
ಹೊಸದಿಲ್ಲಿ: ಇನ್ನು ಮುಂದೆ ದೇಶದಲ್ಲಿ ತಲೆ ಎತ್ತಲಿರುವ ಹೊಸ ವಸತಿ ಲೇಔಟ್‌ಗಳಲ್ಲಿ ಹಸಿರು ಕಂಗೊಳಿಸಲಿದೆ. ನೂತನ ವಾಣಿಜ್ಯ ಕಟ್ಟಡಗಳ ಬದಿಯಲ್ಲೂ ವೃಕ್ಷ ರಾಶಿ ರಾರಾಜಿಸಲಿದೆ. ಕೇಂದ್ರ ಪರಿಸರ ಸಚಿವಾಲಯವು ವಸತಿ ಮತ್ತು ವಾಣಿಜ್ಯ ಪ್ರದೇಶದಲ್ಲಿ ಹಸಿರು ಹೊದಿಕೆ ಹೆಚ್ಚಿಸುವ ಹೊಸ ಪ್ರಸ್ತಾಪವನ್ನು ಮುಂದಿಟ್ಟಿದೆ. ಈ ಸಂಬಂಧ ಕರಡು ಅಧಿಸೂಚನೆಯನ್ನೂ ಹೊರಡಿಸಿರುವ ಸಚಿವಾಲಯವು ಸಾರ್ವಜನಿಕರಿಂದ ಸಲಹೆ-ಸೂಚನೆಗಳನ್ನು ಕೇಳಿದೆ. ಸಚಿವಾಲಯದ ಪ್ರಸ್ತಾಪದ ಪ್ರಕಾರ 5,000 ಚದರ ಮೀಟರ್‌ಗಿಂತಲೂ ಅಧಿಕ ವಿಸ್ತೀರ್ಣದ ಹೊಸ ಕಟ್ಟಡ ಯೋಜನೆಗಳು, ಬಡಾವಣೆಗಳ ನಿರ್ಮಾಣ ಹಾಗೂ ಈಗಿರುವ ಕಟ್ಟಡಗಳ ನವೀಕರಣದ ವೇಳೆ ಪ್ರತಿ 80 ಚದರ ಮೀಟರ್‌ಗೆ ಒಂದು ಮರ ಇರುವಂತೆ ನೋಡಿಕೊಳ್ಳಬೇಕು. ಆ ಮೂಲಕ ಒಟ್ಟಾರೆ ಕಟ್ಟಡ ಪ್ರದೇಶದಲ್ಲಿ ಶೇ 10 ಇರುವಂತೆ ಕಾಯ್ದುಕೊಳ್ಳಬೇಕು. ಜತೆಗೆ ಕನಿಷ್ಠ ಒಂದು ದಿನದ ಮಳೆ ನೀರನ್ನು ನಿಲ್ಲಿಸುವ ರೀತಿಯಲ್ಲಿ ಮಳೆ ಕೋಯ್ಲು ಯೋಜನೆ ಅನುಷ್ಠಾನಗೊಳಿಸಬೇಕು. ಕಟ್ಟಡಗಳಲ್ಲಿ ಶೌಚ ಉದ್ದೇಶಕ್ಕೆ ಸಂಸ್ಕರಿತ ನೀರು ಹಾಗೂ ಇತರೆ ಉದ್ದೇಶಕ್ಕೆ ಶುದ್ಧ ನೀರು ಬಳಕೆಗಾಗಿ ಎರಡೆರಡು ಪ್ಲಂಬಿಂಗ್ ವ್ಯವಸ್ಥೆಗಳನ್ನು ಅಳವಡಿಸಬೇಕು ಎಂದು 'ಕಟ್ಟಡ ನಿರ್ಮಾಣ ಪರಿಸರ ನಿರ್ವಹಣೆ ನಿಯಂತ್ರಣ-2022' ಹೆಸರಿನ ಕರಡಿನಲ್ಲಿ ಹೇಳಲಾಗಿದೆ. ಫೆಬ್ರವರಿ 28ರಂದು ಈ ಕರಡು ಅಧಿಸೂಚನೆ ಹೊರಡಿಸಲಾಗಿದೆ. 60 ದಿನಗಳ ಒಳಗೆ ಸಾರ್ವಜನಿಕರು ಸಲಹೆಗಳು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಸೂಚಿಸಲಾಗಿದೆ. ಇದು ಹೊಸ ಕಟ್ಟಡಗಳು ಹಾಗೂ ವಿಸ್ತರಣೆಯ ಯೋಜನೆಗಳು, ಹಾಲಿ ಇರುವ ಹಳೆಯ ಕಟ್ಟಡಗಳ ನವೀಕರಣ ಅಥವಾ ದುರಸ್ತಿಯ ಯೋಜನೆಗಳಿಗೆ ಅನ್ವಯವಾಗಲಿದೆ.
from India & World News in Kannada | VK Polls https://ift.tt/zHGkP8s