
ಹೊಸದಿಲ್ಲಿ: ಉಕ್ರೇನ್ ವಿರುದ್ಧದ ರಷ್ಯಾ ಆಕ್ರಮಣ ಅಂತ್ಯ ಕಾಣದ ಹಾದಿಯಲ್ಲಿ ಸಾಗಿದೆ. ಕೀವ್, ಕಾರ್ಕಿವ್, ಖೇರ್ಸನ್‌ನಂತಹ ಪ್ರಮುಖ ನಗರಗಳು ಬಲಾಢ್ಯ ರಷ್ಯಾ ದಾಳಿಗೆ ಸಿಲುಕಿ ನಲುಗಿರುವ ನಡುವೆಯೇ ಮತ್ತೊಂದು ಸುಂದರ ನಗರ ಸುಮಿ ಕೂಡ ಬಾಂಬ್ ಸದ್ದಿನ ನಡುವೆ ಕನಲಿ ಹೋಗಿದೆ. ಮನೆಯಿಂದ ಹೊರ ಬರಲಾಗದೇ ಮುದುಡಿ ಕುಳಿತಿರುವ ಇಲ್ಲಿನ ಜನರಿಗೆ ಆಹಾರ, ನೀರಿನ ಕೊರತೆ ಕಾಡತೊಡಗಿದೆ. ಕೇರಳ ಮೂಲದ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರು, ಕರಗುವ ಹಿಮ ಗಡ್ಡೆಗಳನ್ನೇ ಗಂಟಲಿಗೆ ಇಳಿಸಿಕೊಂಡು ದಾಹ ತಣಿಸಿಕೊಳ್ಳುತ್ತಿರುವ ಭೀಕರ ಸ್ಥಿತಿಯ ಬಗ್ಗೆ ಹೇಳಿಕೊಂಡಿದ್ದಾರೆ. ಹತ್ತು ದಿನಗಳ ಹಿಂದೆ ಶುರುವಾದ ರಷ್ಯಾ ಆಕ್ರಮಣ, ವಾರದೊಳಗೆ ಕೊನೆಗೊಳ್ಳಬಹುದು ಎಂದು ನಿರೀಕ್ಷಿಸಲಾಗಿತ್ತು. ಉಕ್ರೇನ್‌ನ ಪುಟ್ಟ ಸೇನೆ ಅದೇನು ಮಾಡೀತು ಎನ್ನುವ ಎಣಿಕೆ ಎಲ್ಲರಲ್ಲೂಇತ್ತು. ಖುದ್ದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕೂಡ ಆ ಬಗ್ಗೆ ಉದಾಸೀನವಾಗಿಯೇ ಇದ್ದರು. ಸಂಘರ್ಷ ಶುರುವಾಗಿ ವಾರದ ಬಳಿಕ ಯಾರೂ ನಿರೀಕ್ಷಿಸದ ಪ್ರತಿರೋಧ ಉಕ್ರೇನ್ ಪಡೆಗಳಿಂದ ಸ್ಫೋಟಗೊಂಡಿದೆ. ಇದರಿಂದ ಪುಟಿನ್ ಪಡೆಗಳು ಕಂಗಾಲಾಗಿವೆ. ಹತಾಶೆ, ಆಕ್ರೋಶದಿಂದ ಕುದಿಯುತ್ತಿರುವ ಎದುರಾಳಿ ಪಡೆಗಳು ಉಕ್ರೇನಿನ ಜನವಸತಿ ತಾಣಗಳನ್ನೂ ಲೆಕ್ಕಿಸದೇ ದಾಳಿ ನಡೆಸಿವೆ. ಇದರಿಂದ ಮನೆ ತೊರೆದು ಹೊರ ಬರಲಾಗದ ಜನ ಉಸಿರುಗಟ್ಟಿ ಕುಳಿತಿದ್ದಾರೆ. ಬಹುಪಾಲು ಜನರಿಗೆ ಆಹಾರ, ನೀರಿಕ ಕೊರತೆ ಕಾಡತೊಡಗಿದೆ. ‘ಕೆಲವು ದಿನಗಳಿಗೆ ಆಗುವಷ್ಟು ನೀರನ್ನು ಸಂಗ್ರಹಿಸಿ ಇಟ್ಟುಕೊಂಡಿದ್ದೆವು. ವಾರ ಕಳೆದದ್ದರಿಂದ ಆ ನೀರೂ ಖಾಲಿಯಾಗಿದೆ. ಮುಂದೆ ದಾಹ ತಣಿಸಿಕೊಳ್ಳಲು ಏನು ಮಾಡುವುದೊ ತಿಳಿಯದಾಗಿದೆ. ಮನೆ ಸುತ್ತ ಬಿದ್ದಿದ್ದ ಮಂಜು ಗಡ್ಡೆಗಳನ್ನು ಸಂಗ್ರಹಿಸಿ ತಂದು, ಬಕೆಟ್‌ನಲ್ಲಿ ತುಂಬಿದ್ದೇವೆ. ಜೀವ ಉಳಿಸಿಕೊಳ್ಳಲು ಅದೇ ನೀರು ಗತಿ’ ಎಂದು ಕೇರಳದ ಮಾಳವಿಕಾ ಮನೋಜ್ ಸಂಕಷ್ಟ ಹರುಹಿದ್ದಾರೆ. ಮಾಳವಿಕಾ, ಉಕ್ರೇನ್‌ನ ಸುಮಿ ಸ್ಟೇಟ್ ಯುನಿವರ್ಸಿಟಿಯಲ್ಲಿ ಮೂರನೇ ವರ್ಷದ ಮೆಡಿಕಲ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ. ಉಕ್ರೇನ್‌ನ ಯಾವ ನಗರವೂ ಈಗ ಸುರಕ್ಷಿತವಾಗಿ ಉಳಿದಿಲ್ಲ. ಮೂಲೆ ಮೂಲೆಯಲ್ಲೂ ರಷ್ಯನ್ ಸೈನಿಕರ ಗುಂಡಿನ ಮೊರೆತ, ಕ್ಷಿಪಣಿಗಳ ಸದ್ದು ತುಂಬಿದೆ. ‘ಸೈರನ್ ಸದ್ದು, ಅದರ ಬೆನ್ನ ಹಿಂದೆಯೇ ವಾಯು ದಾಳಿ ಅಬ್ಬರ. ಸೈರನ್ ಕೇಳಿದ ತಕ್ಷಣ ಓಡಿ ಹೋಗಿ ಬಂಕರ್‌ಗಳಲ್ಲಿ ಅಡಗಿ ಕುಳಿತು ಜೀವ ಉಳಿಸಿಕೊಳ್ಳಬೇಕು. ಪಾಸ್‌ಪೋರ್ಟ್ ಮತ್ತು ಗುರುತಿನ ಚೀಟಿಗಳನ್ನೂ ಜೊತೆಯಲ್ಲಿ ಇಟ್ಟುಕೊಂಡಿರಬೇಕು. ಇಲ್ಲದಿದ್ದರೆ ಅದೂ ಒಂದು ರಗಳೆಯಾಗುತ್ತದೆ. ದಾಳಿಯಿಂದ ವಿದ್ಯುತ್ತೂ ಕೈಕೊಟ್ಟಿದೆ. ಪವರ್ ಇಲ್ಲದ್ದರಿಂದ ಸಂಪರ್ಕ ಕಷ್ಟ. ಮೊಬೈಲ್ ಚಾರ್ಜಿಂಗ್ ಮಾಡಲು ಸಾಧ್ಯವಾಗುತ್ತಿಲ್ಲ. ಸದ್ಯ ಇರುವ ಬ್ಯಾಟರಿ ಖಾಲಿಯಾದರೆ ಜಗತ್ತಿನ ಸಂಪರ್ಕವೇ ನಮಗೆ ಕಡಿದು ಹೋಗುತ್ತದೆ’ ಎಂದು ನೋವು ತೋಡಿಕೊಂಡಿದ್ದಾರೆ ಮಾಳವಿಕಾ. ಭರವಸೆಯೇ ಬದುಕು: ರಷ್ಯಾ ಗಡಿ ಸಮೀಪ ಇರುವ ಸುಮಿ ನಗರದಿಂದ ಇದುವರೆಗೆ ಯಾರೊಬ್ಬರನ್ನೂ ರಕ್ಷಿಸಿಲ್ಲ. ಇಲ್ಲಿ ಕಲಿಯುತ್ತಿರುವ ಭಾರತೀಯರೆಲ್ಲರೂ ಎಲ್ಲಿಯೂ ಹೋಗಲಾಗದೇ ಉಳಿದುಕೊಂಡಿದ್ದಾರೆ. ಈ ನಗರದಿಂದ ರಷ್ಯಾ ಗಡಿಗೆ ಹೋದರೆ, ಅಲ್ಲಿಂದ ಮುಂದೆ ಸ್ವದೇಶಕ್ಕೆ ಬರಲು ವಿಮಾನ ಅನುಕೂಲ ಇದೆ. ಆದರೆ 65 ಕಿ.ಮೀ ದೂರ ಇರುವ ರಷ್ಯಾ ಗಡಿ ತಲುವುದೇ ಈಗ ಸವಾಲಾಗಿದೆ. ‘ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಸ್ವಲ್ಪ ತಾಳ್ಮೆ ವಹಿಸಿ ಎಂದು ರಾಯಭಾರ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಅವರ ಭರವಸೆ ನೆಚ್ಚಿ ನಾವಿಲ್ಲ ಧೈರ್ಯವಾಗಿ ಇದ್ದೇವೆ’ ಎಂದು ಭಾರತೀಯ ವಿದ್ಯಾರ್ಥಿಗಳು ಹೇಳುತ್ತಾರೆ. ‘ನಗರ ತೊರೆದು ಹೋಗಲು ಉಕ್ರೇನ್ ಆಡಳಿತದ ಅನುಮತಿ ಪಡೆಯುವುದು ಕಡ್ಡಾಯ. ಭಾರತೀಯ ರಾಯಭಾರ ಅಧಿಕಾರಿಗಳು ಸ್ಥಳೀಯ ಆಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಒಂದೊಮ್ಮೆ ಬಸ್ ವ್ಯವಸ್ಥೆಯಾದರೆ ಸಂಕಷ್ಟದಲ್ಲಿರುವ ಎಲ್ಲರನ್ನೂ ರಕ್ಷಿಸಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ’ ಎಂದು ಅವರು ಮಾಹಿತಿ ನೀಡಿದ್ದಾರೆ. ಶೀಘ್ರವೇ ಬಸ್ ವ್ಯವಸ್ಥೆ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರು ಹಾಗೂ ಭಾರತೀಯ ವಿದ್ಯಾರ್ಥಿಗಳ ರಕ್ಷಣೆಗೆ ರಷ್ಯಾ 130 ಬಸ್‌ಗಳ ವ್ಯವಸ್ಥೆ ಮಾಡಿದೆ. ಶೀಘ್ರವೇ ರಕ್ಷಣಾ ಕಾರ್ಯಾಚರಣೆ ಆರಂಭಗೊಳ್ಳಲಿದೆ ಎಂದು ರಷ್ಯಾ ರಾಷ್ಟ್ರೀಯ ರಕ್ಷಣಾ ನಿಯಂತ್ರಣ ಕೇಂದ್ರದ ಮುಖ್ಯಸ್ಥ ಮಿಖೈಲ್ ಮಿಝಿಂಟ್‌ಸೆವ್ ಭವರಸೆ ನೀಡಿದ್ದಾರೆ. ಉಕ್ರೇನ್‌ನ ಸುಮಿ ನಗರವೊಂದರಲ್ಲಿಯೇ 100ಕ್ಕಿಂತ ಹೆಚ್ಚು ಭಾರತೀಯ ವಿದ್ಯಾರ್ಥಿಗಳಿದ್ದಾರೆ. ರಕ್ಷಣೆಗಾಗಿ ಇವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ. ಆಪರೇಷನ್ ಗಂಗಾ ಕಾರ್ಯಾಚರಣೆಯಲ್ಲಿ 70ಕ್ಕಿಂತ ಹೆಚ್ಚಿನ ವಿಮಾನಗಳು ಬಳಕೆಯಾಗಿದ್ದರೂ ಉಕ್ರೇನಿನಲ್ಲಿ ಇನ್ನೂ 4000 ಭಾರತೀಯರ ತೆರವು ಬಾಕಿ ಉಳಿದಿದೆ. 1500 ಕಿ.ಮೀ ನಡೆದು ದಡ ಸೇರಿದ ವಿದ್ಯಾರ್ಥಿಗಳುಉಕ್ರೇನ್ ನಗರಗಳಲ್ಲಿ ಸಿಕ್ಕಿಬಿದ್ದಿರುವ ಭಾರತೀಯ ಮೂಲದ ವಿದ್ಯಾರ್ಥಿಗಳು ಪಾರಾಗಿ ಬರಲು ಪರದಾಡುತ್ತಿದ್ದಾರೆ. ಕೀವ್, ಕಾರ್ಕಿವ್‌ನಂತಹ ಕೆಲವು ನಗರಗಳಿಂದ ಅರ್ಧದಷ್ಟು ವಿದ್ಯಾರ್ಥಿಗಳು ರೈಲು ಹತ್ತಿ ಬಚಾವಾಗಿದ್ದರೆ, ಉಳಿದ ಅರ್ಧದಷ್ಟು ಮಂದಿ ಇನ್ನೂ ಅಡಗುದಾಣಗಳಲ್ಲಿ ಬಂಧಿಯಾಗಿದ್ದಾರೆ. ವಿಮಾನ ಮತ್ತು ಸಾರಿಗೆ ಸವಲತ್ತು ಸ್ಥಗಿತಗೊಂಡಿರುವುದರಿಂದ ವಿದೇಶಿಗರ ಸಂಕಷ್ಟ ಹೇಳತೀರದಾಗಿದೆ. ಹೇಗೋ ತಪ್ಪಿಸಿಕೊಂಡು ಕಾರ್ಕಿವ್‌ನಿಂದ ಪೋಲೆಂಡ್ ಗಡಿ ತಲುಪಿದ 200 ವಿದ್ಯಾರ್ಥಿಗಳು, ಮಾಧ್ಯಮದ ಜತೆಗೆ ತಮ್ಮ ಸಂಕಷ್ಟದ ಅನುಭವ ಹಂಚಿಕೊಂಡಿದ್ದಾರೆ. ಕಾರ್ಕೀವ್‌ನಿಂದ ಪೋಲೆಂಡ್ ಗಡಿವರೆಗೆ 1500 ಕಿ.ಮೀ ದಾರಿಯನ್ನು ಈ ವಿದ್ಯಾರ್ಥಿಗಳು ಜೀವವನ್ನು ಕೈಯ್ಯಲ್ಲಿ ಹಿಡಿದುಕೊಂಡು ಕಾಲ್ನಡಿಗೆಯಲ್ಲಿಯೇ ಬಂದು ತಲುಪಿದ್ದಾರೆ. ದಾರಿಯಲ್ಲಿ ಎಷ್ಟೋ ಕಡೆ ಛಿದ್ರಛಿದ್ರವಾಗಿ ಬಿದ್ದಿರುವ ಹೆಣಗಳ ರಾಶಿ, ತುಂಡರಿಸಿದ ಅಂಗಾಂಗಗಳು, ರಕ್ತದ ಹೊಳೆಗಳನ್ನು ನೋಡಿದ್ದಾರೆ. ಇಷ್ಟೆಲ್ಲ ಸಾಹಸ ಮಾಡಿ ಸುರಕ್ಷತೆಯ ದಡ ಸೇರಿರುವ ಇವರಿಗೆ ಈಗ ಭವಿಷ್ಯದ ಓದಿನ ಚಿಂತೆ ಎದುರಾಗಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ವೈದ್ಯ ಕೋರ್ಸ್‌ಗಳ ವ್ಯಾಸಂಗ ಮಾಡಿರುವ ಇವರಿಗೆ ವಿದ್ಯಾಭ್ಯಾಸ ಪೂರ್ಣಗೊಳಿಸುವ ಸವಾಲು ಎದುರಾಗಿದೆ. ಒಂದೆಡೆ ಹಣ ಖರ್ಚಾದ ಚಿಂತೆ. ಮತ್ತೊಂದೆಡೆ ಕೋರ್ಸ್ ಪೂರ್ಣಗೊಳ್ಳದ ಕೊರಗು. ನಮ್ಮ ಈ ಕಳವಳವನ್ನು ನೀಗಿಸುವವರು ಯಾರು ಎಂದು ಸಂತ್ರಸ್ತ ವಿದ್ಯಾರ್ಥಿಗಳು ಪ್ರಶ್ನಿಸುತ್ತಿದ್ದಾರೆ. ಏತನ್ಮಧ್ಯೆ, ಸದ್ಯದ ರಕ್ಷಣಾ ಕಾರ್ಯಾಚರಣೆಯ ಸವಾಲನ್ನು ಪೂರ್ಣಗೊಳಿಸುವ ತರಾತುರಿಯಲ್ಲಿರುವ ಕೇಂದ್ರ ಸರಕಾರ, ಮುಂದಿನ ದಿನಗಳಲ್ಲಿ ಈ ವಿದ್ಯಾರ್ಥಿಗಳ ಎಲ್ಲಾಕಷ್ಟಗಳಿಗೂ ಪರಿಹಾರ ರೂಪಿಸುವುದಾಗಿ ಭರವಸೆ ನೀಡಿದೆ.
from India & World News in Kannada | VK Polls https://ift.tt/etFQcAK