ಹೊಸದಿಲ್ಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಸಮಕಾಲೀನ ಕಪ್ತಾನ ಪರಸ್ಪರ ಅತೀವ ಗೌರವವನ್ನು ಹಂಚಿಕೊಂಡಿದ್ದಾರೆ. ಇದೇ ಕಾರಣಕ್ಕಾಗಿ ಪ್ರತಿ ಬಾರಿಯೂ ಹಿರಿಯ ಆಟಗಾರನ ಬೆಂಬಲಕ್ಕೆ ವಿರಾಟ್ ನಿಂತಿದ್ದಾರೆ. ನಾಯಕತ್ವ ಪರಿವರ್ತನಾ ಕಾಲಘಟ್ಟದಲ್ಲೂ ಯಾವುದೇ ತೊಂದರೆಗಳು ಎದುರಾಗಿಲ್ಲ. ಇದೀಗ ಏಕದಿನ ವಿಶ್ವಕಪ್ ಅಭಿಯಾನ ಮುಗಿದಿರುವಂತೆಯೇ 38ರ ಹರೆಯದ ಧೋನಿ ನಿವೃತ್ತಿ ಸಲ್ಲಿಸುವ ಬಗ್ಗೆ ವರದಿಗಳು ಎದ್ದಿದ್ದವು. ಆದರೆ ಮುಂದಿನ ವರ್ಷ ನಡೆಯಲಿರುವ ಟ್ವೆಂಟಿ-20 ವಿಶ್ವಕಪ್ ವರೆಗೂ ಮುಂದುವರಿಯುವಂತೆಯೇ ಧೋನಿ ಅವರಲ್ಲಿ ಸ್ವತ: ನಾಯಕ ಕೊಹ್ಲಿ ಅವರೇ ಬೇಡಿಕೊಂಡಿದ್ದಾರೆ ಎಂಬುದೀಗ ತಿಳಿದು ಬಂದಿದೆ. ಭಾರತೀಯ ಸೇನೆಯಲ್ಲಿ ಕರ್ತವ್ಯ ನಿಭಾಯಿಸುವ ನಿಟ್ಟಿನಲ್ಲಿ ಕ್ರಿಕೆಟ್‌ಗೆ ಎರಡು ತಿಂಗಳುಗಳಷ್ಟು ಕಾಲ ವಿರಾಮ ಹಾಕಿರುವ ಧೋನಿ ಮುಂಬರುವ ವೆಸ್ಟ್‌ಇಂಡೀಸ್ ವಿರುದ್ಧದ ಸರಣಿಗೆ ಅಲಭ್ಯವಾಗಿದ್ದಾರೆ. ನಿವೃತ್ತಿ ನಿರ್ಧಾರವನ್ನು ಕೈಬಿಡುವಲ್ಲಿ ಧೋನಿ ಅವರನ್ನು ಮನವೊಳಿಸಲು ಕೊಹ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗುತ್ತಿದೆ. ಅತ್ಯುತ್ತಮ ಫಿಟ್ನೆಸ್ ಮಟ್ಟವನ್ನು ಕಾಯ್ದುಕೊಂಡಿರುವ ಧೋನಿ, ಮುಂದಿನ ವರ್ಷ ನಡೆಲಿಯಿರುವ ಟಿ20 ವಿಶ್ವಕಪ್‌ನಲ್ಲೂ ಮಹತ್ವದ ಪಾತ್ರ ವಹಿಸಲಿದ್ದಾರೆ ಎಂಬುದು ಕೊಹ್ಲಿ ನಂಬಿಕೆಯಾಗಿದೆ. ಕೊಹ್ಲಿ ಈ ಹಿಂದೆಯೇ ಹಲವಾರು ಸಂದರ್ಶನಗಳಲ್ಲಿ ಸ್ಪಷ್ಟಪಡಿಸಿರುವಂತೆಯೇ ಧೋನಿ ಅವರೇ ನನ್ನ ನಾಯಕ ಎಂಬುದನ್ನು ನೀವಿಲ್ಲಿ ನೆನಿಪಿಸಿಕೊಳ್ಳಬಹುದಾಗಿದೆ. ಇನ್ನೊಂದೆಡೆ ಧೋನಿ ಭವಿಷ್ಯದ ಬಗ್ಗೆ ಹೆಚ್ಚೇನು ವಿವರಣೆ ನೀಡದಿದ್ದರೂ ರಿಷಬ್ ಪಂತ್ ಮೊದಲ ವಿಕೆಟ್ ಕೀಪರ್ ಆಯ್ಕೆಯಾಗಲಿದ್ದಾರೆ ಎಂಬುದನ್ನು ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್‌ಕೆ ಪ್ರಸಾದ್ ಖಚಿತಪಡಿಸಿದ್ದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/32MHrFh