Russia-Ukraine crisis; ಯುದ್ಧವಿಮಾನ ಪೂರೈಸುವಂತೆ ಅಮೆರಿಕವನ್ನು ಕೋರಿದ ಉಕ್ರೇನ್‌!

ವಾಷಿಂಗ್ಟನ್‌: ಸರಕಾರಿ ಕಚೇರಿಗಳಿಂದ ಹಿಡಿದು ಬಂದರುಗಳವರೆಗೆ ಉಕ್ರೇನ್‌ ಮೇಲೆ ಸಕಲ ರೀತಿಯಲ್ಲಿ ನಿಯಂತ್ರಣ ಸಾಧಿಸಿರುವ ಪಡೆಗಳು ದಿನೇದಿನೆ ಆಕ್ರಮಣ ಹೆಚ್ಚಿಸಿರುವುದರಿಂದ ಅಧ್ಯಕ್ಷ ವೊಲೊಡಿಮಿರ್‌ ಜೆಲೆನ್‌ಸ್ಕಿ ಅವರು ಹತಾಶರಾಗಿದ್ದು, ನೆರವಿಗೆ ಧಾವಿಸುವಂತೆ ಭಾರತ, ಅಮೆರಿಕದಂತಹ ರಾಷ್ಟ್ರಗಳಿಗೆ ಮನವಿ ಮಾಡಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಯುದ್ಧ ನಿಲ್ಲಿಸುವಂತೆ ಅವರಿಗೆ ಸೂಚಿಸಬೇಕು ಎಂದು ಉಕ್ರೇನ್‌ ಮನವಿ ಮಾಡಿದೆ. ಅತ್ತ, ಪುಟಿನ್‌ ಪಡೆಗಳನ್ನು ಹಿಮ್ಮೆಟ್ಟಿಸಿ ರಾಷ್ಟ್ರವನ್ನು ರಕ್ಷಣೆ ಮಾಡಿಕೊಳ್ಳುವ ದಿಸೆಯಲ್ಲಿ ಮತ್ತಷ್ಟು ಯುದ್ಧವಿಮಾನಗಳನ್ನು ಕಳಿಸುವಂತೆ ವೊಲೊಡಿಮಿರ್‌ ಜೆಲೆನ್‌ಸ್ಕಿ ಅಮೆರಿಕವನ್ನು ಕೋರಿದ್ದಾರೆ. ಪುಟಿನ್‌ ಪಡೆಗಳ ಸತತ ದಾಳಿಯಿಂದ ಕಂಗೆಟ್ಟಿರುವ ಜೆಲೆನ್‌ಸ್ಕಿ ಈಗ ಜಾಗತಿಕವಾಗಿ ನೆರವಿನ ಮೊರೆ ಹೋಗಿದ್ದಾರೆ. ''ರಷ್ಯಾ ದಾಳಿಯಿಂದ ಹತಾಶರಾಗಿರುವ ಜೆಲೆನ್‌ಸ್ಕಿ ಅವರು ಪೂರ್ವ ಐರೋಪ್ಯ ರಾಷ್ಟ್ರಗಳ ಮೂಲಕ ಯುದ್ಧವಿಮಾನ ಕಳುಹಿಸುವಂತೆ ಮನವಿ ಮಾಡಿದ್ದಾರೆ. ಅವರಿಗೆ ಯುದ್ಧವಿಮಾನ ಕಳುಹಿಸುವ ದಿಸೆಯಲ್ಲಿ ಸಕಲ ಪ್ರಯತ್ನ ಮಾಡಲಾಗುವುದು,'' ಎಂದು ಅಮೆರಿಕ ಸಂಸತ್‌ ಮೇಲ್ಮನೆ ನಾಯಕ ಚಕ್‌ ಶುಮರ್‌ ತಿಳಿಸಿದ್ದಾರೆ. ಅಮೆರಿಕ ಸಂಸದರ ಜತೆ ವಿಡಿಯೊ ಕಾಲ್‌ ಮೂಲಕ ಮಾತನಾಡಿದ ಜೆಲೆನ್‌ಸ್ಕಿ, ''ಜಾಗತಿಕ ಎಚ್ಚರಿಕೆ ತಿರಸ್ಕರಿಸಿ ದಾಳಿ ಮಾಡಿರುವ ರಷ್ಯಾದಿಂದ ತೈಲ ಆಮದು ನಿಷೇಧಿಸಬೇಕು,'' ಎಂದು ಸಹ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಫೆ.24ರಿಂದಲೇ ಆಕ್ರಮಣ ಮಾಡುತ್ತಿರುವ ರಷ್ಯಾ ಇದುವರೆಗೆ ಎರಡು ಸುತ್ತಿನ ಮಾತುಕತೆ ನಡೆಸಿದರೂ ಹಿಂದಡಿ ಇಡಲು ಒಪ್ಪಿಗೆ ಸೂಚಿಸಿಲ್ಲ. ತಾತ್ಕಾಲಿಕ ಕದನ ವಿರಾಮ ಘೋಷಿಸಿದರೂ ಜನರನ್ನು ತೆರವುಗೊಳಿಸಲು ಸಾಧ್ಯವಾಗುತ್ತಿಲ್ಲ. ಇಡೀ ದೇಶವನ್ನು 'ನೋ ಫ್ಲೈ ಜೋನ್‌' (ಹಾರಾಟ ನಿಷಿದ್ಧ ವಲಯ) ಎಂಬುದಾಗಿ ಘೋಷಿಸಿ ಎಂದು ನ್ಯಾಟೊಗೆ ಮಾಡಿದ ಮನವಿಯನ್ನೂ ತಿರಸ್ಕರಿಸಲಾಗಿದೆ. ಸೋಮವಾರ ಮೂರನೇ ಹಂತದ ಮಾತುಕತೆ ನಡೆಯಲಿದ್ದರೂ ಸಕಾರಾತ್ಮಕ ಫಲಿತಾಂಶದ ನಿರೀಕ್ಷೆ ಇಲ್ಲ. ಇಷ್ಟೆಲ್ಲ ಕಾರಣಗಳಿಂದ ಜೆಲೆನ್‌ಸ್ಕಿ ಅವರು ಹತಾಶ ಸ್ಥಿತಿ ತಲುಪಿದ್ದಾರೆ. ಹಾಗಾಗಿ ನೆರವಿಗಾಗಿ ಹಲವು ರಾಷ್ಟ್ರಗಳ ಮೊರೆ ಹೋಗುತ್ತಿದ್ದಾರೆ. ಪುಟಿನ್‌ ಮೇಲೆ ಪ್ರಭಾವ ಬೀರಲು ಮೋದಿಗೆ ಮನವಿ ರಷ್ಯಾ ಯುದ್ಧ ನಿಲ್ಲಿಸುವಂತೆ ಮಾಡಲು ಎಂದು ಸರ್ವ ರೀತಿಯಲ್ಲಿ ಪ್ರಯತ್ನ ಮಾಡುತ್ತಿರುವ ಉಕ್ರೇನ್‌, ''ಭಾರತದ ಪ್ರಧಾಬಿ ನರೇಂದ್ರ ಮೋದಿ ಅವರು ತಮ್ಮ ಪ್ರಭಾವ ಬಳಸಿ ಯುದ್ಧ ನಿಲ್ಲಿಸುವಂತೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರಿಗೆ ವರಿಗೆ ಸೂಚಿಸಬೇಕು,'' ಎಂದು ಮನವಿ ಮಾಡಿದೆ. ''ಭಾರತ ಹಾಗೂ ರಷ್ಯಾ ನಡುವೆ ಉತ್ತಮ ಬಾಂಧವ್ಯವಿದೆ. ಹಾಗಾಗಿ ಮೋದಿ ಅವರು ಪುಟಿನ್‌ ಅವರಿಗೆ ಕರೆ ಮಾಡಿ, ಯುದ್ಧವು ಎಲ್ಲರ ಹಿತಾಸಕ್ತಿಯ ವಿರುದ್ಧವಾಗಿದೆ. ಹಾಗಾಗಿ ಇದನ್ನು ನಿಲ್ಲಿಸಿ ಎಂಬುದಾಗಿ ಮನವಿ ಮಾಡುವಂತೆ ಕೋರುತ್ತೇವೆ,'' ಎಂದು ಹಣಕಾಸು ಸಚಿವ ಡಿಮಿತ್ರೊ ಕುಲೇಬಾ ಮನವಿ ಮಾಡಿದ್ದಾರೆ. ಹಾಗೆಯೇ, ಭಾರತದ ಜತೆಗೆ ಉತ್ತಮ ಸಂಬಂಧ ಹೊಂದಿರುವ ರಾಷ್ಟ್ರಗಳು ಸಹ ಪುಟಿನ್‌ ಅವರಿಗೆ ಯುದ್ಧ ನಿಲ್ಲಿಸುವಂತೆ ಮನವರಿಕೆ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ. ಬಾಂಬ್‌ ದಾಳಿಗೆ ರಷ್ಯಾ ಸಿದ್ಧತೆ ಜೆಲೆನ್‌ಸ್ಕಿ ಗಂಭೀರ ಆರೋಪ ದೇಶದ ಹಲವು ನಗರಗಳ ಮೇಲೆ ಪ್ರಾಬಲ್ಯ ಸಾಧಿಸಿರುವ ರಷ್ಯಾ ಈಗ ಒಡೆಸ್ಸಾ ನಗರದ ಮೇಲೆ ಬಾಂಬ್‌ ದಾಳಿಗೆ ಸಿದ್ಧವಾಗಿದೆ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಜೆಲೆನ್‌ಸ್ಕಿ ಕಳವಳ ವ್ಯಕ್ತಪಡಿಸಿದ್ದಾರೆ. ವಿಡಿಯೊ ಕಾನ್ಫರೆನ್ಸ್‌ ಉದ್ದೇಶಿಸಿ ಮಾತನಾಡಿದ ಅವರು, ''ಒಡೆಸ್ಸಾ ಸಹ ಬಂದರು ನಗರವಾಗಿದ್ದು, ಇದರ ಮೇಲೆ ಬಾಂಬ್‌ ದಾಳಿಗೆ ಸಿದ್ಧತೆ ನಡೆಸಿದೆ. ಚೆರ್ನೊಬಿಲ್‌ ಹಾಗೂ ಜಪೋರಿಝಿಯಾ ಪರಮಾಣು ಘಟಕದ ಮೇಲೆ ದಾಳಿ ಮಾಡಿರುವ ಪುಟಿನ್‌ ಪಡೆಗಳು, ಮೈಕೋಲೇಯಿವ್‌ ವ್ಯಾಪ್ತಿಯಲ್ಲಿರುವ ಯುಜ್ನೌಕ್ರೇನ್‌ಸ್ಕ್‌ ಪರಮಾಣು ಘಟಕದ ಮೆಲೂ ದಾಳಿಗೆ ಯೋಜನೆ ರೂಪಿಸಿದೆ,'' ಎಂದು ಆರೋಪಿಸಿದ್ದಾರೆ. ಪುಟಿನ್‌ ದಾಳಿಗೆ ಪೋಪ್‌ ಖಂಡನೆ
  • 'ರಕ್ತ ಹಾಗೂ ಕಣ್ಣೀರಿನ ನದಿ' ಹರಿಸುತ್ತಿರುವ ರಷ್ಯಾ ಕೂಡಲೇ ಕದನ ವಿರಾಮ ಘೋಷಿಸಲಿ ಎಂದ ಪೋಪ್‌ ಫ್ರಾನ್ಸಿಸ್‌
  • ಪುಟಿನ್‌ ಜತೆ ಟರ್ಕಿ ಅಧ್ಯಕ್ಷ ರೆಸೆಪ್‌ ತಯ್ಯಿಪ್‌ ಎಡೋರ್ಗನ್‌ ಚರ್ಚೆ, ತುರ್ತು ಶಾಂತಿ ಸ್ಥಾಪನೆಗೆ ಮನವಿ
  • ಆಕ್ರಮಣ ಖಂಡಿಸಿ ಪುಟಿನ್‌ ವಿರುದ್ಧ ರಷ್ಯಾದ 50 ನಗರಗಳಲ್ಲಿ ಭಾರಿ ಪ್ರತಿಭಟನೆ, 1,100 ಜನರ ಬಂಧನ
  • ದ್ವಿತೀಯ ಮಹಾಯುದ್ಧ ಬಳಿಕ ಇದೇ ಮೊದಲ ಬಾರಿಗೆ ಯುರೋಪ್‌ನಲ್ಲಿ ನಿರಾಶ್ರಿತರ ಬೃಹತ್‌ ಸಮಸ್ಯೆ ಎಂದು ವಿಶ್ವಸಂಸ್ಥೆ ಹೇಳಿಕೆ


from India & World News in Kannada | VK Polls https://ift.tt/4ErdXPN

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...