ಕೀವ್: ಉಕ್ರೇನ್ ರಾಜಧಾನಿ ಕೀವ್ ಹಾಗೂ ಎರಡನೇ ಬೃಹತ್ ನಗರ ಕಾರ್ಕಿವ್ ಮೇಲೆ ನಿಯಂತ್ರಣ ಸಾಧಿಸಿರುವ ಪಡೆಗಳು ಗುರುವಾರ ಬಂದರು ನಗರಿ ಖೆರ್ಸಾನ್ ಅನ್ನು ಸಹ ವಶಪಡಿಸಿಕೊಳ್ಳುವ ಮೂಲಕ ಆಕ್ರಮಣ ಮತ್ತಷ್ಟು ತೀವ್ರಗೊಳಿಸಿದೆ. ಫೆ.24ರಂದು ಉಕ್ರೇನ್ ಮೇಲೆ ಆಕ್ರಮಣ ಆರಂಭಿಸಿದ ಬಳಿಕ ಸಂಪೂರ್ಣವಾಗಿ ರಷ್ಯಾ ವಶಕ್ಕೆ ಬಂದ ಮೊದಲ ನಗರ ಖೆರ್ಸಾನ್ ಎನಿಸಿದೆ. ಖೆರ್ಸಾನ್ ಪ್ರಮುಖ ಕಟ್ಟಡಗಳ ಮೇಲೆ ಕ್ಷಿಪಣಿ, ರಾಕೆಟ್ ದಾಳಿ ಆರಂಭಿಸಿದ್ದ ಪುಟಿನ್ ಪಡೆಗಳು ಈಗ ಇಡೀ ನಗರದ ಮೇಲೆ ಹಿಡಿತ ಸಾಧಿಸಿವೆ. ಸ್ಥಳೀಯ ಕಚೇರಿಗಳಿಂದ ಉಕ್ರೇನ್ ಅಧಿಕಾರಿಗಳನ್ನು ಹೊರಗೆ ಕಳುಹಿಸಿ ಎಲ್ಲ ಪ್ರಮುಖ ಕಚೇರಿಗಳನ್ನು ವಶಪಡಿಸಿಕೊಂಡಿದ್ದಾರೆ. ಆ ಮೂಲಕ ವ್ಯೂಹಾತ್ಮಕ ದೃಷ್ಟಿಯಲ್ಲೂ ಪ್ರಮುಖವಾಗಿರುವ ಖೆರ್ಸಾನ್ ಮೇಲೆ ಪ್ರಾಬಲ್ಯ ಸಾಧಿಸುವ ಮೂಲಕ ರಷ್ಯಾ ತನ್ನ ಕಬಂಧ ಬಾಹುವನ್ನು ವಿಸ್ತರಿಸಿದೆ. ಪುಟಿನ್ ಪಡೆಗಳ ಆಕ್ರಮಣದ ಕುರಿತು ಉಕ್ರೇನ್ ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ''ಸರಕಾರಿ ಕಚೇರಿಗಳ ಮೇಲೆ ರಷ್ಯಾ ಸೈನಿಕರು ನುಗ್ಗಿದ್ದು, ಎಲ್ಲ ಸಿಬ್ಬಂದಿಯನ್ನು ಹೊರಗೆ ಕಳುಹಿಸುವ ಮೂಲಕ ಪಾರಮ್ಯ ಮೆರೆಯುತ್ತಿದ್ದಾರೆ. ಇಡೀ ನಗರ ಈಗ ರಷ್ಯಾ ಪಾಲಾಗಿದೆ,'' ಎಂದು ಹೇಳಿದ್ದಾರೆ. ಸುಮಾರು 2.9 ಲಕ್ಷ ಜನರಿರುವ ನಗರದ ಹೊರವಲಯದಿಂದ ಬಾಂಬ್‌ಗಳು, ಶೆಲ್, ಕ್ಷಿಪಣಿ ಹಾಗೂ ರಾಕೆಟ್ ದಾಳಿ ನಡೆಸಿ ನಗರವನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಮುಖ ಬಂದರು ವಶ: ಖೆರ್ಸಾನ್ ಬಂದರುಗಳ ನಗರ ಎಂದೇ ಖ್ಯಾತಿಯಾಗಿದ್ದು, ಇಡೀ ನಗರದ ಮೇಲೆ ಹಿಡಿತ ಸಾಧಿಸುವ ಜತೆಗೆ ಆಯಕಟ್ಟಿನ ಸ್ಥಳದಲ್ಲಿರುವ 'ಬ್ಲ್ಯಾಕ್ ಸೀ' ಬಂದರನ್ನು ವಶಪಡಿಸಿಕೊಳ್ಳಲಾಗಿದೆ. ಆ ಮೂಲಕ ದೇಶದ ವ್ಯಾಪಾರ-ವಹಿವಾಟು ಮೇಲೂ ನಿಯಂತ್ರಣ ಸಾಧಿಸಲು ಪುಟಿನ್ ಪಡೆಗಳು ಮುಂದಾಗಿವೆ. ಇದರ ಜತೆಗೆ ಬೇರೆ ಬಂದರುಗಳ ಮೇಲೂ ದಾಳಿ ಮಾಡುವ ಭೀತಿ ಸೃಷ್ಟಿಯಾಗಿದೆ. ಮುರಿಯೋಪೋಲ್‌ನಲ್ಲಿರುವ ಅಜೋವ್ ಸೀ ಸೇರಿ ಹಲವು ಬಂದರುಗಳನ್ನು ಸಹ ರಷ್ಯಾ ವಶಪಡಿಸಿಕೊಳ್ಳುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
- ಉಕ್ರೇನ್ ಮಾಹಿತಿ ಪ್ರಕಾರ ಇದುವರೆಗೆ ಹತ್ಯೆಗೀಡಾದ ರಷ್ಯಾ ಸೈನಿಕರು: 9,000
- ತಮ್ಮ ದೇಶದ 498 ಸೈನಿಕರು ಮೃತಪಟ್ಟಿದ್ದಾರೆ ಎಂದು ರಷ್ಯಾ ಹೇಳಿಕೊಂಡಿದೆ
from India & World News in Kannada | VK Polls https://ift.tt/UF6Iwin