ಹೊಸದಿಲ್ಲಿ: ರಫೇಲ್ ಹಗರಣ ಆರೋಪ ಕುರಿತ ತನಿಖೆಯನ್ನು ಜಂಟಿ ಸದನ ಸಮಿತಿಗೆ ಒಪ್ಪಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿರುವ ಬೆನ್ನ ಹಿಂದೆಯೇ ಪಕ್ಷದ ನಾಯಕ ರಾಹುಲ್ ಗಾಂಧಿ, ‘ಮೋದಿ ಸರಕಾರ ಜೆಪಿಸಿ ತನಿಖೆಗೆ ಹಿಂಜರಿಯುತ್ತಿರುವುದು ಏಕೆ’ ಎನ್ನುವ ತಾರ್ಕಿಕ ಪ್ರಶ್ನೆ ಮೂಲಕ ಆನ್‌ಲೈನ್ ಸಮೀಕ್ಷೆ ಆರಂಭಿಸಿದ್ದಾರೆ. ಹಿಂಜರಿಕೆ ಏಕೆ ಎನ್ನುವ ಪ್ರಶ್ನೆಗೆ ನಾಲ್ಕು ಆಯ್ಕೆಗಳನ್ನು ಕೂಡ ರಾಹುಲ್ ನೀಡಿದ್ದಾರೆ. ಅಪರಾಧಿ ಪ್ರಜ್ಞೆ, ಸ್ನೇಹಿತರ ರಕ್ಷಣೆ, ಜೆಪಿಸಿಗೆ ರಾಜ್ಯಸಭೆ ಸ್ಥಾನ ಬೇಡವಾಗಿದೆ ಮತ್ತು ಮೇಲಿನ ಎಲ್ಲಾಆಯ್ಕೆಗಳು ಎನ್ನುವ ನಾಲ್ಕು ಆಯ್ಕೆ ನೀಡಿದ್ದಾರೆ. ರಫೇಲ್ ಒಪ್ಪಂದದಲ್ಲಿ ಪಕ್ಷಪಾತ ಮತ್ತು ಭ್ರಷ್ಟಾಚಾರ ನಡೆದಿದೆ ಎಂದು ಕಾಂಗ್ರೆಸ್ ಈ ಮೊದಲಿನಿಂದಲೂ ಆರೋಪಿಸುತ್ತಾ ಬಂದಿದೆ. 2019ರ ಚುನಾವಣೆಯಲ್ಲಿಈ ವಿಷಯವನ್ನೇ ಅಸ್ತ್ರವಾಗಿ ಬಳಸಿಕೊಂಡಿದ್ದ ಕಾಂಗ್ರೆಸ್ ತೀವ್ರ ಮುಖಭಂಗ ಅನುಭವಿಸಿತ್ತು. ಈಗ ಫ್ರಾನ್ಸ್ ನ್ಯಾಯಾಲಯ, ಒಪ್ಪಂದದಲ್ಲಿ ಭ್ರಷ್ಟಾಚಾರ ಮತ್ತು ಪಕ್ಷಪಾತ ನಡೆದಿರಬಹುದು ಎನ್ನುವ ಶಂಕೆ ವ್ಯಕ್ತಪಡಿಸಿ ತನಿಖೆಗೆ ಆದೇಶ ನೀಡಿದ ತರುವಾಯ ಮತ್ತೊಮ್ಮೆ ಚರ್ಚೆಯ ಮುಂಚೂಣಿಗೆ ಬಂದಿದೆ. ಮೌನ ಯಾಕೆ? ಫ್ರಾನ್ಸ್ ನ್ಯಾಯಾಲಯ ರಫೇಲ್ ಭ್ರಷ್ಟಾಚಾರದ ತನಿಖೆಗೆ ಆದೇಶ ನೀಡಿದ್ದರೂ ಕೇಂದ್ರ ಸರಕಾರ ಆ ಬಗ್ಗೆ ಪ್ರತಿಕ್ರಿಯಿಸದೇ ಮೌನಕ್ಕೆ ಶರಣಾಗಿರುವುದು ಸೋಜಿಗದ ಸಂಗತಿ ಎಂದು ಕಾಂಗ್ರೆಸ್ ಅಚ್ಚರಿ ವ್ಯಕ್ತಪಡಿಸಿದೆ. ದೇಶದ ಭದ್ರತೆ ವಿಷಯದಲ್ಲಿ ಮೋದಿ ಸರಕಾರದ್ದು ತೋರಿಕೆಯೇ ಹೆಚ್ಚು, ನೈಜ ಕೆಲಸ ಕಡಿಮೆ. ತಮ್ಮ ಬಂಡವಾಳಶಾಹಿ ಆಪ್ತಮಿತ್ರರಿಗೆ ನೆರವು ನೀಡಲು ಮೋದಿ ಅವರು ರಕ್ಷಣಾ ವಿಷಯಗಳನ್ನು ನೆಪವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಪವನ್ ಖೇರಾ ಟೀಕಿಸಿದ್ದಾರೆ. ರಫೇಲ್ ಒಪ್ಪಂದದಲ್ಲಿ ಭ್ರಷ್ಟಾಚಾರ ನಡೆದಿದೆ. ತಮಗೆ ಬೇಕಾದವರಿಗೆ ಗುತ್ತಿಗೆ ಕೊಡಿಸಲು ಲಾಬಿ ಮಾಡಲಾಗಿದೆ. ಈ ಬಗ್ಗೆ ರಫೇಲ್ ನಿರ್ಮಾತೃ ರಾಷ್ಟ್ರವಾದ ಫ್ರಾನ್ಸ್‌ಗೆ ಅನುಮಾನ ಮೂಡಿದೆ. ಹೀಗಾಗಿಯೇ ಅಲ್ಲಿನ ನ್ಯಾಯಾಲಯ ತನಿಖೆಗೆ ಆದೇಶಿಸಿದೆ. ಇಷ್ಟೆಲ್ಲ ಬೆಳವಣಿಗೆಗಳು ಘಟಿಸುತ್ತಿದ್ದರೂ ಕೇಂದ್ರ ಸರಕಾರ ಮಾತ್ರ ತುಟಿಬಿಚ್ಚಿಲ್ಲ. ಏಕೆ ಈ ಮೌನ ಎಂದು ಪವನ್ ಪ್ರಶ್ನಿಸಿದ್ದಾರೆ.
from India & World News in Kannada | VK Polls https://ift.tt/3xh6i2Q