ಮುಂಬಯಿ: ಕೋವಿಡ್-19 ಲಸಿಕೆಗಳ ಉತ್ಪಾದನೆ ಹೆಚ್ಚಳದ ಒತ್ತಡ ಮತ್ತು ಬೆದರಿಕೆಗಳ ನಡುವೆ ಇದ್ದಕ್ಕಿದ್ದಂತೆ ಭಾರತ ತೊರೆದು ಬ್ರಿಟನ್‌ಗೆ ಹಾರಿರುವ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ , ಇನ್ನು ಕೆಲವು ದಿನಗಳಲ್ಲಿಯೇ ಲಂಡನ್‌ನಿಂದ ಭಾರತಕ್ಕೆ ಮರಳುವುದಾಗಿ ತಿಳಿಸಿದ್ದಾರೆ. ಭಾರತದಲ್ಲಿ ಕೋವಿಡ್ ಎರಡನೆಯ ಅಲೆಯ ಪಿಡುಗು ಮಾರಕವಾಗಿ ಪರಿಣಮಿಸಿರುವ ಹಿನ್ನೆಲೆಯಲ್ಲಿ ಕೋವಿಡ್ ಲಸಿಕೆಗಳಿಗೆ ಹೆಚ್ಚುತ್ತಿರುವ ಭಾರಿ ಬೇಡಿಕೆಯನ್ನು ಈಡೇರಿಸುವ ಸಲುವಾಗಿ ಲಸಿಕೆಗಳ ಉತ್ಪಾದನೆ ಹೆಚ್ಚಿಸುವ ಒತ್ತಡ ತಮ್ಮ ಮೇಲೆ ಇದೆ ಎಂದು ತಿಳಿಸಿದ್ದ ಆದಾರ್, ಭಾರತಕ್ಕೆ ಹಿಂದಿರುಗುವ ಪ್ರಕಟಣೆ ನೀಡಿದ್ದಾರೆ. 'ಬ್ರಿಟನ್‌ನಲ್ಲಿನ ನಮ್ಮ ಪಾಲುದಾರರು ಮತ್ತು ಷೇರುದಾರರ ಜತೆ ಅತ್ಯುತ್ತಮ ಸಭೆ ನಡೆಯಿತು. ಈ ನಡುವೆ ಪುಣೆಯಲ್ಲಿ ಕೋವಿಶೀಲ್ಡ್ ಉತ್ಪಾದನೆ ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿದೆ ಎಂದು ತಿಳಿಸಲು ಸಂತಸವಾಗುತ್ತದೆ. ಕೆಲವು ದಿನಗಳಲ್ಲಿ ಮರಳಿದ ಬಳಿಕ ಕಾರ್ಯಾಚರಣೆಯ ಪರಾಮರ್ಶೆ ನಡೆಸುವುದನ್ನು ಎದುರು ನೋಡುತ್ತಿದ್ದೇನೆ' ಎಂದು ಅವರು ಶನಿವಾರ ತಡರಾತ್ರಿ ಟ್ವೀಟ್ ಮಾಡಿದ್ದಾರೆ. ಬ್ರಿಟನ್ ದೈನಿಕವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಆದಾರ್, ಬೇರೆ ದೇಶಗಳಲ್ಲಿಯೂ ಎಸ್‌ಐಐ ಲಸಿಕೆ ಉತ್ಪಾದನೆ ಆರಂಭಿಸಲಿದೆ. ಈ ಬಗ್ಗೆ ಇನ್ನು ಕೆಲವು ದಿನಗಳಲ್ಲಿಯೇ ಪ್ರಕಟಣೆ ನೀಡುವುದಾಗಿ ತಿಳಿಸಿದ್ದರು. ಭಾರತದ ಕೆಲವು ಬಹು ಪ್ರಭಾವಿ ವ್ಯಕ್ತಿಗಳಿಂದ ಬೆದರಿಕೆಯ ಕರೆಗಳು ಬರುತ್ತಿದ್ದು, ಕೋವಿಶೀಲ್ಡ್ ಲಸಿಕೆಗಳನ್ನು ಪೂರೈಕೆ ಮಾಡುವಂತೆ ಆಗ್ರಹಿಸುತ್ತಿದ್ದಾರೆ ಎಂದು ಅವರು ಸಂದರ್ಶನದಲ್ಲಿ ಬಹಿರಂಗಪಡಿಸಿದ್ದರು. ಅದಕ್ಕೂ ಕೆಲವು ದಿನಗಳ ಮುನ್ನ ಅವರಿಗೆ ಕೇಂದ್ರ ಸರ್ಕಾರ ವೈ ಪ್ಲಸ್ ಭದ್ರತೆ ಒದಗಿಸಿತ್ತು. 'ನಾನು ಇನ್ನಷ್ಟು ದಿನಗಳ ಕಾಲ ಲಂಡನ್‌ನಲ್ಲಿಯೇ ಇರಲಿದ್ದೇನೆ. ಏಕೆಂದರೆ ಆ ಸನ್ನಿವೇಶಕ್ಕೆ ನಾನು ಮರಳು ಬಯಸುವುದಿಲ್ಲ. ಎಲ್ಲವೂ ನನ್ನ ಹೆಗಲ ಮೇಲೆ ಬೀಳುತ್ತಿದೆ. ಆದೆ ನಾನೊಬ್ಬನೇ ಎಲ್ಲವನ್ನೂ ಮಾಡಲಾಗುವುದಿಲ್ಲ. ನಿರೀಕ್ಷೆ ಹಾಗೂ ಆಕ್ರಮಣಶೀಲತೆಯ ಮಟ್ಟವನ್ನು ಹಿಂದೆಂದೂ ನೋಡಿರಲಿಲ್ಲ. ಇದು ಹೆಚ್ಚಾಗುತ್ತಿದೆ. ಪ್ರತಿಯೊಬ್ಬರೂ ತಮಗೆ ಲಸಿಕೆ ಸಿಗಬೇಕು ಎನ್ನುತ್ತಿದ್ದಾರೆ. ತಮಗಿಂತ ಮೊದಲು ಬೇರೆಯವರು ಏಕೆ ಅದನ್ನು ಪಡೆದುಕೊಳ್ಳಬೇಕು ಎಂಬುದನ್ನು ಅವರು ಅರ್ಥಮಾಡಿಕೊಳ್ಳಲಾರರು' ಎಂದು ಆದಾರ್ ಹೇಳಿದ್ದರು.
from India & World News in Kannada | VK Polls https://ift.tt/2QFVmvG