'ನಿಮ್ಮ ಕೈಯಲ್ಲಿ ರಕ್ತ ನೋಡಬೇಕಾಗುತ್ತೆ, ಹುಷಾರ್‌.!' ಆಸ್ಟ್ರೇಲಿಯಾ ಪಿಎಂಗೆ ಸ್ಲೇಟರ್‌ ಖಡಕ್‌ ವಾರ್ನಿಂಗ್‌!

ಹೊಸದಿಲ್ಲಿ: ವಿಶ್ವದ ಶ್ರೀಮಂತ ಫ್ರಾಂಚೈಸಿ ಲೀಗ್‌ ಎಂದೇ ಬಿಂಬಿಸಿಕೊಂಡಿರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿ ಮುಗಿದ ಬಳಿಕ ಭಾರತದಿಂದ ತವರಿಗೆ ಮರಳುವ ಆಸ್ಟ್ರೇಲಿಯಾ ಕ್ರಿಕೆಟಿಗರ ಪ್ರವೇಶವನ್ನು ನಿ‍ಷೇಧ ಮಾಡಿರುವ ಆಸ್ಟ್ರೇಲಿಯನ್‌ ಪ್ರಧಾನ ಮಂತ್ರಿ ಅವರನ್ನು ಮಾಜಿ ಕ್ರಿಕೆಟಿಗ ಮಿಚೆಲ್‌ ಸ್ಲ್ಯಾಟರ್‌ ಟೀಕಿಸಿದ್ದಾರೆ. ಭಾರತದಲ್ಲಿ ಐಪಿಎಲ್‌ ಟೂರ್ನಿ ಆಡುತ್ತಿರುವ ಆಟಗಾರರಿಗೆ ಆಸ್ಟ್ರೇಲಿಯಾಗೆ ಮರಳಲು ವಿಶೇಷ ವಿಮಾನದ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಮುಂಬೈ ಇಂಡಿಯನ್ಸ್ ತಂಡದ ಕ್ರಿಸ್‌ ಲೀನ್‌ ತಮ್ಮ ದೇಶದ ಪ್ರಧಾನ ಮಂತ್ರಿಗೆ ಈ ಹಿಂದೆ ಮನವಿ ಮಾಡಿದ್ದರು. ಆದರೆ, ಪ್ರಧಾನಿ ಇದಕ್ಕೆ ನಿರಾಕರಿಸಿದ್ದರು. ನೀವು ದೇಶದ ಪರ ಆಡುತ್ತಿಲ್ಲ, ಹಾಗಾಗಿ, ನಾವು ನಿಮಗೆ ಹಿಂತಿರುಗಲು ವಿಶೇಷ ಪ್ರಯಾಣದ ವ್ಯವಸ್ಥೆಗಳನ್ನು ಮಾಡಲು ಸಾದ್ಯವಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಆಸ್ಟ್ರೇಲಿಯಾ ಮಾಜಿ ಆಟಗಾರ , "ನಿಮ್ಮ ಸರ್ಕಾರ ಆಸ್ಟ್ರೇಲಿಯಾ ಪ್ರಜೆಗಳ ರಕ್ಷಣೆ ಬಗ್ಗೆ ಕಾಳಜಿ ವಹಿಸುವುದಾದರೆ ಅವರನ್ನು ತವರಿಗೆ ಮರಳಲು ಅವಕಾಶ ಮಾಡಿಕೊಡಿ. ಇದಕ್ಕೆ ನೀವು ಒಪ್ಪುವುದಿಲ್ಲ!! ನಿಮ್ಮ ಕೈಯಲ್ಲಿ ನೆತ್ತರು ನೋಡಬೇಕಾಗುತ್ತದೆ ಪಿಎಂ. ಈ ರೀತಿ ಹೇಳಲು ನಿಮಗೆ ಎಷ್ಟು ಧೈರ್ಯ? ಹಾಗಾದರೆ ಕ್ವಾರಂಟೈನ್‌ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ," ಎಂದು ಸ್ಲೇಟರ್‌ ಟ್ವೀಟ್‌ ಮಾಡಿ ಪ್ರಶ್ನಿಸಿದ್ದಾರೆ. ಮಿಚೆಲ್‌ ಸ್ಲೇಟರ್‌ ಅವರ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ ನೆಟ್ಟಿಗರು ಕೊರೊನಾ ವೈರಸ್‌ ಸಾಂಕ್ರಾಮಿಕ ರೋಗದ ನಡುವೆ ನಿಮಗೆ ಹಣ ಮುಖ್ಯವಾಯಿತೇ ಎಂದು ಟೀಕಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ಭಾರತದಿಂದ ಮಧ್ಯೆದಲ್ಲಿಯೇ ವಾಪಸ್‌ ಆಗಿದ್ದರಿಂದ ನಾನು ಹಣ ಪಡೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು. "ಇದೆಲ್ಲವೂ ಹಣಕ್ಕಾಗಿ ಎಂದು ಯಾರು ಚಿಂತಿಸುತ್ತಿದ್ದಾರೆ. ಅವರು ಇದನ್ನು ಮರೆತುಬಿಡಿ. ನನ್ನ ಜೀವನಕ್ಕಾಗಿ ನಾನು ಇದನ್ನೆ ಮಾಡುತ್ತೇನೆ ಹಾಗೂ ಬಹುಬೇಗ ಅಲ್ಲಿಂದ ವಾಪಸ್‌ ಆಗಿದ್ದರಿಂದ ನನಗೆ ಹಣ ಕೂಡ ಸಿಕ್ಕಿಲ್ಲ. ದಯವಿಟ್ಟು ಟೀಕಿಸುವುದನ್ನು ನಿಲ್ಲಿಸಿ ಹಾಗೂ ಭಾರತದಲ್ಲಿ ಪ್ರತಿನಿತ್ಯ ಸಾವಿರಾರು ಜನ ಕೋವಿಡ್-19ನಿಂದ ಮೃತಪಡುತ್ತಿದ್ದಾರೆ," ಎಂದು ಸ್ಲೇಟರ್ ಟೀಕಾಕಾರರಿಗೆ ದಿಟ್ಟ ಉತ್ತರ ನೀಡಿದರು. ಕೋವಿಡ್‌-19 ಕಠಿಣ ಸನ್ನಿವೇಶದಿಂದಾಗಿ ಮೇ 15 ರಿಂದ ಭಾರತದಿಂದ ನೇರವಾಗಿ ಆಸ್ಟ್ರೇಲಿಯಾಗೆ ಬರುವ ಪ್ರಯಾಣಿಕರ ವಿಮಾನಗಳನ್ನು ನಿಷೇಧಿಸಲಾಗಿದೆ ಎಂದು ಪ್ರಧಾನ ಮಂತ್ರಿ ಮಾರಿಸನ್‌ ಪ್ರಕಟಿಸಿದ್ದರು. "ಆಸ್ಟ್ರೇಲಿಯಾ ಕ್ರಿಕೆಟಿಗರು ಐಪಿಎಲ್‌ ಟೂರ್ನಿ ಆಡಲು ಖಾಸಗಿ ವಿಮಾನಗಳ ಮೂಲಕ ಭಾರತಕ್ಕೆ ತೆರಳಿದ್ದಾರೆ. ಅವರು ಆಸ್ಟ್ರೇಲಿಯಾ ತಂಡದ ಮೂಲಕ ಭಾರತ ಪ್ರವಾಸಕ್ಕೆ ಹೋಗಿಲ್ಲ. ಈ ಹಿನ್ನೆಲೆಯಲ್ಲಿ ಅವರಿಗೆ ಸರ್ಕಾರದಿಂದ ವಿಶೇಷ ಸೌಲಭ್ಯಗಳನ್ನು ನೀಡಲಾಗುವುದಿಲ್ಲ," ಎಂದು ಪ್ರಧಾನಿ ಮಾರಿಸನ್‌ ಈ ಹಿಂದೆ ಹೇಳಿದ್ದರು. ಕೋವಿಡ್-19 ಸನ್ನಿವೇಶ ಇರುವ ಹಿನ್ನೆಲೆಯಲ್ಲಿ ಐಪಿಎಲ್‌ ಟೂರ್ನಿ ಮುಗಿದ ಬಳಿಕ ಆಸ್ಟ್ರೇಲಿಯಾ ಆಟಗಾರರನ್ನು ಕರೆಸಿಕೊಳ್ಳಲು ನಾವು ಯಾವುದೇ ವಿಶೇಷ ವಿಮಾನಗಳನ್ನು ವ್ಯವಸ್ಥೆ ಮಾಡುವ ಯೋಚನೆ ಇಲ್ಲ ಎಂದು ಕ್ರಿಕೆಟ್‌ ಆಸ್ಟ್ರೇಲಿಯಾ ಸಿಇಓ ನಿಕ್‌ ಹಾಕ್ಲೀ ಸೋಮವಾರ ಹೇಳಿದ್ದಾರೆ. ಸದ್ಯ ಭಾರತದಲ್ಲಿ ಪ್ರತಿನಿತ್ಯ 3 ಲಕ್ಷಕ್ಕೂ ಅಧಿಕ ಕೋವಿಡ್‌-19 ಪ್ರಕರಣಗಳು ದಾಖಲಾಗುತ್ತಿದ್ದು, 3 ಸಾವಿರನ್ನೂ ಅಧಿಕ ಮಂದಿ ಮಾರಣಾಂತಿಕ ವೈರಸ್‌ಗೆ ಬಲಿಯಾಗಿದ್ದಾರೆ. ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಪಿನ್ನರ್‌ ಆಡಂ ಝಾಂಪ ಹಾಗೂ ವೇಗಿ ಕೇನ್‌ ರಿಚರ್ಡ್ಸನ್‌ ಮತ್ತು ರಾಜಸ್ಥಾನ್‌ ರಾಯಲ್ಸ್ ತಂಡದ ಆಂಡ್ರೆ ಟೈ ಅವರು ಐಪಿಎಲ್‌ ಟೂರ್ನಿಯನ್ನು ಅರ್ಧಕ್ಕೆ ಕೈಬಿಟ್ಟು ತವರಿಗೆ ಮರಳಿದ್ದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3xKtQ0I

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...