ಇಸ್ಲಮಾಬಾದ್: ಪಾಕಿಸ್ತಾನದ ಜೈಲಿನಲ್ಲಿರುವ ಭಾರತೀಯ ಪ್ರಜೆ ಕುಲಭೂಷಣ್ ಜಾಧವ್ಗೆ ರಾಯಭಾರ ಕಚೇರಿಯ ಸಂಪರ್ಕಕ್ಕೆ ಅವಕಾಶ ಕಲ್ಪಿಸುವ ಪಾಕಿಸ್ತಾನದ ಪ್ರಸ್ತಾಪವನ್ನು ಭಾರತ ಒಪ್ಪಿಕೊಂಡಿದೆ. ಪಾಕಿಸ್ತಾನದಲ್ಲಿರುವ ಭಾರತೀಯ ಉಪ ರಾಯಭಾರಿ ಗೌರವ್ ಅಹ್ಲುವಾಲಿಯಾ ಇಂದು ಜಾಧವ್ರನ್ನು ಭೇಟಿಯಾಗಲಿದ್ದಾರೆ. ಗೂಢಚರ್ಯೆಯ ಆರೋಪದ ಮೇಲೆ ಪಾಕಿಸ್ತಾನದಲ್ಲಿ ಮರಣ ದಂಡನೆ ಶಿಕ್ಷೆ ಎದುರಿಸುತ್ತಿದ್ದಾರೆ. ಭಾರತ ಕಳೆದ ಮೂರು ವರ್ಷದಿಂದ ಕುಲಭೂಷಣ್ ಜಾಧವ್ಗೆ ರಾಯಭಾರ ಕಚೇರಿ ಸಂಪರ್ಕಿಸಲು ಅವಕಾಶ ನೀಡುವಂತೆ ಸರಕಾರವನ್ನು ಒತ್ತಾಯಿಸಿಕೊಂಡು ಬಂದಿತ್ತು. ಆದರೆ ಇದಕ್ಕೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಭಾರತ ಅಂತರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋಗಿತ್ತು. ನಂತರ ನ್ಯಾಯಾಲಯ ಜುಲೈ 17ರಂದು ಭಾರತದ ಪರವಾಗಿ ಆದೇಶ ನೀಡಿತ್ತು. ಇದಾದ ಬಳಿಕ ಭಾನುವಾರ ಜಾಧವ್ ಅವರಿಗೆ ರಾಯಭಾರ ಕಚೇರಿಯನ್ನು ಸಂಪರ್ಕಿಸಲು ಅವಕಾಶ ನೀಡುವುದಾಗಿ ಪಾಕಿಸ್ತಾನ ಘೋಷಿಸಿತ್ತು. ಈ ಹಿನ್ನೆಲೆಯಲ್ಲಿ ಇಂದು ಭೇಟಿ ನಿಗದಿಯಾಗಿದೆ. ಅಂತರಾಷ್ಟ್ರೀಯ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಜಾಧವ್ ಮತ್ತು ರಾಯಭಾರಿ ನಡುವೆ ಮುಕ್ತ ಮತ್ತು ನ್ಯಾಯೋಚಿತ ಭೇಟಿ ನಡೆಯಲಿದೆ ಎಂದು ನಂಬಿರುವುದಾಗಿ ಭಾರತದ ವಿದೇಶಾಂಗ ಇಲಾಖೆ ಹೇಳಿಕೆ ಬಿಡುಗಡೆ ಮಾಡಿದೆ. ಸದ್ಯ ಪಾಕಿಸ್ತಾನದಲ್ಲಿರುವ ಭಾರತೀಯ ಉಪ ರಾಯಭಾರಿ ಗೌರವ್ ಅಹ್ಲುವಾಲಿಯಾ ಜಾಧವ್ ಭೇಟಿಗಾಗಿ ಅಲ್ಲಿನ ವಿದೇಶಾಂಗ ಇಲಾಖೆಗೆ ತೆರಳಿದ್ದಾರೆ. ಇವರು ಪಾಕಿಸ್ತಾನದ ವಿದೇಶಾಂಗ ಇಲಾಖೆ ಕಾರ್ಯದರ್ಶಿ ಮೊಹಮ್ಮದ್ ಫೈಸಲ್ ಜೊತೆ ಮಾತುಕತೆಯಲ್ಲಿ ತೊಡಗಿದ್ದು ಸದ್ಯವೇ ಜಾಧವ್ರನ್ನು ಭೇಟಿಯಾಗಲಿದ್ದಾರೆ.
from India & World News in Kannada | VK Polls https://ift.tt/2lmckyN