ಬೆಂಗಳೂರು: ಕಳೆದ ಬಾರಿ ಸಂಪುಟ ವಿಸ್ತರಣೆ ವೇಳೆ ಸಚಿವರಾದ ಐವರಿಗೆ ಜಿಲ್ಲಾ ಉಸ್ತುವಾರಿ ಹಂಚಿಕೆ ಮಾಡಲಾಗಿದೆ. ಜತೆಗೆ ಡಿಸಿಎಂ ಗೋವಿಂದ ಕಾರಜೋಳ ಅವರಿಗೆ ಪ್ರತಿಷ್ಠಿತ ಬೆಳಗಾವಿ ಜಿಲ್ಲಾಉಸ್ತುವಾರಿ ನೀಡಲಾಗಿದೆ. ಡಿಸಿಎಂ ಗೋವಿಂದ ಕಾರಜೋಳ ಅವರಿಗೆ ಈ ಹಿಂದೆ ತವರು ಜಿಲ್ಲೆ ಬಾಗಲಕೋಟೆಯ ಜತೆಗೆ ಹೆಚ್ಚುವರಿ ಕಲಬುರ್ಗಿ ಜಿಲ್ಲೆ ಉಸ್ತುವಾರಿಯಿತ್ತು. ಇದೀಗ ಉಮೇಶ್ ಕತ್ತಿ ಅವರಿಗೆ ಬಾಗಲಕೋಟೆ ಹಾಗೂ ಮುರುಗೇಶ ನಿರಾಣಿ ಅವರಿಗೆ ಕಲಬುರ್ಗಿ ಉಸ್ತುವಾರಿಯನ್ನು ಸಿಎಂ ಬಿ.ಎಸ್.ಯಡಿಯೂರಪ್ಪ ವಹಿಸಿದ್ದಾರೆ. ಅರವಿಂದ ಲಿಂಬಾವಳಿ ಅವರಿಗೆ ಬೀದರ್ ಉಸ್ತುವಾರಿ ನೀಡಿದ್ದರಿಂದ ಸಚಿವ ಪ್ರಭು ಚೌವ್ಹಾಣ್ ಬಿಡುಗಡೆ ಹೊಂದಿದಂತಾಗಿದೆ. ಅದಲು ಬದಲು ಆಗುತ್ತಾ?ಸಚಿವರನ್ನು ಸ್ವಂತ ಜಿಲ್ಲೆಯ ಉಸ್ತುವಾರಿಯಿಂದ ಮುಕ್ತಗೊಳಿಸಿ ಬೇರೆ ಜಿಲ್ಲೆ ಉಸ್ತುವಾರಿಗೆ ನೇಮಿಸುವ ಸುಳಿವನ್ನು ಈ ಹಿಂದೆಯೇ ನೀಡಿದ್ದರು. ಉಪ ಚುನಾವಣೆ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದೂ ಈ ಬಗ್ಗೆ ಅವರು ಪ್ರತಿಕ್ರಿಯಿಸಿದ್ದರು. ಹೀಗಾಗಿ ಉಮೇಶ್ ಕತ್ತಿಗೆ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ನೀಡಲಾಗಿದ್ದು, ಬೀದರ್‌ಗೆ ಅರವಿಂದ ಲಿಂಬಾವಳಿ, ಎಸ್ ಅಂಗಾರಗೆ ಚಿಕ್ಕಮಗಳೂರು, ಎಂಟಿಬಿ ನಾಗರಾಜ್ ಕೋಲಾರ ಜಿಲ್ಲೆ ಮತ್ತು ಮುರುಗೇಶ್ ನಿರಾಣಿಗೆ ಕಲಬುರಗಿ ಜಿಲ್ಲೆ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ. ಈ ಮಧ್ಯೆ ಸ್ವಂತ ಜಿಲ್ಲೆ ಉಸ್ತುವಾರಿ ಹೊಂದಿರುವ ಇತರ ಸಚಿವರಿಗೂ ಬೇರೆ ಜಿಲ್ಲೆಯ ಹೊಣೆಗಾರಿಕೆ ನೀಡುವ ವಿಚಾರ ಪುನಃ ಮುನ್ನೆಲೆಗೆ ಬಂದಂತಾಗಿದೆ. ಅದರ ಭಾಗವಾಗಿ ಈ ಬದಲಾವಣೆ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಇತರ ಸಚಿವರ ಜಿಲ್ಲಾ ಉಸ್ತುವಾರಿಯೂ ಬದಲಾಗಬಹುದು ಎಂದು ಹೇಳಲಾಗುತ್ತಿದೆ. ರಮೇಶ್ ಕತ್ತಿ ಅಸಮಾಧಾನ! ಬೆಳಗಾವಿಯಲ್ಲಿ ಅನ್ಯ ಜಿಲ್ಲೆಯ ಸಚಿವರಿಗೆ ಉಸ್ತುವಾರಿ ನೀಡಿರುವುದಕ್ಕೆ ಮಾಜಿ ಸಂಸದ ಹಾಗೂ ಬೆಳಗಾವಿ ಡಿಸಿಸಿ ಬ್ಯಾಂಕಿನ ಅಧ್ಯಕ್ಷ ರಮೇಶ ಕತ್ತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ನಾಲ್ಕು ಜನ ಸರಕಾರದ ಸಂಪುಟದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಪದೇ ಪದೆ ಜಿಲ್ಲೆಯವರನ್ನು ಬಿಟ್ಟು ಬೇರೆಯವರಿಗೆ ಉಸ್ತುವಾರಿ ನೀಡುತ್ತಿರುವುದರಿಂದ ಈಗಿರುವ ಸಚಿವರ ಬಗೆಗೆ ಜನರಲ್ಲಿ ತಪ್ಪು ಕಲ್ಪನೆ ಮೂಡುತ್ತಿದೆ. ಅಲ್ಲದೆ, ನಮ್ಮ ಜಿಲ್ಲೆಯ ಸಮಸ್ಯೆಗಳ ಬಗೆಗೆ ಬೇರೆ ಜಿಲ್ಲೆಯವರಿಗೆ ಗೊತ್ತಿರುವುದಿಲ್ಲ. ಸರಕಾರದ ಯೋಜನೆಗಳ ಜಾರಿಗೆ ತೊಂದರೆಯಾಗುತ್ತದೆ. ಜತೆಗೆ ಪಕ್ಷ ಸಂಘಟನೆಗೂ ಹೊಡೆತ ಬೀಳುತ್ತದೆ. ಹೀಗಾಗಿಯೇ ಲೋಕಸಭಾ ಉಪಚುನಾವಣೆಯ ಗೆಲುವಿನ ಅಂತರ ಕಡಿಮೆಯಾಗಿದೆ. ಆದ್ದರಿಂದ ಮುಖ್ಯಮಂತ್ರಿಗಳು ಜಿಲ್ಲೆಯ ಯಾರಾದರೊಬ್ಬರಿಗೆ ಜಿಲ್ಲಾ ಉಸ್ತುವಾರಿ ಹೊಣೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
from India & World News in Kannada | VK Polls https://ift.tt/3ufw6uu