ಬೆಂಗಳೂರು: ಚಾಮರಾಜನಗರ ಆಕ್ಸಿಜನ್ ದುರಂತದ ಬೆನ್ನಲ್ಲೇ ಸಿಎಂ ಬಿಎಸ್ ಯಡಿಯೂರಪ್ಪ ಅವರು ಮಂಗಳವಾರ ತುರ್ತು ಸಚಿವ ಸಂಪುಟ ಸಭೆಯನ್ನು ಕರೆದಿದ್ದಾರೆ. ಭಾನುವಾರ ರಾತ್ರಿ ನಡೆದ ದುರಂತದಲ್ಲಿ 23 ಮಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ ಎಷ್ಟು ಮಂದಿ ಆಕ್ಸಿಜನ್ ಕೊರತೆಯಿಂದ ಮೃತಪಟ್ಟಿದ್ದಾರೆ ಎಂಬುವುದು ದೃಢಪಟ್ಟಿಲ್ಲ. ಈ ಘಟನೆ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರ ಹಾಗೂ ಜಿಲ್ಲಾಡಳಿತದ ವೈಫಲ್ಯ ಇಲ್ಲಿ ಎದ್ದುಕಾಣುತ್ತಿದೆ. ಜೊತೆಗೆ ಜಿಲ್ಲೆಗಳ ನಡುವಿನ ಸಮನ್ವಯದ ಕೊರತೆಯೂ ಕಾಣಿಸುತ್ತಿದೆ. ಈ ಹಿನ್ನೆಲೆಯಲ್ಲಿ ಸಿಎಂ ತುರ್ತು ಕರೆದಿದ್ದಾರೆ. ಸಭೆಯಲ್ಲಿ ಆಕ್ಸಿಜನ್ ಕೊರತೆ ನಿಭಾಯಿಸುವ ನಿಟ್ಟಿನಲ್ಲಿ ಮಹತ್ವದ ಚರ್ಚೆಗಳು ನಡೆಯುವ ಸಾಧ್ಯತೆ ಇದೆ. ಮತ್ತೊಂದು ಕಡೆಯಲ್ಲಿ ದುರಂತ ಕುರಿತಾಗಿ ಸಿಎಂ ಬಿಎಸ್‌ವೈ ಚಾಮರಾಜನಗರ ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಅವರನ್ನು ತಮ್ಮ ಕಾವೇರಿ ನಿವಾಸಕ್ಕೆ ಕರೆಸಿಕೊಂಡು ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಹಾಗು ಕೂಡಲೇ ಘಟನಾ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿಂದಲೇ ಮಾಹಿತಿ ನೀಡುವಂತೆ ಸೂಚನೆ ನೀಡಿದ್ದಾರೆ. ಚಾಮರಾಜ ನಗರದ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಭಾನುವಾರ ಮಧ್ಯರಾತ್ರಿ ಆಕ್ಸಿಜನ್ ಖಾಲಿಯಾಗಿದ್ದು, ಈ ಹಿನ್ನೆಲೆ ವೆಂಟಿಲೇಟರ್‌ನಲ್ಲಿದ್ದ 23 ಜನ ಕೊರೊನಾ ರೋಗಿಗಳು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಜಿಲ್ಲಾಸ್ಪತ್ರೆ ಆವರಣದಲ್ಲಿ ಆರು ಸಾವಿರ ಲೀಟರ್ ಆಕ್ಸಿಜನ್ ಘಟಕ ಸ್ಥಾಪನೆಯಾಗಿದೆಯಾದರೂ ಅದಕ್ಕೆ ಆಕ್ಸಿಜನ್ ಪೂರೈಕೆ ಆಗಿರಲಿಲ್ಲ. ಭಾನುವಾರ ಮಧ್ಯರಾತ್ರಿ ಅದರಲ್ಲಿದ್ದ ಆಕ್ಸಿಜನ್ ಮುಗಿದಿದೆ. ಹೀಗಾಗಿ ವೆಂಟಿಲೇಟರ್‌ನಲ್ಲಿದ್ದ ರೋಗಿಗಳು ಮೃತಪಟ್ಟಿದ್ದಾರೆ.
from India & World News in Kannada | VK Polls https://ift.tt/3eLDXcY