ಸೂರತ್: 'ಎಲ್ಲ ಕಳ್ಳರ ಹೆಸರೂ ಮೋದಿ ಎಂಬ ಸರ್‌ನೇಮ್ ಏಕೆ ಹೊಂದಿದ್ದಾರೆ?' ಎಂಬ ಹೇಳಿಕೆಗಾಗಿ ಕ್ರಿಮಿನಲ್ ಪ್ರಕರಣ ಎದುರಿಸುತ್ತಿರುವ ಕಾಂಗ್ರೆಸ್ ನಾಯಕ , ಗುಜರಾತ್‌ನ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಗುರುವಾರ ಹಾಜರಾದರು. ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಅಂತಿಮ ಹೇಳಿಕೆ ದಾಖಲಿಸಲು ಜೂನ್ 24ರಂದು ನ್ಯಾಯಾಲಯದ ಮುಂದೆ ಖುದ್ದು ಹಾಜರಾಗುವಂತೆ ರಾಹುಲ್ ಗಾಂಧಿ ಅವರಿಗೆ ಸೂರತ್ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಎಎನ್ ದವೆ ಸೂಚಿಸಿದ್ದರು. ಸೂರತ್-ಪೂರ್ವ ಕ್ಷೇತ್ರದ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಎಂಬುವವರು ದೂರು ದಾಖಲಿಸಿದ್ದರು. 2019ರ ಅಕ್ಟೋಬರ್‌ನಲ್ಲಿ ಕೋರ್ಟ್ ಎದುರು ಹಾಜರಾಗಿದ್ದ ರಾಹುಲ್ ಗಾಂಧಿ, ಆರೋಪಗಳನ್ನು ಒಪ್ಪಿಕೊಳ್ಳುತ್ತೀರಾ ಎಂದು ಪ್ರಶ್ನಿಸಿದಾಗ, ತಾವು ತಪ್ಪಿತಸ್ಥ ಅಲ್ಲ ಎಂದು ಹೇಳಿದ್ದರು. 2019ರ ಲೋಕಸಭೆ ಚುನಾವಣೆ ಪ್ರಚಾರದ ವೇಳೆ ರಾಹುಲ್ ಗಾಂಧಿ ಅವರು, ವಂಚನೆ ಆರೋಪದಲ್ಲಿ ದೇಶದಿಂದ ಪರಾರಿಯಾಗಿರುವ ನೀರವ್ ಮೋದಿ ಮತ್ತು ಲಲಿತ್ ಮೋದಿ, ನರೇಂದ್ರ ಮೋದಿ.. ಹೀಗೆ ಎಲ್ಲ ಕಳ್ಳರ ಹೆಸರಿನ ಸರ್‌ನೇಮ್‌ನಲ್ಲಿ ಮೋದಿ ಎಂದು ಸಾಮಾನ್ಯವಾಗಿ ಇರುವುದು ಏಕೆ? ಎಂದು ಪ್ರಧಾನಿ ಅವರನ್ನು ಟೀಕಿಸಲು ಹೇಳಿದ್ದರು. ಈ ಹೇಳಿಕೆಯ ಮೂಲಕ ರಾಹುಲ್ ಗಾಂಧಿ ಅವರು ಇಡೀ ಮೋದಿ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ ಎಂದು ಪೂರ್ಣೇಶ್ ಮೋದಿ ಆರೋಪಿಸಿದ್ದರು. ಇದು ಮೇಲ್ನೋಟಕ್ಕೆ ಮಾನಹಾನಿ ಪ್ರಕರಣದಂತೆ ಕಂಡುಬಂದಿದೆ ಎಂದು ಕೋರ್ಟ್ ಹೇಳಿತ್ತು.
from India & World News in Kannada | VK Polls https://ift.tt/3j9l6MM