ಕುಂದಾಣ: ಬಿರು ಬಿಸಿಲಿನ ಆಘಾತದಿಂದ ಕುಕ್ಕಟೋದ್ಯಮಕ್ಕೆ ಭಾರಿ ಹೊಡೆತ ಬಿದ್ದಿದ್ದು, ಇದರಿಂದ ಉತ್ಪಾದನೆ ಕುಸಿತ ಕಾಣುವ ಜತೆಗೆ ದರ ಏರಿಕೆಯಾಗಿದೆ. ಭವಿಷ್ಯದಲ್ಲಿ ದರ ಇನ್ನಷ್ಟು ದುಬಾರಿಯಾಗುವ ಲಕ್ಷಣಗಳಿವೆ. ದೇಶದ ನಾನಾ ಕಡೆಗಳಲ್ಲಿ ಆಗಾಗ ಕಾಣಿಸಿಕೊಳ್ಳುವ ಹಕ್ಕಿಜ್ವರ ವದಂತಿ ಪ್ರತಿ ಬಾರಿಯೂ ಕುಕ್ಕಟೋದ್ಯಮಕ್ಕೆ ತೀವ್ರ ಹೊಡೆತ ನೀಡುತ್ತಿದೆ. ಆದರೆ ಈ ಬಾರಿ ಈ ಜ್ವರದ ಭೀತಿಯಿಂದ ಕುಕ್ಕಟೋದ್ಯಮ ನಲುಗಿಲ್ಲ. ಒದಲಾಗಿ ಉದ್ಯಮಿಗಳು ತಮ್ಮ ಉತ್ಪಾದನೆ ಕಡಿಮೆ ಮಾಡಿದ ಪರಿಣಾಮವಾಗಿ ಈಗ ದರ ಏರಿಕೆಯಾಗಿದೆ. ಇವುಗಳಿಗೆ ಸಾಥ್ ನೀಡುವಂತೆ ಬಿರು ಬಿಸಿಲು ಉದ್ಯಮ ಮತ್ತು ಉತ್ಪಾದನೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಸಾಮಾನ್ಯ ಉಷ್ಣಾಂಶ 25 ಡಿಗ್ರಿ ಇರಬೇಕು. ಆದರೆ ಈ ಬಾರಿ ಉಷ್ಣಾಂಶ 35 ಡಿಗ್ರಿ ಏರಿಕೆಯಾಗುತ್ತಿದೆ. ಇದರಿಂದಾಗಿ ದೊಡ್ಡ ಪ್ರಮಾಣದಲ್ಲಿ ಕೋಳಿ ಮರಿಗಳನ್ನು ಸಾಕುವವರು ಹಿಂದೇಟು ಹಾಕುತ್ತಿದ್ದಾರೆ. ಮಳೆಯಾದರೆ ಬೆಲೆ ಇಳಿಕೆ ಸಾಧ್ಯ: ಬೇಸಿಗೆಯಲ್ಲಿ ಕೋಳಿಗಳ ಸಾವಿನ ಪ್ರಮಾಣ ಹೆಚ್ಚಾಗುತ್ತಿದ್ದು, ಸಾಮಾನ್ಯವಾಗಿ ಬ್ರಾಯ್ಲರ್ ಕೋಳಿಗಳು ಬೇಸಿಗೆಯ ಬಿಸಿ ತಾಳಲಾರದೆ ಹೆಚ್ಚಾಗಿ ಸಾವನ್ನಪ್ಪುತ್ತಿವೆ. ಜತೆಗೆ. ಶ್ವಾಸಕೋಶದ ಸಮಸ್ಯೆ, ರಾಣಿಕೇತು ಕಾಯಿಲೆ ಬಂದರೆ 3 ತಿಂಗಳು ಕೋಳಿ ಫಾರ್ಮ್ ಮುಚ್ಚುವಂತೆ ಆಗುತ್ತದೆ. ಸಾಮಾನ್ಯವಾಗಿ ಬೇಸಿಗೆ ರಹಿತ ದಿನಗಳಲ್ಲಿ ಕೋಳಿಯ ಸಾಮಾನ್ಯ ತೂಕ 2-2.5 ಕೆಜಿ ಇರುತ್ತದೆ. ಆದರೆ ಬೇಸಿಗೆಯಲ್ಲಿ1.8- 2 ಕೆಜಿ ಮಾತ್ರ ಬರುತ್ತಿದೆ. ಕೋಳಿಯ ಬೆಲೆ ಏರಿಕೆಯಾದರೆ ಕೋಳಿ ಮರಿಗಳ ದರ ಸಹ ಏರಿಕೆಯಾಗುತ್ತದೆ. ಫಾರ್ಮ್‌ನಲ್ಲಿ ನೀರಿನ ಅಲಭ್ಯತೆ ಸೇರಿದಂತೆ ಹತ್ತಾರು ಕಾರಣಗಳಿಂದ ಬೇಸಿಗೆಯಲ್ಲಿ ಕುಕ್ಕಟೋದ್ಯಮವನ್ನು ಕಾಡುತ್ತಿದೆ ಎನ್ನುತ್ತಾರೆ ಕೋಳಿ ಫಾರಂಗಳ ಮಾಲೀಕರು ಮತ್ತು ವ್ಯವಸ್ಥಾಪಕರು. ಕೋಳಿ ಮಾಂಸ ಪ್ರಿಯರಿಗೆ ದುಬಾರಿ ಹಣ ನೀಡಿ ಮಾಂಸ ಖರೀದಿಸುವ ಪರಿಸ್ಥಿತಿ ಎದುರಾಗಿದೆ. ಬೇಸಿಗೆ ಬಿರು ಬಿಸಿಲು ಮತ್ತಷ್ಟು ಹೆಚ್ಚಳವಾದರೆ, ಕೋಳಿ ಮಾಂಸದ ದರ ಮತ್ತಷ್ಟು ಏರಿಕೆಯಾಗುವುದರಲ್ಲಿ ಎರಡು ಮಾತಿಲ್ಲ. ಬೇಡಿಕೆಗೆ ತಕ್ಕಂತೆ ಕೋಳಿ ಪೂರೈಕೆ ಇಲ್ಲದ ಪರಿಣಾಮ ಬೆಲೆ ಏರಿಕೆಗೆ ಕಾರಣವಾಗಿದೆ. ಉಷ್ಣಾಂಶ ಹೆಚ್ಚಳದಿಂದ ಬೆಲೆ ದುಬಾರಿಯಾಗುವ ಜತೆಗೆ, ಹೆಚ್ಚಿನ ಪ್ರಮಾಣದಲ್ಲಿ ಕೋಳಿಗಳು ಸಾಯುತ್ತಿವೆ.
from India & World News in Kannada | VK Polls https://ift.tt/3dzafHu