ಡೆಹ್ರಾಡೂನ್: ಉತ್ತರಾಖಂಡ ತೀರತ್ ಸಿಂಗ್ ರಾವತ್ ಶುಕ್ರವಾರ ದಿಢೀರ್ ನೀಡಿದ್ದಾರೆ. ಸಿಎಂ ಹುದ್ದೆ ವಹಿಸಿಕೊಂಡ ಕೇವಲ ನಾಲ್ಕೇ ತಿಂಗಳಿಗೆ ಅವರು ಹುದ್ದೆ ತೊರೆದಿದ್ದಾರೆ. ಶಾಸಕರಾಗಿ ಆಯ್ಕೆಯಾಗದೆ ಮುಖ್ಯಮಂತ್ರಿ ಕುರ್ಚಿಗೇರಿದ್ದ ರಾವತ್ ನಿಯಮದಂತೆ ಆರು ತಿಂಗಳ ಒಳಗಾಗಿ ಶಾಸಕರಾಗಿ ಆಯ್ಕೆಯಾಗಬೇಕಿದೆ. ಆದರೆ ಆ ಸಾಧ್ಯತೆ ತೀರಾ ಕಡಿಮೆ ಇರುವುದರಿಂದ ಪಕ್ಷದ ವರಿಷ್ಠರ ಸೂಚನೆಯಂತೆ ಅವರು ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಶನಿವಾರ ಬೆಳಗ್ಗೆ ಅವರು ರಾಜ್ಯಪಾಲರನ್ನು ಭೇಟಿ ಮಾಡಿ ಅಧಿಕೃತವಾಗಿ ರಾಜೀನಾಮೆ ನೀಡಲಿದ್ದಾರೆ. ಹಿರಿಯ ನಾಯಕರಾದ ಸತ್ಪಾಲ್ ರಾವತ್ ಮತ್ತು ಧನಪಾಲ್ ರಾವತ್ ಪೈಕಿ ಒಬ್ಬರು ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗುವ ಸಾಧ್ಯತೆ ಇದೆ. ಶನಿವಾರ ಬೆಳಗ್ಗೆಯೇ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ನೂತನ ಮುಖ್ಯಮಂತ್ರಿಯ ಘೋಷಣೆಯಾಗಲಿದೆ ಎಂದು ಬಿಜೆಪಿಯ ನಾಯಕರೊಬ್ಬರು ಮಾಹಿತಿ ನೀಡಿದ್ದಾರೆ. ಕಳೆದ ಮಾರ್ಚ್ 10ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ತೀರತ್ ಅವರು, ಸೆಪ್ಟೆಂಬರ್ ಒಳಗಾಗಿ ಶಾಸಕರಾಗಿ ಆಯ್ಕೆಯಾಗಬೇಕಿದೆ. ಗಂಗೋತ್ರಿ ಮತ್ತು ಹಲ್ದ್ವಾನಿ ಕ್ಷೇತ್ರಗಳು ಕ್ರಮವಾಗಿ ಬಿಜೆಪಿ ಶಾಸಕ ಗೋಪಾಲ್ ಸಿಂಗ್ ರಾವತ್, ಪ್ರತಿಪಕ್ಷ ನಾಯಕರಾಗಿದ್ದ ಕಾಂಗ್ರೆಸ್‌ನ ಇಂದಿರಾ ಹೃದಯೇಶ್ ನಿಧನದಿಂದ ತೆರವಾಗಿವೆ. ಮುಂದಿನ ವರ್ಷದ ಆರಂಭದಲ್ಲಿಉತ್ತರಾಖಂಡ ವಿಧಾನಸಭೆ ಚುನಾವಣೆ ನಡೆಯಲಿರುವುದರಿಂದ ಈ ಎರಡು ಕ್ಷೇತ್ರಗಳಿಗೆ ಚುನಾವಣಾ ಆಯೋಗವು ಉಪ ಚುನಾವಣೆ ನಡೆಸುವ ಸಾಧ್ಯತೆ ಬಹಳ ಕಡಿಮೆ. ಕೊರೊನಾ ಸಾಂಕ್ರಾಮಿದ ಸಂದರ್ಭದಲ್ಲಿ ಚುನಾವಣೆ ನಡೆಸುವುದಕ್ಕೆ ಸುಪ್ರೀಂ ಕೋರ್ಟ್ ಸಹ ಅಸಮಾಧಾನ ವ್ಯಕ್ತಪಡಿಸಿರುವುದರಿಂದ ಆಯೋಗ ಹಿಂದೇಟು ಹಾಕಲು ಕಾರಣವಾಗಿದೆ. ಬುಧವಾರ ದಿಢೀರ್ ಹೊಸದಿಲ್ಲಿಗೆ ಭೇಟಿ ನೀಡಿದ್ದ ತೀರತ್ ಅವರು, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿದ್ದರು. ಕಾನೂನು ಸಂಘರ್ಷಕ್ಕೆ ಸಿಲುಕುವುದಕ್ಕಿಂತ ಮೊದಲೇ ರಾಜೀನಾಮೆ ನೀಡುವುದು ಉತ್ತಮ ಎಂಬ ಅಭಿಪ್ರಾಯವನ್ನು ವರಿಷ್ಠರು ವ್ಯಕ್ತಪಡಿಸಿದರು ಎನ್ನಲಾಗಿದೆ. ಮುಖ್ಯಮಂತ್ರಿಯಾಗಿದ್ದ ತ್ರಿವೇಂದ್ರ ಸಿಂಗ್ ರಾವತ್ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿಬಂದ ಕಾರಣ ಅವರನ್ನು ಕೆಳಗಿಳಿಸಿ, ಸಂಸದರಾಗಿದ್ದ ತೀರತ್ ಅವರಿಗೆ ಅವರಿಗೆ ನಾಲ್ಕು ತಿಂಗಳ ಹಿಂದೆ ಪಟ್ಟ ಕಟ್ಟಲಾಗಿತ್ತು.
from India & World News in Kannada | VK Polls https://ift.tt/2Txtknp