ಶಿವಮೊಗ್ಗದಲ್ಲಿ ನನೆಗುದಿಗೆ ಬಿದ್ದ ಆವಾಸ್‌ ಯೋಜನೆ; ಮನೆಯಿಲ್ಲದೆ ಅತಂತ್ರರಾದ ಸ್ಲಮ್‌ ವಾಸಿಗಳು!

ಸಂತೋಷ್‌ ಕಾಚಿನಕಟ್ಟೆ ಕೊಳಚೆ ನಿರ್ಮೂಲನಾ ಮಂಡಳಿಯು ಪಕ್ಕಾ ನಿರ್ಮಿಸಿಕೊಡುವ ಆಸೆಗೆ ಕಟ್ಟುಬಿದ್ದು ಕಚ್ಚಾ ಮನೆಯನ್ನು ನೆಲಕ್ಕುರುಳಿಸಿದ ನಿವಾಸಿಗಳು ಎರಡು ವರ್ಷದಿಂದ ಮನೆ ಇಲ್ಲದೆ ಅತಂತ್ರರಾಗಿದ್ದಾರೆ. 2021ನೇ ಏಪ್ರಿಲ್‌ ಅಂತ್ಯಕ್ಕೆ ಮನೆಗಳ ನಿಮಾರ್ಣ ಪೂರ್ಣಗೊಂಡು ಗೃಹ ಪ್ರವೇಶ ಮಾಡಬೇಕಿದ್ದ ಫಲಾನುಭವಿಗಳು ಈಗ ಪ್ರತಿದಿನ ಅರ್ಧ ನಿರ್ಮಾಣವಾದ ಮನೆಯನ್ನು ನೋಡಿ ಕಣ್ಣೀರಿಡುತ್ತಿದ್ದಾರೆ. ಮನೆಗಳ ಗೋಡೆಗಳು ಮೇಲೆದ್ದು ಹಲವು ತಿಂಗಳಾಗಿದ್ದು, ಕಾಮಗಾರಿ ಮುಂದುವರಿಯುವ ಲಕ್ಷಣವೇ ಕಾಣದಿರುವುದರಿಂದ ಮುಂದೇನು ಮಾಡಬೇಕೆಂದು ತೋಚದೆ ತಲೆಮೇಲೆ ಕೈ ಹೊತ್ತು ಕುಳಿತಿದ್ದಾರೆ. ಕೊಳಚೆ ನಿರ್ಮೂಲನಾ ಮಂಡಳಿಯು ಕೊಳಚೆ ಪ್ರದೇಶದ ನಿವಾಸಿಗಳಿಗೆ ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ ಮನೆ ನಿರ್ಮಾಣಕ್ಕೆ ಅರ್ಜಿ ಆಹ್ವಾನಿಸಿತ್ತು. ಮನೆ ನಿರ್ಮಾಣಕ್ಕೆ ಸಾಮಾನ್ಯ ವರ್ಗದವರಿಗೆ ಕೇಂದ್ರದ 1.50 ಲಕ್ಷ ರೂ. ಮತ್ತು ರಾಜ್ಯದ 1.20 ಲಕ್ಷ ರೂ.(ಪರಿಶಿಷ್ಟರಿಗೆ 2 ಲಕ್ಷ ರೂ.) ಸಹಾಯಧನ, ಫಲಾನುಭವಿಯಿಂದ 75 ಸಾವಿರ ರೂ.(ಪರಿಶಿಷ್ಟರು 50 ಸಾವಿರ ರೂ.) ಮತ್ತು ಕಾರ್ಮಿಕ ಇಲಾಖೆಯಲ್ಲಿ ಲೇಬರ್‌ ಕಾರ್ಡ್‌ ಹೊಂದಿರುವವರಿಗೆ ಶೂನ್ಯ ಬಡ್ಡಿ ದರದಲ್ಲಿ 1.55 ಲಕ್ಷ ರೂ. (ಪರಿಶಿಷ್ಟರಿಗೆ 1 ಲಕ್ಷ ರೂ.) ಸಾಲ ಒದಗಿಸುವ ಭರವಸೆ ನೀಡಲಾಗಿತ್ತು. ಪಕ್ಕಾ ಮನೆಯ ಕನಸು ಕಚ್ಚಾ ಮನೆಯಾದರೂ ನೆಮ್ಮದಿಯಿಂದ ಇದ್ದ ನಿವಾಸಿಗಳಿಗೆ ಬೋರ್ಡ್‌ ಸುಸಜ್ಜಿತ ಪಕ್ಕಾ ಮನೆ ನಿರ್ಮಿಸಿಕೊಡುವ ಕನಸು ಬಿತ್ತುತ್ತಿದ್ದಂತೆ ಶಾಂತಿನಗರ, ಮಲ್ಲಿಕಾರ್ಜುನ ನಗರ, ರಾಜೀವ್‌ಗಾಂಧಿ ಬಡಾವಣೆ ಸೇರಿದಂತೆ ವಿವಿಧ ಸ್ಲಮ್‌ಗಳ 1,600 ನಿವಾಸಿಗಳು ಮನೆಗೆ ಅರ್ಜಿ ಸಲ್ಲಿಸಿದ್ದರು. ಅದರಲ್ಲಿ 900 ಫಲಾನುಭವಿಗಳು 2019ರಲ್ಲೇ ತಮ್ಮ ಪಾಲಿನ ಹಣದ ಡಿಡಿ ಸಲ್ಲಿಸಿ, ತಮ್ಮ ಹಳೇ ಮನೆಗಳನ್ನು ಕೆಡವಿ ನಿವೇಶನ ಬಿಟ್ಟುಕೊಟ್ಟಿದ್ದರು. ಎಲ್ಲವೂ ಅಂದುಕೊಂಡಂತೆ ನಡೆದಿದ್ದಲ್ಲಿ 2021ನೇ ಏಪ್ರಿಲ್‌ನಲ್ಲಿ ಕಾಮಗಾರಿ ಪೂರ್ಣಗೊಂಡು ಇಷ್ಟೊತ್ತಿಗೆ ಫಲಾನುಭವಿಗಳು ಮನೆ ಸೇರಬೇಕಾಗಿತ್ತು. ಆದರೆ, ಇದೂವರೆಗೆ 370 ಮನೆಗಳ ನಿರ್ಮಾಣ ಪೂರ್ಣವಾದರೆ ಇನ್ನೂ 600 ಮನೆಗಳ ಕಾಮಗಾರಿ ಶೇ.50ಕ್ಕೆ ನಿಂತಿದೆ. ಕೈ ಎತ್ತಿದ ಕಾರ್ಮಿಕ ಇಲಾಖೆ ಲೇಬರ್‌ ಕಾರ್ಡ್‌ ಹೊಂದಿರುವವರಿಗೆ ಮನೆ ಕಟ್ಟಿಕೊಳ್ಳಲು ಶೂನ್ಯ ಬಡ್ಡಿ ದರದಲ್ಲಿ ಸಾಲ ಒದಗಿಸುವ ಭರವಸೆ ನೀಡಿದ್ದ ಕಾರ್ಮಿಕ ಇಲಾಖೆಯು ಯೋಜನೆಯ ಅರ್ಧದಲ್ಲೇ ಸಾಲ ಕೊಡುವುದನ್ನು ನಿಲ್ಲಿಸಿತು. ಇದು ಇಡೀ ಯೋಜನೆ ನನೆಗುದಿಗೆ ಕಾರಣವಾಯಿತು. ಕಾರ್ಮಿಕ ಇಲಾಖೆ ಸಾಲಕ್ಕೆ ನಕಾರ ಸೂಚಿಸುತ್ತಿದ್ದಂತೆ ಮನೆ ನಿರ್ಮಾಣ ಮಾಡುತ್ತಿದ್ದ ಗುತ್ತಿಗೆದಾರರು ಸಹ ಕೆಲಸ ನಿಲ್ಲಿಸಿದ್ದಾರೆ. ಉಳಿದ ಮೊತ್ತವನ್ನು ಫಲಾನುಭವಿಗಳೇ ಭರಿಸುವುದಾದಲ್ಲಿ ಮನೆ ಪೂರ್ಣಗೊಳಿಸುವುದಾಗಿ ಹೇಳುತ್ತಿದ್ದಾರೆ. ಆದರೆ, ಕೂಲಿಯೇ ಜೀವನಾಧಾರವಾದ ಮತ್ತು ಕೊರೊನಾದಿಂದಾಗಿ ಕೂಲಿಯನ್ನು ಕಳೆದುಕೊಂಡು ಜೀವನ ನಡೆಸುವುದೇ ದೊಡ್ಡ ಸಾಹಸವಾಗಿರುವಾಗ ಹಣ ಎಲ್ಲಿಂದ ತರುವುದು ಎಂದು ಫಲಾನುಭವಿಗಳು ಪ್ರಶ್ನಿಸುತ್ತಾರೆ. ಬ್ಯಾಂಕ್‌ನಿಂದಲೂ ಸಾಲ ಇಲ್ಲಬ್ಯಾಂಕ್‌ಗಳಲ್ಲಿ ಸಾಲ ಪಡೆಯಲು ಹೋದರೆ ನಿವೇಶನದ ಹಕ್ಕುಪತ್ರ ಕೇಳುತ್ತಾರೆ. ಆದರೆ, ಸ್ಲಮ್‌ನಲ್ಲಿರುವ ನಿವಾಸಿಗಳಿಗೆ ಹಕ್ಕುಪತ್ರ ಇಲ್ಲದಿರುವುದರಿಂದ ಬ್ಯಾಂಕ್‌ನಲ್ಲೂ ಸಾಲ ದೊರೆಯುತ್ತಿಲ್ಲ. ಇದಕ್ಕೆ ಸಂಬಂಧಿಸಿದಂತೆ ಫಲಾನುಭವಿಗಳು ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾಉಸ್ತುವಾರಿ ಸಚಿವರ ಕಚೇರಿ, ಕೊಳಚೆ ನಿರ್ಮೂಲನಾ ಮಂಡಳಿ ಕಚೇರಿ ಎದುರು ಹಲವು ಬಾರಿ ಪ್ರತಿಭಟನೆ ನಡೆಸಿದ್ದಾರೆ. ವಸತಿ ಸಚಿವ ಸೋಮಣ್ಣ ಅವರಿಗೂ ಮನವಿ ಸಲ್ಲಿಸಿದ್ದರು. ಒಂದು ವರ್ಷದಿಂದ ಇನ್ನೊಂದು ವಾರದಲ್ಲಿ, ತಿಂಗಳಲ್ಲಿ ಸಮಸ್ಯೆ ಬಗೆಹರಿಸುತ್ತೇವೆ ಎಂದು ಹೇಳುತ್ತಾ ಬಂದಿದ್ದಾರೆ ಹೊರತು ಕಾಮಗಾರಿ ಪುನಾರಂಭಿಸಲಿಲ್ಲ. ಶಾಂತಿನಗರದಲ್ಲಿ ಸ್ಲಮ್‌ ಬೋರ್ಡ್‌ನಿಂದ 2008ರಲ್ಲಿ ನೂರಾರು ಮನೆಗಳನ್ನು ನಿರ್ಮಿಸಿಕೊಟ್ಟಿದ್ದರಿಂದ ಅದನ್ನು ನಂಬಿ ಹಣ ಕಟ್ಟಿದ್ದೆವು. 2 ವರ್ಷವಾದರೂ ಪೂರ್ಣಗೊಂಡಿಲ್ಲ. ಅಧಿಕಾರಿಗಳು ಪ್ರತಿ ದಿನವೂ ಒಂದೊಂದು ಸಬೂಬು ಹೇಳುತ್ತಾರೆ. ಮನೆಗಳಿಲ್ಲದೆ ಕೆಲವರು ಬಾಡಿಗೆ ಕಟ್ಟಲಾಗದೆ ಟೆಂಟ್‌ ಹಾಕಿಕೊಂಡು ಜೀವನ ಮಾಡುತ್ತಿದ್ದಾರೆ. ಅಧಿಕಾರಿಗಳು, ಸಚಿವರು, ಸರಕಾರಕ್ಕೆ ನಮ್ಮಂತವರ ಕಷ್ಟ ಅರ್ಥವಾಗುವುದಿಲ್ಲವೇ? ಮಹದೇವ, ಶಾಂತಿನಗರ ಕಾರ್ಮಿಕರ ಇಲಾಖೆ ಒದಗಿಸುವುದಾಗಿ ಹೇಳಿ ಅರ್ಧದಲ್ಲೇ ನಿಲ್ಲಿಸಿದ ಸಾಲದ ಮೊತ್ತವನ್ನು ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಒದಗಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಇದರ ಬಗ್ಗೆ ರಾಜ್ಯ ಸರಕಾರ ಸಹ ರಾಷ್ಟ್ರೀಕೃತ ಬ್ಯಾಂಕ್‌ನ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿದೆ. ಶೀಘ್ರದಲ್ಲೇ ಎಲ್ಲರಿಗೂ ಸಾಲ ಮಂಜೂರಾಗುವ ನಿರೀಕ್ಷೆ ಇದೆ. ಸಾಲ ಮಂಜೂರಾಗುತ್ತಿದ್ದಂತೆ ಮನೆಗಳ ಕಾಮಗಾರಿ ಆರಂಭಿಸಲಾಗುವುದು. ಮಂಜುನಾಥ್‌, ಕಾರ್ಯಪಾಲಕ ಎಂಜಿನಿಯರ್‌, ಕೊಳಚೆ ನಿರ್ಮೂಲನಾ ಮಂಡಳಿ, ಶಿವಮೊಗ್ಗ


from India & World News in Kannada | VK Polls https://ift.tt/35UWEGN

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...