
ಬೆಂಗಳೂರು: ರಸ್ತೆ ಗುಂಡಿಗಳನ್ನು ಮುಚ್ಚುವ ವಿಚಾರದಲ್ಲಿ ಪಾಲಿಕೆ ಕಣ್ಣೊರೆಸುವ ತಂತ್ರ ನಡೆಯುವುದಿಲ್ಲ, ಉದ್ದೇಶಪೂರ್ವಕವಾಗಿಯೇ ಸಮಸ್ಯೆ ಸೃಷ್ಟಿಸುವ ಎಂಜಿನಿಯರ್‌ಗಳನ್ನು ಎತ್ತಂಗಡಿ ಮಾಡಿ ಸಮರ್ಥರನ್ನು ನೇಮಿಸುವಂತೆ ಸರಕಾರಕ್ಕೆ ಸೂಚಿಸಬೇಕಾಗುತ್ತದೆ ಎಂದು ಹೈಕೋರ್ಟ್ ಎಚ್ಚರಿಕೆ ನೀಡಿದೆ. ‘ರಸ್ತೆ ಗುಂಡಿಗಳಿಂದ ಜನ ಸಾಯುತ್ತಿದ್ದರೂ ಇನ್ನೂ ಸಮಸ್ಯೆ ಬಗೆಹರಿಸುತ್ತಿಲ್ಲ. ಪಾಲಿಕೆ ಎಂಜಿನಿಯರ್‌ಗಳೇ ಈ ಸಮಸ್ಯೆ ಸೃಷ್ಟಿಸುತ್ತಿದ್ದಾರೆ. ಅಂಥ ಅಧಿಕಾರಿಗಳನ್ನು ತೆರವು ಮಾಡಿ, ಸಮರ್ಥ ಎಂಜಿನಿಯರ್‌ಗಳನ್ನು ನೇಮಕ ಮಾಡಲು ಸರಕಾರಕ್ಕೆ ಆದೇಶ ನೀಡುತ್ತೇವೆ’ ಎಂದು ಹೈಕೋರ್ಟ್ ಹೇಳಿದೆ. ಬೆಂಗಳೂರಿನ ರಸ್ತೆಗಳ ನಿರ್ವಹಣೆ ಸಂಬಂಧ 2015ರಲ್ಲಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಹಾಗೂ ನ್ಯಾಯಮೂರ್ತಿ ಎಸ್.ಆರ್. ಕೃಷ್ಣ ಕುಮಾರ್ ಅವರಿದ್ದ ಪೀಠ ಶನಿವಾರ ವಿಚಾರಣೆ ನಡೆಸಿತು. ಪಾಲಿಕೆ ಆಯುಕ್ತರಿಗೆ ಕ್ಲಾಸ್:ವಿಚಾರಣೆ ವೇಳೆ ಖುದ್ದು ಹಾಜರಿದ್ದ ಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರನ್ನು ನ್ಯಾಯಪೀಠ ಪ್ರಶ್ನಿಸಿತು. ‘ರಸ್ತೆ ಗುಂಡಿಗಳಿಂದ ಜೀವ ಹಾನಿಯಾಗುತ್ತಿದ್ದರೂ, ಸಮಸ್ಯೆ ಮಾತ್ರ ಇನ್ನೂ ಬಗೆಹರಿದಿಲ್ಲ, ಎಂಜಿನಿಯರ್‌ಗಳು ಏನು ಮಾಡುತ್ತಿದ್ದಾರೆ. ರಸ್ತೆ ದುರಸ್ತಿ ಹಾಗೂ ಹೊಸ ರಸ್ತೆ ನಿರ್ಮಾಣಕ್ಕೆ ಸರಕಾರ ಪಾಲಿಕೆಗೆ ಸಾವಿರಾರು ಕೋಟಿ ರೂ. ಬಿಡುಗಡೆ ಮಾಡುತ್ತಿದೆ. ಆದರೂ ರಸ್ತೆಗಳು ಸರಿಯಾಗುತ್ತಿಲ್ಲಎಂದರೆ ಏನರ್ಥ?’ ಎಂದು ಕೇಳಿತು. ‘ಎಂಜಿನಿಯರ್‌ಗಳ ವಿರುದ್ಧ ನೀವು ಕ್ರಮ ಕೈಗೊಳ್ಳಬೇಕು. ರಸ್ತೆ ಗುಂಡಿ ಬಿಕ್ಕಟ್ಟು ಮುಂದುವರಿಯುವುದು ಇಷ್ಟವಿಲ್ಲ. ನಿಮ್ಮ ಸಮಸ್ಯೆಗಳನ್ನು ಹೇಳಬೇಡಿ, ರಸ್ತೆ ಗುಂಡಿ ಸಮಸ್ಯೆಗೆ ಪರಿಹಾರ ಮಾಡಬೇಕಷ್ಟೇ’ ಎಂದು ನ್ಯಾಯಪೀಠ ಖಡಕ್ ಆಗಿ ಹೇಳಿತು. ನ್ಯಾಯಾಲಯದ ನಿರ್ದೇಶನದಂತೆ, ನಗರದಲ್ಲಿರುವ ರಸ್ತೆಗುಂಡಿಗಳನ್ನು ವೈಜ್ಞಾನಿಕ ರೀತಿಯಲ್ಲಿ, ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಮುಚ್ಚುವ ಕಾಮಗಾರಿ ಕುರಿತು ಬಿಬಿಎಂಪಿ ಕ್ರಿಯಾ ಯೋಜನೆ ಸಲ್ಲಿಸಲಾಗಿತ್ತು. ಅದನ್ನು ಪರಿಶೀಲಿಸಿದ ನ್ಯಾಯಪೀಠ, ‘ಮೊದಲಿದ್ದಂತೆ ಹಾಟ್‌ಮಿಕ್ಸ್ ತಂತ್ರಜ್ಞಾನದ ಮೂಲಕ ರಸ್ತೆ ಗುಂಡಿ ಮುಚ್ಚುವ ಕೆಲಸ ಮಾಡುತ್ತಿಲ್ಲವೇಕೆ? ಎಲ್ಲ ರಸ್ತೆಗಳಲ್ಲೂ ಸ್ವಯಂಚಾಲಿತ ಮುಚ್ಚುವ ಯಂತ್ರ (ಪೈಥಾನ್) ಏಕೆ ಬಳಸುತ್ತಿಲ್ಲ ಎನ್ನುವುದು ನಮಗೆ ಅರ್ಥವಾಗುತ್ತಿಲ್ಲ‘ ಎಂದು ಬೇಸರಿಸಿತು. ‘ರಸ್ತೆ ಗುಂಡಿ ಮುಚ್ಚಲು ಆಧುನಿಕ ತಂತ್ರಜ್ಞಾನ ಬಳಸದಿರುವುದರಿಂದಲೇ ಸಮಸ್ಯೆಯಾಗಿದ್ದು, ಜನರು ರಸ್ತೆಯಲ್ಲಿ ಸಾಯುತ್ತಿದ್ದಾರೆ. ನಗರದ 182 ಕಿ.ಮೀ.ಗಳಷ್ಟು ಪ್ರಮುಖ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚಲು ಮಾತ್ರ ಪೈಥಾನ್ ಬಳಸಲಾಗುತ್ತಿದ್ದು, ಉಳಿದ ಕಡೆ ಹಾಟ್‌ಮಿಕ್ಸ್ ತಂತ್ರಜ್ಞಾನ ಬಳಸುವುದು ಸರಿಯಲ್ಲ. ಎಲ್ಲ ರಸ್ತೆಗಳಲ್ಲೂ ಪೈಥಾನ್ ಬಳಕೆ ಸಾಧ್ಯವಿಲ್ಲವೇ?’ ಎಂದು ನ್ಯಾಯಪೀಠ ಪ್ರಶ್ನಿಸಿತು. ಪಾಲಿಕೆ ಪರ ವಕೀಲರು, ‘ದೇಶದಲ್ಲಿ ಎರಡು ಪೈಥಾನ್ ಯಂತ್ರಗಳಿದ್ದು, ಒಂದು ಬೆಂಗಳೂರಿನಲ್ಲಿದೆ. ಪ್ರಮುಖ ರಸ್ತೆಗಳು ಹಾಗೂ ಸಂಚಾರ ದಟ್ಟಣೆ ಇರುವ ರಸ್ತೆಗಳಲ್ಲಿನ ಗುಂಡಿ ಮುಚ್ಚಲು ಅದನ್ನು ಬಳಸಲಾಗುತ್ತಿದೆ’ ಎಂದರು. ಆಗ ನ್ಯಾಯಪೀಠ ‘ನೀವೇ ಏಕೆ ಪೈಥಾನ್ ಯಂತ್ರ ಖರೀದಿಸಬಾರದು’ ಎಂದು ಪ್ರಶ್ನಿಸಿತು. ಬಿಬಿಎಂಪಿ ವಕೀಲರು, ‘ಸುಧಾರಿತ ತಂತ್ರಜ್ಞಾನದ ಮೂಲಕ ರಸ್ತೆ ಗುಂಡಿ ಮುಚ್ಚುವ ಕೆಲಸದ ಸಂಬಂಧ ಮಾ.3ರಂದು ಟೆಂಡರ್ ಕರೆಯಲಾಗಿತ್ತು. ಯಾರೊಬ್ಬರೂ ಬಿಡ್ ಸಲ್ಲಿಸಿಲ್ಲ. ಮತ್ತೊಮ್ಮೆ ಆನ್‌ಲೈನ್ ಮೂಲಕ ಟೆಂಡರ್ ಕರೆಯಲಾಗುವುದು’ ಎಂದು ತಿಳಿಸಿದರು. ಅದಕ್ಕೆ ನ್ಯಾಯಪೀಠ, ‘ಟೆಂಡರ್ ಕರೆದಿದ್ದರೂ ಯಾರೂ ಭಾಗವಹಿಸಿಲ್ಲ ಎನ್ನುವ ಕಣ್ಣೊರೆಸುವ ತಂತ್ರಗಳು ಇಲ್ಲಿ ನಡೆಯುವುದಿಲ್ಲ. ರಸ್ತೆ ಗುಂಡಿ ಸಮಸ್ಯೆಗೆ ಪರಿಹಾರವಷ್ಟೇ ಬೇಕು’ ಎಂದು ಹೇಳಿತು. ಅಂತಿಮವಾಗಿ, ನಗರದಲ್ಲಿ ಗುಂಡಿ ಬಿದ್ದಿರುವ ರಸ್ತೆಗಳನ್ನು ಸುಧಾರಿತ ತಂತ್ರಜ್ಞಾನ ಬಳಸಿ ಮುಚ್ಚುವ ಸಂಬಂಧ ಹೊಸ ಕ್ರಿಯಾ ಯೋಜನೆ ಸಲ್ಲಿಸಲು ಪಾಲಿಕೆಗೆ ಒಂದು ವಾರ ಕಾಲಾವಕಾಶ ನೀಡಿ, ವಿಚಾರಣೆಯನ್ನು ಮಾ.15ಕ್ಕೆ ಮುಂದೂಡಿತು.
from India & World News in Kannada | VK Polls https://ift.tt/Inl9Q5a