ಅಹ್ಮದಾಬಾದ್: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 2021ರ ಆವೃತ್ತಿಯ ಟೂರ್ನಿಯ ಪಂದ್ಯದಲ್ಲಿ ಸೋಲು ಅನುಭವಿಸಿದ ಬಳಿಕ ಮಾತನಾಡಿದ ಪಂಜಾಬ್ ಕಿಂಗ್ಸ್ ಹಂಗಾಮಿ ನಾಯಕ , ನಾವು ಗಳಿಸಿದ ಮೊತ್ತದಲ್ಲಿ 10 ರನ್ ಕಡಿಮೆಯಾಗಿದೆ ಎಂದು ಹೇಳಿದ್ದಾರೆ. ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ ನಿಯಮಿತ ನಾಯಕ ಅನುಪಸ್ಥಿತಿಯಲ್ಲಿ ತನ್ನ ಪಾಲಿನ 20 ಓವರ್‌ಗಳಿಗೆ 6 ವಿಕೆಟ್ ಕಳೆದುಕೊಂಡು 166 ರನ್ ದಾಖಲಿಸಿತು. ಬಳಿಕ ಗುರಿ ಹಿಂಬಾಲಿಸಿದ ಡೆಲ್ಲಿ ಕ್ಯಾಪಿಟಲ್ಸ್ 17.4 ಓವರ್‌ಗಳಿಗೆ 4 ವಿಕೆಟ್ ಕಳೆದುಕೊಂಡು 167 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿನಲ್ಲಿ ಶಿಖರ್ ಧವನ್ (69) ಮಹತ್ತರ ಪಾತ್ರವಹಿಸಿದರು. ಧವನ್ ಜೊತೆಗೆ ಓಪನಿಂಗ್ ಬಂದಿದ್ದ ಪೃಥ್ವಿ ಶಾ ಸ್ಪೋಟಕ 39 ರನ್ ಗಳಿಸಿ ತಂಡದ ಗೆಲುವಿಗೆ ಕೈ ಜೋಡಿಸಿದರು. ಪಂಜಾಬ್ ಕಿಂಗ್ಸ್ ಪರ ಕ್ರಿಸ್ ಜೋರ್ಡನ್, ಹಪ್ರೀತ್ ಬ್ರಾರ್ ಹಾಗೂ ರೈಲಿ ಮೆರೆಡಿತ್ ತಲಾ ಒಂದೊಂದು ವಿಕೆಟ್ ಪಡೆದುಕೊಂಡರು. ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಯಾಂಕ್ ಅಗರ್ವಾಲ್, "ಪಂದ್ಯ ಆರಂಭಕ್ಕೂ ಮುನ್ನ ಕ್ರಿಸ್ ಗೇಲ್ ಅಥವಾ ಡಾವಿಡ್ ಮಲಾನ್ ಅವರಲ್ಲಿ ಒಬ್ಬರನ್ನು ಓಪನಿಂಗ್ ಆಡಿಸಲು ಮಾತನಾಡಿದ್ದೆವು. ಆದರೆ, ಇದು ಸಕಾರವಾಗಲಿಲ್ಲ. ಸದ್ಯದ ಮಟ್ಟಿಗೆ ನಾವು ಸ್ಪರ್ಧಾತ್ಮಕ ಮೊತ್ತವನ್ನು ಕಲೆ ಹಾಕಿದೆವು. ಆದರೆ, ನಾವು ಇನ್ನೂ 10 ರನ್ ಹೆಚ್ಚು ದಾಖಲಿಸಬೇಕಾಗಿತ್ತು," ಎಂದು ಹೇಳಿದರು. ಮುಂದಿನ ಪಂದ್ಯಗಳಲ್ಲಿ ಫ್ಯಾಬಿಯನ್ ಅಲ್ಲೆನ್ ಹಾಗೂ ಮೊಯ್ಸೆಸ್ ಹೆನ್ರಿಕ್ಸ್ ಅವರಲ್ಲಿ ಯಾರಿಗೆ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶ ನೀಡಲಾಗುತ್ತದೆ ಎಂದು ಹೇಳಿದ ಪ್ರಶ್ನೆಗೆ ಉತ್ತರಿಸಿದ ಮಯಾಂಕ್, "ಈ ಬಗ್ಗೆ ನಾವು ಕುಳಿತು ಯೋಚನೆ ಮಾಡಬೇಕಾಗಿದೆ. ಈ ಪಂದ್ಯದಲ್ಲಿ ಬಲಿಷ್ಠ ಬ್ಯಾಟಿಂಗ್ ವಿಭಾಗವಿರುವ ಡೆಲ್ಲಿ ಕ್ಯಾಪಿಟಲ್ಸ್ ವಿಕೆಟ್‌ಗಳನ್ನು ಬೇಗ ಉರುಳಿಸಲು ಯೋಜನೆ ರೂಪಿಸಿದ್ದೆವು. ಆದರೆ, ಇದು ಸಾಧ್ಯವಾಗಲಿಲ್ಲ. ಇದರ ಹೊರತಾಗಿಯೂ ನಮ್ಮ ಆಟಗಾರರ ಪ್ರದರ್ಶನವನ್ನು ಬೆಂಬಲಿಸಬೇಕಾಗಿದೆ," ಎಂದರು. ಕೆ.ಎಲ್ ರಾಹುಲ್ ಪಂದ್ಯಕ್ಕೆ ಅಲಭ್ಯರಾಗುತ್ತಿದ್ದಂತೆ ನಾಯಕರಾಗಿ ನೀವು ಅಲ್ಪ ಸಮಯದಲ್ಲಿ ಹೇಗೆ ತಯಾರಿ ನಡೆಸಿದ್ದೀರಿ ಎಂದು ಕೇಳಿದ ಪ್ರಶ್ನೆಗೆ, " ಈ ಋತುವಿನಲ್ಲಿ ನನ್ನನ್ನು ಸುತ್ತು ಹಾಕಲಾಗಿದೆ. ನಾವು ತಂಡದ ಮೀಟಿಂಗ್‌ನಲ್ಲಿದ್ದೆವು ಹಾಗೂ ಬೆಳಗ್ಗೆ ರಾಹುಲ್ ಅಲಭ್ಯತೆ ಬಗ್ಗೆ ಗೊತ್ತಾಯಿತು. ಈ ವೇಳೆ ನಾನು ತಂಡವನ್ನು ಮುನ್ನಡೆಸಬೇಕೆಂದ ವಿಷಯ ತಿಳಿಯಿತು. ಸಿಕ್ಕ ಅಲ್ಪ ಸಮಯದಲ್ಲಿ ತಂಡಕ್ಕೆ ಅಗತ್ಯವಾದ ಯೋಜನೆಯನ್ನು ರೂಪಿಸಿದ್ದೇನೆ," ಎಂದು ಮಯಾಂಕ್ ತಿಳಿಸಿದರು. ಈ ಗೆಲುವಿನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡ 12 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರ ಸ್ಥಾನಕ್ಕೆ ಮರಳಿತು. ಇನ್ನು ಆಡಿರುವ ಎಂಟು ಪಂದ್ಯಗಳಲ್ಲಿ 6 ಅಂಕಗಳನ್ನು ಕಲೆ ಹಾಕಿರುವ ಪಂಜಾಬ್ ಕಿಂಗ್ಸ್ ಆರನೇ ಸ್ಥಾನದಲ್ಲಿಯೇ ಉಳಿಯಿತು. "ನೀವು ಬ್ಯಾಟ್ಸ್‌ಮನ್ ಆಗಿ ಆಡಿದಾಗ ನಾಯಕನಾಗಿ ಚಿಂತಿಸುವುದಿಲ್ಲ ಎಂದು ಭಾವಿಸುತ್ತೇನೆ. ಒಬ್ಬ ಆಟಗಾರನಾಗಿ ನಿಮ್ಮ ಪಾತ್ರವನ್ನು ಅಲ್ಲಿ ಕಾರ್ಯಗತಗೊಳಿಸುತ್ತೀರಿ. ಆದರೆ, ನಾಯಕನಾಗಿ ನೀವು ಹೆಚ್ಚುವರಿ ಜವಾಬ್ದಾರಿಯಿಂದ ಬ್ಯಾಟ್ ಮಾಡಬೇಕಾಗುತ್ತದೆ ಹಾಗೂ ಮುಂಚೂಣಿಯಲ್ಲಿ ನಿಂತು ತಂಡವನ್ನು ಮುನ್ನಡೆಸಬೇಕಾಗುತ್ತದೆ," ಎಂದು ಮಯಾಂಕ್ ಅಗರ್ವಾಲ್ ಹೇಳಿದರು. ಇದಕ್ಕೂ ಮುನ್ನ ಮುನ್ನ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡದ ಪರ ನಾಯಕ ಮಯಾಂಕ್ ಅಗರ್ವಾಲ್ ಅಜೇಯ 99 ರನ್ ಸಿಡಿಸುವ ಮೂಲಕ ಪಂಜಾಬ್ ಕಿಂಗ್ಸ್ 166 ರನ್ ಗಳಿಸಲು ಮಹತ್ತರ ಪಾತ್ರವಹಿಸಿದರು. ಮಯಾಂಕ್ ಅಗರ್ವಾಲ್ ಜೊತೆ ಡಾವಿಡ್ ಮಲಾನ್ 26 ರನ್ ಗಳಿಸಿ ತಂಡಕ್ಕೆ ನೆರವಾದರು. ಡೆಲ್ಲಿ ಪರ ಕಗಿಸೊ ರಬಾಡ ಮೂರು ವಿಕೆಟ್ ಪಡೆದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3eaRc7G