- ಪ್ರಮೋದ ಹರಿಕಾಂತ ಬೆಳಗಾವಿ ಕರ್ನಾಟಕದ ಈ ಉಪಚುನಾವಣೆಯ ಅತ್ಯಂತ ಹೈಪ್ರೊಫೈಲ್ ಕ್ಷೇತ್ರ ಗೋಕಾಕ್‌್. ಇಲ್ಲಿಂದ ಹುಟ್ಟಿಕೊಂಡ ಬಂಡಾಯವೇ ಅಂತಿಮವಾಗಿ 17 ಶಾಸಕರ ರಾಜೀನಾಮೆ, ಮೈತ್ರಿ ಸರಕಾರದ ಪತನ, ಅನರ್ಹತೆ ಮತ್ತು ಉಪಸಮರಕ್ಕೆ ಕಾರಣವಾಗಿದ್ದು. ಮೈತ್ರಿ ಸರಕಾರ ಬೀಳಿಸಿದ ಕಾರಣಕ್ಕೆ ಮಾಜಿ ಸಿಎಂಗಳಾದ ಎಚ್.ಡಿ. ಕುಮಾರಸ್ವಾಮಿ, ಸಿದ್ದರಾಮಯ್ಯ ಅವರು ರಮೇಶ ಜಾರಕಿಹೊಳಿಯನ್ನು ಸೋಲಿಸಲು ಪಣ ತೊಟ್ಟಿದ್ದಾರೆ. ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ರಮೇಶ್ ಋುಣ ತೀರಿಸಲು ನಿಂತಿದ್ದರಿಂದ ಚುನಾವಣಾ ಮಹಾ ಸಂಗ್ರಾಮವೇ ಸೃಷ್ಟಿಯಾಗಿದೆ. ಗೋಕಾಕ್ ಕ್ಷೇತ್ರದ ವಿಶೇಷತೆ ಎಂದರೆ ಇಲ್ಲಿ ಚುನಾವಣೆ ನಡೆಯುವುದು ವ್ಯಕ್ತಿ ಆಧರಿತವಾಗಿ. ಪಕ್ಷಗಳು ಮತ ಹಾಕಲು ಇರುವ ಚಿಹ್ನೆ ಸೂಚಕ ಎನ್ನುವುದು ಬಿಟ್ಟರೆ ಬೇರೆ ಪಾತ್ರ ಇಲ್ಲ. ರಮೇಶ್ ಜಾರಕಿಹೊಳಿ ಪರ ಮತ್ತು ವಿರೋಧಿ ಮತಗಳೇ ಇಲ್ಲಿ ನಿರ್ಣಾಯಕ! ಕಾಂಗ್ರೆಸ್‌ನಲ್ಲಿದ್ದ ರಮೇಶ್ ಜಾರಕಿಹೊಳಿಗೆ ಈ ಬಾರಿ ಕಮಲದ ಚಿಹ್ನೆ. 2018ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಜಾರಕಿಹೊಳಿ ವಿರುದ್ಧ ಸೋತಿದ್ದ ಅಶೋಕ ಪೂಜಾರಿ ಈ ಬಾರಿ ತೆನೆ ಹೊತ್ತಿದ್ದಾರೆ. ರಮೇಶ್ ಸೋದರ ಕಾಂಗ್ರೆಸ್ ಹುರಿಯಾಳು. 2008ರಲ್ಲಿ ಇದೇ ಪರಿಸ್ಥಿತಿ ಏರ್ಪಟ್ಟಿತ್ತು. ಆಗ ರಮೇಶ್ ಜಾರಕಿಹೊಳಿಗೆ ಎದುರಾಗಿ ಮತ್ತೊಬ್ಬ ಸಹೋದರ ಭೀಮಶಿ ಬಿಜೆಪಿಯಿಂದ ಸ್ಪರ್ಧಿಸಿದ್ದರು. ಜೆಡಿಎಸ್‌ನಿಂದ ಅಶೋಕ ಪೂಜಾರಿ. ಅಣ್ಣ-ತಮ್ಮರ ಸ್ಪರ್ಧೆಯಲ್ಲಿ ಇಬ್ಬರೂ ಸೋಲುತ್ತಾರೆ. ಜಾರಕಿಹೊಳಿ ಕುಟುಂಬದ ಗೋಕಾಕ್ ಸಾಮ್ರಾಜ್ಯ ಪತನವಾಗುತ್ತದೆ ಎಂಬ ಮಾತೆಲ್ಲ ಹರಿದಾಡಿತ್ತು. ಆದರೆ, ಆಗ ಕಾಂಗ್ರೆಸ್‌ನಲ್ಲಿದ್ದ ರಮೇಶ್ ಜಾರಕಿಹೊಳಿ 7,000 ಮತದಿಂದ ಗೆದ್ದಿದ್ದರು. ಭೀಮಶಿ ಮೂರನೇ ಸ್ಥಾನದಲ್ಲಿದ್ದರು. ಈ ಬಾರಿಯೂ ಅದೇ ರೀತಿಯ ತ್ರಿಕೋನ ಸ್ಪರ್ಧೆ. ದಶಕದ ಹಿಂದೆ ಜೆಡಿಎಸ್ ಬೆಳಗಾವಿಯಲ್ಲಿ ಪ್ರಬಲ ನೆಲೆ ಹೊಂದಿತ್ತು. ಬಾಲಚಂದ್ರ ಜಾರಕಿಹೊಳಿ, ಉಮೇಶ ಕತ್ತಿ ಜೆಡಿಎಸ್ ಶಾಸಕರಾಗಿದ್ದರು. ಈಗ ಕುಂದಿರುವ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಕುಮಾರಸ್ವಾಮಿ ಅವರು ಅಶೋಕ ಪೂಜಾರಿ ಅವರನ್ನು ಸೆಳೆದುಕೊಂಡಿದ್ದಾರೆ. ಲಿಂಗಾಯತರ ಮತವೇ ನಿರ್ಣಾಯಕ ಲಿಂಗಾಯತರೇ ಪ್ರಧಾನವಾಗಿರುವ ಇಲ್ಲಿ ಹಿಂದುಳಿದ, ಪರಿಶಿಷ್ಟ ವರ್ಗದ ಮತಗಳೇ ರಮೇಶ ಜಾರಕಿಹೊಳಿಯ ಶಕ್ತಿಯಾಗಿದ್ದವು. ಈಗ ಅವರು ಬಿಜೆಪಿಯಲ್ಲಿ ಇರುವ ಕಾರಣಕ್ಕೆ ಮುಸ್ಲಿಂ ಮುಖಂಡರು ಮತದಾನದಿಂದ ದೂರ ಉಳಿಯುವ ಹೇಳಿಕೆ ನೀಡುತ್ತಿದ್ದಾರೆ. ಲಿಂಗಾಯತರು ರಮೇಶ ಜಾರಕಿಹೊಳಿಯನ್ನು ಬೆಂಬಲಿಸುವುದಿಲ್ಲ ಎಂದು ಹೇಳುತ್ತಿದ್ದರೂ ಯಡಿಯೂರಪ್ಪ ಅವರಿಗಾಗಿ ಮತ ಹಾಕುವ ಸಾಧ್ಯತೆ ಇದ್ದೇ ಇದೆ. ಕಾಂಗ್ರೆಸ್ ಎಲ್ಲವರ್ಗದ ಮತದಾರರನ್ನು ಸೆಳೆಯುತ್ತಿದ್ದರೂ ಲಖನ್, ರಮೇಶ ಜಾರಕಿಹೊಳಿಯ ಇನ್ನೊಂದು ಮುಖ ಎನ್ನುವ ಆರೋಪವೂ ಇದೆ. ಜಾತಿ ಲೆಕ್ಕಾಚಾರವೇ ನಿಜವಾದರೆ ಲಿಂಗಾಯತ ಸಮುದಾಯದ ಜೆಡಿಎಸ್ ಅಭ್ಯರ್ಥಿ ಅಶೋಕ ಪೂಜಾರಿಗೆ ವರವಾಗಬೇಕು. ಜಾರಕಿಹೊಳಿ ವಿರೋಧಿ ಮತಗಳೇ ಅಶೋಕ ಪೂಜಾರಿ ಶಕ್ತಿ. ಅಲ್ಪಸಂಖ್ಯಾತ ಮತಗಳೂ ಹಂಚಿಕೆಯಾಗಲಿವೆ. ಒಂದೇ ಕಲ್ಲಿನಲ್ಲಿ ನಾಲ್ಕು ಹಕ್ಕಿ! ಸತೀಶ್-ರಮೇಶ್ ಜಗಳ ಬಾಲ್ಯದಿಂದಲೇ ಬಂದದ್ದು. ರಮೇಶ್ ಜಾರಕಿಹೊಳಿಯನ್ನು ಸೋಲಿಸಲು ಸತೀಶ್ ಹಲವು ಪ್ರಯೋಗ ನಡೆಸಿದ್ದಾರೆ. 2008ರಲ್ಲಿ ಭೀಮಶಿಯನ್ನು ಕಣಕ್ಕಿಳಿಸಿದ್ದು ಇದರಲ್ಲಿ ಒಂದು. ರಮೇಶ್ ಜತೆಗೇ ಇದ್ದ ಲಖನ್ ಸತೀಶ್ ಪ್ರತಿನಿಧಿಸುವ ಯಮಕನ ಮರಡಿ ಮೇಲೆ ಕಣ್ಣಿಟ್ಟಿದ್ದರು. ಇದೀಗ ಸತೀಶ್ ತನ್ನ ಕಡೆಗೆ ಬರುತ್ತಿದ್ದ ಲಖನ್ ಎಂಬ ಬಾಣವನ್ನು ರಮೇಶ್ ಕಡೆಗೇ ತಿರುಗಿಸಿ ಗೋಕಾಕ್‌ನಿಂದ ಕಣಕ್ಕಿಳಿಸಿದ್ದಾರೆ. ಇಲ್ಲಿ ಲಖನ್ ಗೆದ್ದರೆ ರಮೇಶ್ ವಿರುದ್ಧ ಸೇಡಾಗುತ್ತದೆ, ಲಖನ್‌ಗೆ ವ್ಯವಸ್ಥೆಯಾಗುತ್ತದೆ, ಯಮಕನ ಮರಡಿ ಸುರಕ್ಷಿತವಾಗುತ್ತದೆ, ಗೋಕಾಕ್‌ದವರೆಗೂ ಸಾಮ್ರಾಜ್ಯ ವಿಸ್ತರಣೆಯಾಗುತ್ತದೆ ಎನ್ನುವುದು ಸತೀಶ್ ಲೆಕ್ಕಾಚಾರ. ಹೀಗಾಗಿಯೇ ದೊಡ್ಡ ಹೋರಾಟಕ್ಕೆ ಇಳಿದಿದ್ದಾರೆ. ಸಾಹುಕಾರ್ ಮತ ಬ್ಯಾಂಕ್ ರಮೇಶ್ ಜಾರಕಿಹೊಳಿ ಅವರಿಗೆ ಕ್ಷೇತ್ರದಲ್ಲಿ ಒಂದು ಮತ ಬ್ಯಾಂಕ್ ಇದೆ. ಅದರಲ್ಲಿ ಮುಸ್ಲಿಮರು, ಪರಿಶಿಷ್ಟರು ಪ್ರಧಾನ. ಈ ಬಾರಿ ಬಿಜೆಪಿಯಿಂದ ಕಣಕ್ಕಿಳಿದಿರುವುದರಿಂದ ಮುಸ್ಲಿಮರು ಬೆಂಬಲಿಸುತ್ತಾರೆಯೇ ಎಂಬುದು ಪ್ರಶ್ನೆ. ಬಿಜೆಪಿಯೂ ಇಲ್ಲಿ ಲಿಂಗಾಯತ ಮತ ಬ್ಯಾಂಕನ್ನು ಹೊಂದಿದೆ. ಆದರೆ, ಲಿಂಗಾಯತರಿಗೆ ಜಾರಕಿಹೊಳಿ ಬೆಂಬಲಿಸುವಲ್ಲಿ ಕೆಲವು ಆಕ್ಷೇಪಗಳಿವೆ ಎನ್ನಲಾಗುತ್ತಿದೆ. ಸ್ವಯಂ ವರ್ಚಸ್ಸು ಮತ್ತು ಬಿಜೆಪಿ ಬಲವನ್ನು ರಮೇಶ್ ನೆಚ್ಚಿಕೊಂಡಿದ್ದಾರೆ. ಜಾರಕಿಹೊಳಿ ಸಹೋದರರ ಕಿತ್ತಾಟದಲ್ಲಿ ಮೂಗು ತೂರಿಸಲು ಬಿಜೆಪಿ, ಕಾಂಗ್ರೆಸ್ ಮುಖಂಡರು ತಯಾರಾಗಿಲ್ಲ. ಲಖನ್ ಬೆನ್ನಲ್ಲಿದ್ದಾರೆ ಸತೀಶ್ ಲಖನ್ ಜಾರಕಿಹೊಳಿ ಅಭ್ಯರ್ಥಿಯಾದರೂ ಇಲ್ಲಿ ಹೋರಾಟದ ಮುಂಚೂಣಿಯಲ್ಲಿರುವುದು ಮತ್ತೊಬ್ಬ ಸೋದರ ಸತೀಶ್ ಜಾರಕಿಹೊಳಿ. ಅವರು ಎರಡು ತಿಂಗಳಿಂದ ಗೋಕಾಕ್‌ದಲ್ಲಿಯೇ ಬೀಡು ಬಿಟ್ಟಿದ್ದಾರೆ. ರಮೇಶ್ ಮೇಲೆ ಮುನಿಸಿಕೊಂಡಿದ್ದಾರೆನ್ನಲಾದ ಲಿಂಗಾಯತರು ಮತ ಹಾಕಿದರೆ ಕಾಂಗ್ರೆಸ್‌ಗೆ ಲಾಭವಾದೀತು. ಉಳಿದಂತೆ ಸಾಂಪ್ರದಾಯಿಕ ಮತ್ತು ರಮೇಶ್ ವಿರೋಧಿಧಿ ಮತಗಳೇ ಕೈಗೆ ಶಕ್ತಿ. ಜೆಡಿಎಸ್ ಇವರಿಬ್ಬರ ಕಿತ್ತಾಟದಲ್ಲಿಯೇ ಫಲ ಹುಡುಕುತ್ತಿದೆ.
from India & World News in Kannada | VK Polls https://ift.tt/2Y7BksZ