ಹೊಸದಿಲ್ಲಿ: ಪ್ರಸ್ತುತ ಭಾರತದಲ್ಲಿ ಕೋವಿಡ್-19 ಎರಡನೇ ಅಲೆ ತೀವ್ರವಾಗಿದೆ. ಈ ಹಿನ್ನೆಲೆಯಲ್ಲಿ ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿರುವ 50 ಸಾವಿರ ಯುಎಸ್ ಡಾಲರ್ ನೆರವನ್ನು ಭಾರತಕ್ಕೆ ನೀಡಿದೆ. ಆ ಮೂಲಕ ಕಠಿಣ ಸಮಯದಲ್ಲಿ ನಾವು ನಿಮ್ಮ ಜೊತೆಗಿದ್ದೇವೆ ಎಂಬ ಸಂದೇಶವನ್ನು ಸಾರಿದೆ. ಆಸ್ಟ್ರೇಲಿಯಾಗೆ ಅತ್ಯುತ್ತಮ ಸ್ನೇಹ ಮತ್ತು ಸಂಪರ್ಕವನ್ನು ಹೊಂದಿರುವ ಭಾರತಕ್ಕೆ ಕೊರೊನಾ ವೈರಸ್ ಎರಡನೇ ಅಲೆ ಸಾಕಷ್ಟು ವಿನಾಶ ತಂದೊಡ್ಡಿರುವುದಕ್ಕೆ ಆಸ್ಟ್ರೇಲಿಯಾ ಕ್ರಿಕೆಟ್ ತೀವ್ರ ದುಃಖಿತವಾಗಿದೆ. ಗಂಭೀರ ಅನಾರೋಗ್ಯ ಪೀಡಿತ ರೋಗಿಗಳಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗಳಲ್ಲಿ ಆಮ್ಲಜನಕ ಉತ್ಪಾದನಾ ಘಟನೆ ನಿರ್ಮಿಸುವಂತೆ ಯುನಿಸೆಫ್ ಆಸ್ಟ್ರೇಲಿಯಾ ಭಾರತಕ್ಕೆ ಮನವಿ ಮಾಡಿಕೊಂಡಿದೆ. ಜತೆಗೆ, ಕೊರೊನಾ ಪರಿಣಾಮಕಾರಿ ಜಿಲ್ಲೆಗಳಲ್ಲಿ ಕೋವಿಡ್-19 ವ್ಯಾಕ್ಸಿನ್ ನೀಡುವ ಪ್ರಕ್ರಿಯೆಯನ್ನು ಚುರುಕುಗೊಳಿಸಬೇಕು ಎಂದು ತಿಳಿಸಿದೆ. ಭಾರತದಲ್ಲಿನ ಕೊರೊನಾ ವೈರಸ್ ಹೋರಾಟಕ್ಕೆ ಕ್ರಿಕೆಟ್ ಆಸ್ಟ್ರೇಲಿಯಾ, ಆಸ್ಟ್ರೇಲಿಯನ್ ಕ್ರಿಕೆಟರ್ಸ್ ಅಸೋಸಿಯೇಷನ್ ಹಾಗೂ ಯುನಿಸೆಫ್ ಆಸ್ಟ್ರೇಲಿಯಾ ಜೊತೆಗೂಡಿ 50,000 ಯುಎಸ್ ಡಾಲರ್ ನೆರವನ್ನು ನೀಡಿದೆ. "ಅಂತಾರಾಷ್ಟ್ರೀಯ ಕ್ರಿಕೆಟ್ ಚಟುವಟಿಕೆಗಳಲ್ಲಿ ಭಾರತೀಯರು ಹಾಗೂ ಆಸ್ಟ್ರೇಲಿಯನ್ನರು ವಿಶೇಷ ಬಾಂಧವ್ಯವನ್ನು ಇಟ್ಟುಕೊಂಡಿದ್ದಾರೆ. ಈ ಎರಡೂ ರಾಷ್ಟ್ರಗಳು ಕ್ರಿಕೆಟ್ ಮೇಲಿನ ಪ್ರೀತಿ ಅದ್ಭುತವಾದದ್ದು. ಆದರೆ, ಕೊರೊನಾ ವೈರಸ್ ಎರಡನೇ ಅಲೆಯಿಂದ ಭಾರತ ಕಠಿಣ ಸಮಯವನ್ನು ಎದುರಿಸುತ್ತಿರುವುದಕ್ಕೆ ನಾವು ದುಖಿಃತರಾಗಿದ್ದೇವೆ. ಸೋಂಕಿನಿಂದ ಕಠಿಣ ಹೋರಾಟ ನಡೆಸುತ್ತಿರುವ ಭಾರತೀಯರಿಗಾಗಿ ನಮ್ಮ ಹೃದಯ ಮಿಡಿಯುತ್ತಿದೆ," ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಹಂಗಾಮಿ ಸಿಇಓ ನಿಮ್ ಹಾಕ್ಲೀ ತಮ್ಮ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ. "ಕಳೆದ ವಾರ ನಮ್ಮ ದೇಶದ ಕ್ರಿಕೆಟಿಗರಾದ ಹಾಗೂ ಬ್ರೆಟ್ ಲೀ ಅವರು ದೇಣಿಗೆ ನೀಡಿರುವುದರಿಂದ ನಾವು ಪ್ರಭಾವಿತರಾಗಿದ್ದೇವೆ. ಭಾರತದ ಜನತೆಗೆ ಸಹಾಯಕ್ಕೆ ಮುಂದಾಗಿರುವ ಯುನಿಸೆಪ್ ಆಸ್ಟ್ರೇಲಿಯಾ ಜೊತೆ ನಾವು ಪಾಲುದಾರಿಕೆ ಹೊಂದಿರುವುದಕ್ಕೆ ನಮಗೆ ಹೆಮ್ಮೆ ಅನಿಸುತ್ತಿದೆ. ಭಾರತೀಯರಿಗೆ ಅಗತ್ಯವಿರುವ ಆಮ್ಲಜನಕ, ಪರೀಕ್ಷಾ ಉಪಕರಣಗಳು ಹಾಗೂ ವ್ಯಾಕ್ಸಿನ್ ನೀಡಲು ನಾವು ಬದ್ದರಾಗಿದ್ದೇವೆ," ಎಂದು ಅವರು ಹೇಳಿದರು. ಕೆಲ ದಿನಗಳ ಹಿಂದಷ್ಟೇ ಕೋಲ್ಕತಾ ನೈಟ್ ರೈಡರ್ಸ್ ತಂಡದ ವೇಗಿ ಪ್ಯಾಟ್ ಕಮಿನ್ಸ್ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ 50 ಸಾವಿರ ಡಾಲರ್ ದಾನ ಮಾಡಿದರು. ಆಸೀಸ್ ಆಟಗಾರ ಈ ಮೂಲಕ ಭಾರತದಲ್ಲಿ ಕೋವಿಡ್-19 ವಿರುದ್ಧದ ಹೋರಾಟಕ್ಕೆ ಕೈಜೋಡಿಸಿದ ಮೊದಲ ವಿದೇಶಿ ಕ್ರಿಕೆಟಿಗ ಎನಿಸಿಕೊಂಡಿದ್ದರು. ಕಮಿನ್ಸ್ ಇದೇ ವೇಳೆ ತಮ್ಮಂತೆ ಭಾರತದ ಮೇಲೆ ಪ್ರೀತಿ ಹೊಂದಿರುವ ವಿದೇಶಿ ಆಟಗಾರರು ತಮ್ಮ ಕೈಲಾದ ಸಹಾಯ ಮಾಡುವಂತೆ ಮನವಿ ಮಾಡಿದ್ದರು. ಇದಕ್ಕೆ ಓಗೊಟ್ಟಿರುವ ಆಸೀಸ್‌ನ ಮಾಜಿ ವೇಗದ ಬೌಲರ್ ಹಾಗೂ ಜನಪ್ರಿಯ ಕಾಮೆಂಟೇಟರ್ ಬ್ರೆಟ್ ಲೀ ಒಂದು ಬಿಟ್‌ಕಾಯ್ನ್ ದಾನ ಮಾಡಿದ್ದರು. ಆನ್‌ಲೈನ್ ಕರೆನ್ಸಿ ಆಗಿರುವ ಬಿಟ್‌ಕಾಯ್ನ್ ಅನ್ನು ವಿಶ್ವದ ಯಾವುದೇ ರಾಷ್ಟ್ರದಲ್ಲಿ ಅಲ್ಲಿನ ಹಣವನ್ನಾಗಿ ಪರಿವರ್ತಿಸಿಕೊಳ್ಳಬಹುದಾಗಿದೆ. ಒಂದು ಬಿಟ್‌ಕಾಯ್ನ್‌ನ ಬೆಲೆ ಭಾರತೀಯ ರೂಪಾಯಿಯ 41 ಲಕ್ಷ ರೂ.ಗಳಿಗೆ ಸಮ. ಬ್ರೆಟ್ ಲೀ ಕ್ರಿಪ್ಟೋ ಪರಿಹಾರ ನಿಧಿ ಮೂಲಕ ತಮ್ಮ ಕೊಡುಗೆ ಸಲ್ಲಿಸಿದ್ದಾರೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/336x7JD