗಿ ಬಿತ್ತಿದ ಬೆಳೆಗಳು ಬಾಡುತ್ತಿವೆ. ಚಾಮರಾಜನಗರ: ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ಬಿತ್ತನೆಯಾಗಿರುವ ಬೆಳೆಗಳು ಸಕಾಲದಲ್ಲಿ ಮಳೆಯಾಗದೆ ಬಾಡುತ್ತಿವೆ. ಚಿತ್ರದುರ್ಗ: ಭರವಸೆ ಹುಟ್ಟಿಸಿದ್ದ ಮಳೆ ಕಳೆದೊಂದು ವಾರದಿಂದ ಕೈಕೊಟ್ಟಿದೆ. ಜೂನ್‌ ತಿಂಗಳ ಮಳೆಯ ಲೆಕ್ಕಾಚಾರ ಭರವಸೆಯಿಂದಲೇ ಕೂಡಿದ್ದರೂ ಬಿತ್ತನೆಗೆ ಸಕಾಲದಲ್ಲಿ ಮಳೆಯಿಲ್ಲದಂತಾಗಿದೆ. ದಾವಣಗೆರೆ: ಮಳೆಯಾಶ್ರಿತ ಪ್ರದೇಶ 114980 ಹೆಕ್ಟೇರ್‌ನಲ್ಲಿ ಬಿತ್ತನೆ ಆಗಿರುವ ಮೆಕ್ಕೆಜೋಳ, ಶೇಂಗಾ ಸೇರಿ ನಾನಾ ಬೆಳೆಗಳಿಗೆ ಹಾಗೂ ಇನ್ನೂ ಜಿಲ್ಲೆಯಲ್ಲಿ 40253 ಹೆ. ಬಿತ್ತನೆ ಆಗಬೇಕಿದ್ದು ಈಗ ಮಳೆಯ ಅಗತ್ಯವಿದೆ. ಚಿಕ್ಕಬಳ್ಳಾಪುರ: ಜೂನ್‌ ತಿಂಗಳಲ್ಲಿ ಸರಿಯಾದ ಮಳೆಯಾಗದ ಕಾರಣ ಬಿತ್ತನೆ ಕುಂಠಿತವಾಗಿತ್ತು. ಕೆಲವೆಡೆ ಬೀಜ ಮೊಳಕೆಯೊಡೆಯದೇ ಸಮಸ್ಯೆಯಾಗಿತ್ತು ಈಗ ಮಳೆ ಸುರಿದ ಕಾರಣ ಸರಿಹೋಗಬಹುದು. ವಾಡಿಕೆ ಮಳೆ ಅಂದರೇನು..? -19 ಮಿ.ಮೀ.ವರೆಗೆ ದಾಖಲಾಗುವ ಮಳೆಯನ್ನು ವಾಡಿಕೆಗಿಂತ ಕಡಿಮೆ ಎಂದು ಹೇಳುತ್ತೇವೆ. -20 ಮಿ.ಮೀ. ನಂತರ ದಾಖಲಾಗುವ ಮಳೆಯನ್ನು ಕೊರತೆ ಎಂದು ಹೇಳಲಾಗುವುದು. ಹೀಗಾಗಿ ದಕ್ಷಿಣ ಕನ್ನಡ, ಮೈಸೂರು ಮತ್ತು ಮಂಡ್ಯ ಕೊರತೆಯುಳ್ಳ ಜಿಲ್ಲೆಗಳು ಎಂದು ಕರೆಯಲಾಗುವುದು. ಉಳಿದ ಮೈನಸ್‌ 19ಗಿಂತ ಕಡಿಮೆ ಮಿ.ಮೀ. ಮಳೆ ದಾಖಲಾಗಿರುವ ಜಿಲ್ಲೆಗಳನ್ನು ವಾಡಿಕೆಗಿಂತ ಕಡಿಮೆ ಎನ್ನಲಾಗುವುದು ಎಂದು ಕೆಎನ್‌ಡಿಎಂಸಿ ತಿಳಿಸಿದೆ. 29.17 ಹೆಕ್ಟೇರ್‌ನಲ್ಲಿ ಬಿತ್ತನೆ: ಮುಂಗಾರು ಹಂಗಾಮಿನಲ್ಲಿ 2021ರ ಜೂನ್‌ 25ರಂತೆ ಕೃಷಿ ಬೆಳೆಗಳ ಪ್ರಸ್ತಾವಿತ ಬಿತ್ತನೆ ಗುರಿ 77 ಲಕ್ಷ ಹೆಕ್ಟೇರ್‌ಗೆ ಪ್ರತಿಯಾಗಿ 29.17 ಲಕ್ಷ ಹೆಕ್ಟೇರ್‌ ವಿಸ್ತೀರ್ಣದಲ್ಲಿ ಬಿತ್ತನೆಯಾಗಿದೆ. (ಶೇ.36.58). ಬಿತ್ತನೆ ಬೀಜ 2021-22ರ ಮುಂಗಾರು ಹಂಗಾಮಿಗೆ ಬಿತ್ತನೆ ಬೀಜಗಳ ಬೇಡಿಕೆ 6 ಲಕ್ಷ ಕ್ವಿಂಟಲ್‌ಗಳೆಂದು ಅಂದಾಜಿಸಿದ್ದು, ಜೂ.25ರವರೆಗೆ ರೈತ ಸಂಪರ್ಕ ಕೇಂದ್ರಗಳಲ್ಲಿ ಇದುವರೆಗೆ 2,68,121 ಲಕ್ಷ ಕ್ವಿಂಟಲ್‌ಗಳಷ್ಟು ಬಿತ್ತನೆ ಬೀಜಗಳನ್ನು ವಿತರಿಸಲಾಗಿದೆ. ರಸಗೊಬ್ಬರ ಕೂಡ 26.47 ಲಕ್ಷ ಮೆಟ್ರಿಕ್‌ ಟನ್‌ನ ಬೇಡಿಕೆಯನ್ನು ಅಂದಾಜಿಸಲಾಗಿತ್ತು. ಅದರಂತೆ ಜೂ.25ರವರೆಗೆ 9.93 ಲಕ್ಷ ಮೆಟ್ರಿಕ್‌ ಟನ್‌ ನಾನಾ ರಸಗೊಬ್ಬರಗಳು ಸರಬರಾಜಾಗಿವೆ. ಉಳಿಕೆ 11.30 ಲಕ್ಷ ಮೆಟ್ರಿಕ್‌ ಟನ್‌ ದಾಸ್ತಾನು ಇರುತ್ತದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.


from India & World News in Kannada | VK Polls https://ift.tt/3yrl4UV

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...