ಬೆಂಗಳೂರು: ಫೋನ್ ಕದ್ದಾಲಿಕೆ ಆರೋಪ ಸಂಬಂಧ ನಗರ ಕೇಂದ್ರ ವಿಭಾಗದ ಅಧಿಕಾರಿಗಳು ನೀಡಿದ್ದ ನೋಟಿಸ್‌ನಂತೆ ಶಾಸಕ ಅರವಿಂದ್ ಬೆಲ್ಲದ್ ಬುಧವಾರ ವಿಚಾರಣೆಗೆ ಹಾಜರಾಗಿದ್ದರು. ತನಿಖಾಧಿಕಾರಿ ಶೇಷಾದ್ರಿಪುರಂ ಪೃಥ್ವಿ ಅವರ ಪ್ರಶ್ನೆಗಳಿಗೆ ಉತ್ತರಿಸಿದ್ದು, ದೂರು ದಾಖಲಾಗಿದ್ದ ವೇಳೆ ತಪ್ಪು ಫೋನ್ ನಂಬರ್ ಕೊಟ್ಟಿರುವುದಾಗಿ ಹೇಳಿಕೊಂಡಿದ್ದಾರೆ. ತಮಗೆ ಯುವರಾಜ್ ಸ್ವಾಮಿ ಹೆಸರಿನಲ್ಲಿ ಫೋನ್ ಕರೆ ಮಾಡಿಸಿ ಅದನ್ನು ಕದ್ದಾಲಿಕೆ ಮಾಡಲಾಗುತ್ತಿದೆ ಎಂದು ಬೆಲ್ಲದ್ ಆರೋಪಿಸಿದ್ದರು. ಪ್ರಕರಣ ದಾಖಲಾದ ಬಳಿಕ ಅವರು ತಮಗೆ ಕರೆ ಬಂದಿತ್ತು ಎನ್ನಲಾದ ಫೋನ್ ಸಂಖ್ಯೆಯನ್ನು ಪೊಲೀಸರಿಗೆ ನೀಡಿದ್ದರು. ಅದನ್ನು ಬೆನ್ನಟ್ಟಿದ್ದ ಪೊಲೀಸರಿಗೆ ಅಚ್ಚರಿ ಉಂಟಾಗಿತ್ತು. ಅದು ಮುಶೀರಾಬಾದ್ ನಿವಾಸಿ ಜಿತೇಂದ್ರ ಪ್ರಖ್ಯಾತ್ ಎಂಬುವರಿಗೆ ಸೇರಿದ ಸಂಖ್ಯೆಯಾಗಿತ್ತಲ್ಲದೆ, ಅವರು ಹಾಗೂ ಆರ್‌ಎಸ್‌ಎಸ್ ಜತೆ ನಿಕಟ ಸಂಪರ್ಕ ಹೊಂದಿದ್ದವರು. ಅಲ್ಲದೆ, ಬಿಜೆಪಿ ರಾಷ್ಟ್ರೀಯ ನಾಯಕರ ಜತೆಯೂ ಸಂಪರ್ಕ ಹೊಂದಿದ್ದರು. ಹೀಗಾಗಿ ಬೆಲ್ಲದ್ ನೀಡಿರುವ ಸಂಖ್ಯೆ ಬಿಜೆಪಿಯೊಳಗಿನ ಸಂಚಲನಕ್ಕೆ ಕಾರಣವಾಗಿತ್ತು. ವಿಚಾರಣೆಗೆ ಹಾಜರಾಗಿರುವ ಬೆಲ್ಲದ್ ತಾವು ತಪ್ಪು ಗ್ರಹಿಕೆಯಿಂದ ಜಿತೇಂದ್ರ ಪ್ರಖ್ಯಾತ್ ಅವರ ನಂಬರ್ ನೀಡಿರುವುದಾಗಿ ಹೇಳಿಕೊಂಡಿದ್ದಾರೆ. ''ಕೆಲ ದಿನಗಳ ಹಿಂದೆ ಸ್ವಾಮಿ ಹೆಸರಿನಲ್ಲಿ ಕರೆ ಬಂದಿತ್ತು. ಈ ಸಂಖ್ಯೆಯನ್ನು ನನ್ನ ಜತೆಗಿದ್ದವರು ಡೈರಿಯಲ್ಲಿಬರೆದಿಟ್ಟುಕೊಂಡಿದ್ದರು. ಅದೇ ಡೈರಿಯಲ್ಲಿ ಹೈದರಾಬಾದ್‌ನಲ್ಲಿ ಗೊತ್ತಿರುವ ಅರ್ಚಕರ ಮೊಬೈಲ್ ನಂಬರ್ ಸಂಖ್ಯೆಯನ್ನು 'ಸ್ವಾಮಿ' ಎಂದು ಬರೆದಿಡಲಾಗಿತ್ತು. ಗೊಂದಲದಲ್ಲಿಅವರ ಸಂಖ್ಯೆ ಕೊಟ್ಟಿದ್ದೇನೆ" ಎಂದು ತನಿಖಾಧಿಕಾರಿಗಳಿಗೆ ಸ್ಪಷ್ಟನೆ ನೀಡಿರುವ ಅರವಿಂದ್ ಬೆಲ್ಲದ್ ಕರೆ ಬಂದಿದ್ದ ಸಂಖ್ಯೆ ಪತ್ತೆಹಚ್ಚಿ ಕೊಡುವುದಾಗಿ ಹೇಳಿದ್ದಾರೆ. ಅರವಿಂದ ಬೆಲ್ಲದ್ ಅವರು ನೀಡಿದ್ದ ಸಂಖ್ಯೆಯ ಜಾಡು ಬೆನ್ನತ್ತಿದ್ದ ಪೊಲೀಸರು ಮುಶೀರಾಬಾದ್‌ನ ಅವರ ನಿವಾಸಕ್ಕೆ ತೆರಳಿ ಅವರನ್ನು ವಿಚಾರಣೆಗೆ ಒಳಪಡಿಸಲು ಮುಂದಾಗಿದ್ದರು. ಈ ವೇಳೆ ಬೆಲ್ಲದ್ ಅವರಿಂದ ಪೊಲೀಸರಿಗೆ ಫೋನ್ ಕರೆ ಹೋಗಿದ್ದು, ಅವರನ್ನು ಪ್ರಶ್ನಿಸದೆ ವಾಪಸ್ ಬರುವಂತೆ ಸೂಚಿಸಿದ್ದಾರೆ. ಮಾಜಿ ಸಚಿವ ಎಸ್‌ಎ ರಾಮದಾಸ್ ಮತ್ತು ಕೇಂದ್ರ ಸಚಿವ ಸದಾನಂದ ಗೌಡ ಅವರೂ ಪೊಲೀಸರಿಗೆ ಕರೆ ಮಾಡಿದ್ದಾರೆ ಎನ್ನಲಾಗಿದೆ.
from India & World News in Kannada | VK Polls https://ift.tt/3h9NWuM