ಚಾಮರಾಜನಗರ: ಜಿಲ್ಲಾ ಕೋವಿಡ್ ಆಸ್ಪತ್ರೆಯ ಸಿಬ್ಬಂದಿ ಮಾಡಿದ ಮತ್ತೊಂದು ಎಡವಟ್ಟಿನಿಂದಾಗಿ ಕುಟುಂಬವೊಂದು ಸ್ವಲ್ಪ ಸಮಯ ರೋದಿಸುವಂತಾಗಿತ್ತು. ಆಸ್ಪತ್ರೆಯಲ್ಲಿದ್ದ ನಿಮ್ಮವರು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ ಎಂಬ ಮಾಹಿತಿಯನ್ನು ಆಸ್ಪತ್ರೆ ಸಿಬ್ಬಂದಿಯಿಂದ ಲಿಂಗಣಾಪುರದ ವ್ಯಕ್ತಿಯೊಬ್ಬರಿಗೆ ಸೋಮವಾರ ಬೆಳಗ್ಗೆ ಹೋಗಿದೆ. ಅವರ ತಾಯಿ ಚಿಕಿತ್ಸೆ ಪಡೆಯುತ್ತಿದ್ದುದರಿಂದ ಅವರು ಸಾವಿಗೀಡಾಗಿದ್ದಾರೆಂದು ಊರಿನಲ್ಲಿಅಂತ್ಯಕ್ರಿಯೆಗೆ ಬೇಕಾದ ಏರ್ಪಾಟು ಮಾಡಿ ಆಸ್ಪತ್ರೆಯತ್ತ ಧಾವಿಸಿದ್ದಾರೆ. ಯಾರದೋ ಮೃತ ಶರೀರ ತೋರಿಸಿ, ನೋಡಿ ನಿಮ್ಮವರು ಎಂದು ಸಿಬ್ಬಂದಿ ಹೇಳಿದ್ದಾರೆ. ಆದರೆ, ಶವ ಅವರ ತಾಯಿಯದ್ದಾಗಿರಲಿಲ್ಲ. ಕೂಡಲೇ ಅವರು ಆಸ್ಪತ್ರೆಯ ವಾರ್ಡ್‌ಗೆ ತೆರಳಿ ನೋಡಿದಾಗ, ಅವರ ತಾಯಿ ಬೆಡ್‌ನಲ್ಲೇ ಚಿಕಿತ್ಸೆ ಪಡೆಯುತ್ತಾ ಮಲಗಿದ್ದರು. ತಾಯಿಯನ್ನು ಕಂಡ ಪುತ್ರನ ಕಂಗಳಲ್ಲಿಆನಂದಭಾಷ್ಪ ಸುರಿದವು. ನಂತರ ತಿಳಿದ ವಿಚಾರವೆನೆಂದರೆ, ಯಾರಿಗೋ ದೂರವಾಣಿ ಕರೆ ಮಾಡಲು ಹೋಗಿ ಸಿಬ್ಬಂದಿ ಇವರಿಗೆ ಮಾಡಿದ್ದರು. ಈ ಎಡವಟ್ಟು ಒಂದಷ್ಟು ಕಾಲ ಒಂದು ಇಡೀ ಕುಟುಂಬವನ್ನು ದುಃಖದ ಮಡುವಿನಲ್ಲಿ ಮುಳುಗುವಂತೆ ಮಾಡಿತ್ತು.
from India & World News in Kannada | VK Polls https://ift.tt/3vJNk3H