
ಮಾಸ್ಕೋ: ನಾಗರಿಕರ ಸ್ಥಳಾಂತರಕ್ಕೆ ಅವಕಾಶ ನೀಡುವುದಕ್ಕಾಗಿ ಘೋಷಣೆಗೆ ಒಪ್ಪಿಕೊಂಡಿದ್ದರೂ ಉಕ್ರೇನ್‌ನ ಮರಿಯುಪೋಲ್ ನಗರದಲ್ಲಿ ರಷ್ಯಾ ಪಡೆಗಳ ದಿಗ್ಬಂಧನವು ಪಶ್ಚಿಮದ ದೇಶಗಳು ವಿಧಿಸಿರುವ ನಿರ್ಬಂಧಗಳಿಗೆ ಸರಿಸಮವಾಗಿದೆ ಎಂದು ಅಧ್ಯಕ್ಷ ಹೇಳಿದ್ದಾರೆ. ಜತೆಗೆ ಅವರು ಮಹಾ ವಿನಾಶದ ಎಚ್ಚರಿಕೆ ನೀಡಿದ್ದಾರೆ. ನಾಗರಿಕರ ಸ್ಥಳಾಂತರ ಮಾಡಲು ನಡೆಸಿದ ಮೊದಲ ಕದನ ವಿರಾಮ ಪ್ರಯತ್ನಗಳು ಶೆಲ್ ದಾಳಿಗಳ ಮುಂದುವರಿಕೆ ಹಿನ್ನೆಲೆಯಲ್ಲಿ ಮುರಿದುಬಿದ್ದಿವೆ. ರಷ್ಯಾ ಮತ್ತು ಉಕ್ರೇನ್ ಅಧಿಕಾರಿಗಳು ಪರಸ್ಪರ ದೂಷಾರೋಪಣೆಯಲ್ಲಿ ತೊಡಗಿದ್ದಾರೆ. ಅತ್ತ ರಷ್ಯಾ ಮರಿಯುಪೋಲ್‌ನಲ್ಲಿನ ತನ್ನ ಹಿಡಿತವನ್ನು ಮತ್ತಷ್ಟು ಬಿಗಿ ಮಾಡಿದೆ. ಉಕ್ರೇನ್‌ನಲ್ಲಿ ವಿಮಾನ ಹಾರಾಟರಹಿತ ವಲಯ ಸ್ಥಾಪಿಸಲು ವಿದೇಶಿ ಶಕ್ತಿಗಳು ಪ್ರಯತ್ನಿಸಿದರೆ ಯುರೋಪ್ ಮಾತ್ರವಲ್ಲ ಇಡೀ ಜಗತ್ತು ಅದರ ಭಾರಿ ಹಾಗೂ ವಿನಾಶಕಾರಿ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ವ್ಲಾಡಿಮಿರ್ ಪುಟಿನ್ ಎಚ್ಚರಿಸಿದ್ದಾರೆ. "ಈ ನಿಟ್ಟಿನಲ್ಲಿ ಯಾವುದೇ ನಡೆಯನ್ನು ಆ ದೇಶದ ಸಶಸ್ತ್ರ ಸಂಘರ್ಷ ಎಂದೇ ನಾವು ಪರಿಗಣಿಸುತ್ತೇವೆ" ಎಂದು ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಏರೋಫ್ಲಾಟ್ ಉದ್ಯೋಗಿಗಳ ಜತೆ ಸಭೆ ವೇಳೆ ಪುಟಿನ್ ಹೇಳಿದ್ದಾರೆ. ಉಕ್ರೇನ್ ಆಡಳಿತದ ಕ್ರಮಗಳು ದೇಶ ತನ್ನ ಸಾರ್ವಭೌಮತೆಯನ್ನು ಕಳೆದುಕೊಳ್ಳಲು ಕಾರಣವಾಗಬಹುದು ಎಂದು ಕೂಡ ಪುಟಿನ್ ಎಚ್ಚರಿಕೆ ನೀಡಿದ್ದಾರೆ. "ಈಗಿನ ಉಕ್ರೇನ್ ಅಧಿಕಾರಿಗಳು ತಾವು ಮಾಡುತ್ತಿರುವುದನ್ನು ಮುಂದುವರಿಸಿದರೆ, ಉಕ್ರೇನ್‌ನ ರಾಷ್ಟ್ರೀಯ ಮಾನ್ಯತೆಯ ಭವಿಷ್ಯವನ್ನು ಪ್ರಶ್ನೆಗೆ ಇರಿಸಲಿದೆ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು. ಒಂದು ವೇಳೆ ಇದು ನಡೆದರೆ ಅದಕ್ಕೆ ಅವರೇ ಸಂಪೂರ್ಣವಾಗಿ ಹೊಣೆಗಾರರು" ಎಂದು ಹೇಳಿದ್ದಾರೆ. ಉಕ್ರೇನ್ ಅಧ್ಯಕ್ಷ ಅವರು ನೋ-ಫ್ಲೈ ವಲಯ (ಸೇನಾ ವಿಮಾನ ಹಾರಾಟ ನಿರ್ಬಂಧ) ಘೋಷಣೆ ಮಾಡುವಂತೆ ಪಶ್ಚಿಮ ದೇಶಗಳಿಗೆ ಮನವಿ ಮಾಡಿದ ಬೆನ್ನಲ್ಲೇ ಪುಟಿನ್ ಈ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಜೆಲೆನ್ಸ್ಕಿ ಅವರು ಅಮೆರಿಕ ಅಧ್ಯಕ್ಷ ಜೋ ಬೈಡನ್ ಜತೆ ಭಾನುವಾರ ಚರ್ಚಿಸಿದ್ದು, ಆರ್ಥಿಕ ನೆರವು ಹಾಗೂ ರಷ್ಯಾ ವಿರುದ್ಧದ ನಿರ್ಬಂಧಗಳ ಕುರಿತು ಮಾತನಾಡಿದ್ದಾರೆ. ಉಕ್ರೇನ್ ಮೇಲಿನ ರಷ್ಯಾ ಆಕ್ರಮಣ ವಿಫಲವಾಗುವಂತೆ ನೋಡಿಕೊಳ್ಳಲು ಅಂತಾರಾಷ್ಟ್ರೀಯ ಕಾರ್ಯ ಯೋಜನೆ ಜಾರಿಗೆ ತರಲು ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಮುಂದಾಗಿದ್ದಾರೆ. ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಪಾವತಿ ಸಂಸ್ಥೆಗಳಾದ ವಿಸಾ ಮತ್ತು ಮಾಸ್ಟರ್‌ಕಾರ್ಡ್‌ಗಳು ರಷ್ಯಾದಲ್ಲಿನ ಕಾರ್ಯನಿರ್ವಹಣೆ ಸ್ಥಗಿತಗೊಳಿಸುತ್ತಿರುವುದಾಗಿ ಪ್ರಕಟಿಸಿವೆ. 'ಸುಳ್ಳು ಸುದ್ದಿ'ಗಳನ್ನು ಹರಡುವ ಮಾಧ್ಯಮಗಳನ್ನು ನಿರ್ಬಂಧಿಸುವ ಹಾಗೂ ಅಂತಹವರಿಗೆ 15 ವರ್ಷ ಜೈಲು ಶಿಕ್ಷೆ ವಿಧಿಸುವ ರಷ್ಯಾದ ಹೊಸ ಕಾನೂನಿನ ಬೆದರಿಕೆಯನ್ನು ಅಮೆರಿಕ ಖಂಡಿಸಿದೆ. ರಷ್ಯಾದಲ್ಲಿ ಮಾರ್ಷಿಯಲ್ ಲಾ (ಸೇನಾಡಳಿತ ಕಾನೂನು) ಜಾರಿಗೆ ತರಲು ಕ್ರೆಮ್ಲಿನ್ ಉದ್ದೇಶಿಸಿದೆ ಎಂಬ ವದಂತಿಗಳನ್ನು ಪುಟಿನ್ ನಿರಾಕರಿಸಿದ್ದಾರೆ. "ಬಾಹ್ಯ ಆಕ್ರಮಣದ ಸಂದರ್ಭಗಳಲ್ಲಿ ಮಾತ್ರವೇ ಮಾರ್ಷಿಯಲ್ ಕಾನೂನನ್ನು ಜಾರಿಗೆ ತರಬಹುದು. ಈ ಗಳಿಗೆಯಲ್ಲಿ ನಮಗೆ ಅದರ ಅನುಭವ ಆಗಿಲ್ಲ ಮತ್ತು ಅದು ಆಗುವುದಿಲ್ಲ ಎಂದು ಭರವಸೆ ಹೊಂದಿದ್ದೇನೆ" ಎಂದಿದ್ದಾರೆ.
from India & World News in Kannada | VK Polls https://ift.tt/RMXDmEz