ಬೆಂಗಳೂರು: ತನಿಖೆಯಲ್ಲಿ ಹಸ್ತಕ್ಷೇಪ, ಸುಳ್ಳು ಮತ್ತು ಆಧಾರರಹಿತ ಆರೋಪ ಮಾಡುವ ಮೂಲಕ ಪ್ರಕರಣದ ನಿಜವಾದ ಸಂತ್ರಸ್ತನಾಗಿರುವ ನಮ್ಮ ಕಕ್ಷಿದಾರರನ್ನು ಕುಗ್ಗಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪರ ವಕೀಲರಾದ ಶ್ಯಾಮ್‌ಸುಂದರ್ ಹೇಳಿದ್ದಾರೆ. ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ''ಕಬ್ಬನ್‌ಪಾರ್ಕ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ವ್ಯಕ್ತಿಯೊಬ್ಬರು ತಾನು ಸಂತ್ರಸ್ತೆ ಎನ್ನುತ್ತಿದ್ದಾರೆ. ಆಕೆ ಮತ್ತು ಆಕೆಯ ಪರವಾಗಿ ಕೆಲ ವ್ಯಕ್ತಿಗಳು ಆಧಾರರಹಿತ, ಸುಳ್ಳು ಆರೋಪ ಮತ್ತು ಸುಳ್ಳು ದೂರುಗಳನ್ನು ನೀಡುವ ಮೂಲಕ ತನಿಖೆಯಲ್ಲಿ ಮಧ್ಯಪ್ರವೇಶ ಮಾಡುತ್ತಿದ್ದಾರೆ. ನಿರಂತರವಾಗಿ ಹೇಳಿಕೆಗಳನ್ನು ಬದಲಿಸಿಕೊಂಡು ಸಂಘಟಿತ ಅಪರಾಧದ ಮೂಲಕ ಸುಲಿಗೆ, ರಾಜಕಾರಣಿಗಳನ್ನು ಬೆದರಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಇಲ್ಲಿ ರಮೇಶ್ ಜಾರಕಿಹೊಳಿ ಅವರೇ ಸಂಘಟಿತ ಅಪರಾಧದ ನಿಜವಾದ ಸಂತ್ರಸ್ತ. ತಿರುಚಿದ ವಿಡಿಯೊಗಳನ್ನು ಬಿಡುಗಡೆ ಮಾಡಿ ಅವರಿಗೆ ತೊಂದರೆ ಮಾಡಲಾಗುತ್ತಿದೆ. ಲಾಭದ ಉದ್ದೇಶದಿಂದ ಮಹಿಳೆ ಮೇಲೆ ಒತ್ತಡ ಹಾಕಿ ಆರೋಪ ಮಾಡಲಾಗುತ್ತಿದೆ,'' ಎಂದು ಹೇಳಿದ್ದಾರೆ. ''ತನಿಖೆ ಪ್ರಗತಿಯಲ್ಲಿರುವಾಗಲೇ ತನಿಖಾಧಿಕಾರಿಗಳು, ಎಸ್‌ಐಟಿ ಮೇಲೆ ಅನಗತ್ಯ ಒತ್ತಡ ಹಾಕುವ ಮೂಲಕ ತನಿಖೆಯ ದಿಕ್ಕು ತಪ್ಪಿಸುವುದು ಮತ್ತು ರಕ್ಷಣೆಗಾಗಿ ಸುಳ್ಳು ವಿಷಯಗಳನ್ನು ಸೃಷ್ಟಿಸಲಾಗುತ್ತಿದೆ. ಸಂಬಂಧಿಸಿದವರ ವಿರುದ್ಧ ಕಠಿಣ ಕಾನೂನು ಕ್ರಮವನ್ನು ಜರುಗಿಸಲಾಗುತ್ತದೆ,'' ಎಂದು ಶ್ಯಾಮ್‌ಸುಂದರ್ ಹೇಳಿದ್ದಾರೆ.
from India & World News in Kannada | VK Polls https://ift.tt/3fEuZ31