
ಹೊಸದಿಲ್ಲಿ: ರಷ್ಯಾ ಮತ್ತು ಉಕ್ರೇನ್ ಯುದ್ಧಕ್ಕೆ ಸಂಬಂಧಿಸಿದಂತೆ ಭಾರತವೇಕೆ ತಟಸ್ಥ ನೀತಿ ಅನುಸರಿಸುತ್ತಿದೆ ಎಂಬುದಕ್ಕೆ ಕಾರಣ ತಿಳಿಸಿರುವ , ಯುದ್ಧದಲ್ಲಿ ನಿರತ ಉಭಯ ರಾಷ್ಟ್ರಗಳೊಂದಿಗೂ ಭಾರತ ಹಲವು ಆಯಾಮಗಳಲ್ಲಿ ರಾಜತಾಂತ್ರಿಕ ಸಂಬಂಧವನ್ನು ಹೊಂದಿದೆ. ಇದೇ ಕಾರಣಕ್ಕೆ ಯುದ್ಧದ ಕುರಿತು ಯಾರ ಪರ ಅಥವಾ ಯಾರ ವಿರೋಧವೂ ನಾವು ನಿಲುವು ತೆಗೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪಂಚರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶದ ಬಳಿಕ, ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿರುವ ಬಿಜೆಪಿ ಪ್ರಧಾನ ಕಚೇರಿಯಲ್ಲಿ ನಡೆದ ಸಂಭ್ರಮಾಚರಣೆ ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಮಾಡಿದರು. ಈ ವೇಳೆ ರಷ್ಯಾ-ಉಕ್ರೇನ್ ಯುದ್ಧದ ಕುರಿತು ಪ್ರಸ್ತಾಪಿಸಿದ ಪ್ರಧಾನಿ ಮೋದಿ, ತಟಸ್ಥ ನಿಲುವು ತಳೆಯುವ ಕೇಂದ್ರ ಸರ್ಕಾರದ ನಿಲುವನ್ನು ಬೆಂಬಲಿಸಿದರು. ರಷ್ಯಾ ಮತ್ತು ಉಕ್ರೇನ್ ಎರಡೂ ದೇಶಗಳೊಂದಿಗೂ ಭಾರತ ಹಲವು ಆಯಾಮಗಳಲ್ಲಿ ಸಂಬಂಧ ಹೊಂದಿದೆ. ರಾಜತಾಂತ್ರಿಕ, ಸಾಮರಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಸಂಬಂಧಕ್ಕೆ ಧಕ್ಕೆ ಬರಬಾರದು ಎಂಬ ಉದ್ದೇಶಕ್ಕೆ ನಾವು ತಟಸ್ಥ ನಿಲುವು ತಳೆದಿದ್ದೇವೆ. ಆದರೆ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಕೊನೆಗೊಂಡು ಶಾಂತಿ ಮರುಸ್ಥಾಪನೆಯಾಗಬೇಕು ಎಂದು ಭಾರತ ಬಯಸುತ್ತದೆ ಎಂದು ಪ್ರಧಾನಿ ಮೋದಿ ಸ್ಪಷ್ಟಪಡಿಸಿದರು. ನಾವು ರಷ್ಯಾ ಮತ್ತು ಉಕ್ರೇನ್ ನಡುವೆ ಶಾಂತಿ ಮರುಸ್ಥಾಪನೆ ಬಯಸಿದ್ದೇವೆ. ಇದಕ್ಕಾಗಿ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತ ತನ್ನ ಪರಿಣಾಮಕಾರಿ ಪಾತ್ರವನ್ನು ನಿರ್ವಹಿಸುತ್ತಿದೆ. ನಮ್ಮ ತಟಸ್ಥ ನಿಲುವು ಜಾಗತಿಕ ಶಾಂತಿಗೆ ಪೂರಕವಾದುದು ಎಂದು ಪ್ರಧಾನಿ ಮೋದಿ ಸಮರ್ಥನೆ ನೀಡಿದರು. ವಿಪಕ್ಷಗಳ ವಿರುದ್ಧ ವಾಗ್ದಾಳಿ: ಇನ್ನು ರಷ್ಯಾ-ಉಕ್ರೇನ್ ನಡುವಿನ ಯುದ್ಧದಲ್ಲು ಭಾರತದ ತಟಸ್ಥ ನಿಲುವನ್ನು ಪ್ರಶ್ನಿಸಿರುವ ವಿಪಕ್ಷಗಳ ವಿರುದ್ಧ ಹರಿಹಾಯ್ದಿರುವ ಪ್ರಧಾನಿ ಮೋದಿ, ಭಾರತದ ವಿದೇಶಾಂಗ ನೀತಿ ವಿಫಲವಾಗಿದೆ ಎನ್ನುವವರು ಒಮ್ಮೆ ಜಾಗತಿಕ ಪರಿಸ್ಥಿತಿಗಳತ್ತ ಕಣ್ತೆರೆದು ನೋಡಲಿ ಎಂದು ಸಲಹೆ ನೀಡಿದ್ದಾರೆ. ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರುವುದು ಕೇಂದ್ರ ಸರ್ಕಾರದ ಪ್ರಥಮ ಆದ್ಯತೆಯಾಗಿದೆ. ಇದಕ್ಕಾಗಿಯೇ ಆಪರೇಷನ್ ಗಂಗಾ ಆರಂಭಿಸಲಾಗಿದೆ. ಆದರೆ ಇದರಲ್ಲಿಯೂ ರಾಜಕೀಯ ಬೆರೆಸುವ ಪ್ರಯತ್ನ ಮಾಡುತ್ತಿರುವ ವಿಪಕ್ಷಗಳು, ಚನಾವಣಾ ಲಾಭಕ್ಕಾಗಿ ಈ ಹೆಸರು ಇಡಲಾಗಿದೆ ಎಂದು ಸುಳ್ಳು ಆರೋಪ ಮಾಡುತ್ತಿವೆ ಎಂದು ಪ್ರಧಾನಿ ಮೋದಿ ತೀವ್ರ ವಾಗ್ದಾಳಿ ನಡೆಸಿದರು. ಕೇಂದ್ರ ಸರ್ಕಾರದ ಪ್ರಾಮಾಣಿಕ ಪ್ರಯತ್ನವನ್ನು ವಿಫಲಗೊಳಿಸಲು ಬಯಸಿರುವ ವಿಪಕ್ಷಗಳು, ಉಕ್ರೇನ್‌ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ದಿಕ್ಕು ತಪ್ಪಿಸಲು ಮುಂದಾಗಿವೆ. ಅಲ್ಲದೇ ಭಾರತದಲ್ಲಿರುವ ವಿದ್ಯಾರ್ಥಿಗಳ ಪೋಷಕರಲ್ಲಿ ಭಯ ಹುಟ್ಟಿಸುವ ಕೆಲಸ ಮಾಡುತ್ತಿವೆ. ಆದರೆ ನಾವು ಮಾತ್ರ ಉಕ್ರೇನ್‌ನಿಂದ ನಮ್ಮ ಮಕ್ಕಳನ್ನು ಸುರಕ್ಷಿತವಾಗಿ ಕರೆತಂದು ಪೋಷಕರ ಮಡಿಲು ಸೇರಿಸಿಯೇ ಸಿದ್ಧ ಎಂದು ಪ್ರಧಾನಿ ಮೋದಿ ದೇಶಕ್ಕೆ ಭರವಸೆ ನೀಡಿದರು. ಭಾರತ ಹಿಂದೆಂದಿಗಿಂತಲೂ ಈಗ ಒಗ್ಗಟ್ಟಾಗಿದೆ ಎಂಬ ಸಂದೇಶನವನ್ನು ಪಂಚರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶ ತಿಳಿಸಿದೆ. ನಾವು ಒಗ್ಗಟ್ಟಿನಿಂದ ಈ ದೇಶದ ಉಜ್ವಲ ಭವಿಷ್ಯವನ್ನು ನಿರ್ಧರಿಸುತ್ತೇವೆ ಎಂಬ ವಿಶ್ವಾಸ ನನಗಿದೆ ಎಂದು ಪ್ರಧಾನಿ ಮೋದಿ ಇದೇ ವೇಳೆ ನುಡಿದರು.
from India & World News in Kannada | VK Polls https://ift.tt/RA1WrGh