ಲಂಡನ್: ಬ್ರಿಟನ್‌ನಲ್ಲಿ ಲಾಕ್‌ಡೌನ್ ನಿರ್ಬಂಧಗಳು ಹಂತಹಂತವಾಗಿ ಸಡಿಲಿಕೆಯಾಗುತ್ತಿದೆ. ಮಾಸ್ಕ್ ಧರಿಸುವಿಕೆ ಮತ್ತು ದೈಹಿಕ ಅಂತರ ಕಾಪಾಡಿಕೊಳ್ಳುವ ನಿಯಮಗಳನ್ನು ಪಾಲಿಸುವಂತೆ ಸರ್ಕಾರ ಕಟ್ಟುನಿಟ್ಟಾಗಿ ಹೇಳುತ್ತಿದ್ದರೂ, ಸ್ನೇಹಿತರು ಮತ್ತು ಕುಟುಂಬದವರನ್ನು ಅಪ್ಪಿಕೊಳ್ಳಲು ಅವಕಾಶ ನೀಡುವಂತೆ ಅಲ್ಲಿನ ಜನರು ಬೇಡಿಕೆ ಇರಿಸಿದ್ದಾರೆ. ಇನ್ನಷ್ಟು ನಿರ್ಬಂಧಗಳನ್ನು ತೆರವುಗೊಳಿಸಲು ಸಚಿವರು ಸಿದ್ಧತೆ ನಡೆಸಿದ್ದಾರೆ. ಹೀಗಾಗಿ ಮುಂದಿನ ಎರಡು ವಾರಗಳಲ್ಲಿ 'ಅಪ್ಪುಗೆ'ಗೆ ಅನುಮತಿ ನೀಡುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ. ಇದರಿಂದ ಸಾಮಾಜಿಕ ಅಂತರದ ಮಾರ್ಗಸೂಚಿಗಳನ್ನು ಪ್ರಸ್ತುತ ಪರಾಮರ್ಶೆಗೆ ಒಳಪಡಿಸಲಾಗುತ್ತಿದೆ. ಬ್ರಿಟನ್‌ನಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿರುವುದರಿಂದ ಮೇ 17ರಿಂದ ಕುಟುಂಬದ ಸದಸ್ಯರು ಹಾಗೂ ಸ್ನೇಹಿತರನ್ನು ಅಪ್ಪಿಕೊಳ್ಳಲು ಅವಕಾಶ ನೀಡಲಾಗುತ್ತದೆ. ಮುಂದಿನ ವಾರ ಸಚಿವ ಸಂಪುಟ ಸಭೆ ನಡೆಯಲಿದ್ದು, ಅದರಲ್ಲಿ ನಿರ್ಬಂಧಗಳ ಸಡಿಲಿಕೆಗೆ ಅನುಮತಿ ಸಿಗಲಿದೆ ಎನ್ನಲಾಗಿದೆ. ಬ್ರಿಟನ್‌ನಲ್ಲಿ ಶನಿವಾರ 1907 ಕೋವಿಡ್ ಪ್ರಕರಣಗಳು ಹಾಗೂ ಏಳು ಸಾವುಗಳು ವರದಿಯಾಗಿವೆ. ಇದುವರೆಗೂ 15 ಮಿಲಿಯನ್ ಜನರು ಸಂಪೂರ್ಣವಾಗಿ ಲಸಿಕೆ ಪಡೆದುಕೊಂಡಿದ್ದಾರೆ. ಇನ್ನು 34 ಮಿಲಿಯನ್ ಜನರು ಒಂದು ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. ಆದರೆ ಬಹುದೊಡ್ಡ ಸಂಖ್ಯೆಯ ಜನರು ಇನ್ನೂ ಮೊದಲ ಡೋಸ್ ಲಸಿಕೆ ಪಡೆದುಕೊಂಡಿಲ್ಲ. ವೈರಸ್ ಕೂಡ ಸಂಪೂರ್ಣವಾಗಿ ತೊಲಗಿಲ್ಲ. ಹೀಗಾಗಿ ಜನರು ಎಚ್ಚರಿಕೆಯಿಂದ ಇರುವುದು ಅಗತ್ಯ. ಹಿಂದಿನ ತಪ್ಪುಗಳಿಂದ ಪಾಠ ಕಲಿಯಬೇಕು. ಪುನಃ ನಿರ್ಲಕ್ಷ್ಯದ ತಪ್ಪೆಸಗಿ ಅಪಾಯವನ್ನು ಎಳೆದುಕೊಳ್ಳಬೇಡಿ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
from India & World News in Kannada | VK Polls https://ift.tt/2RleSgV