IPL 2022: ಆರ್‌ಸಿಬಿ ಮುಂದಿನ ನಾಯಕನ ಬಗ್ಗೆ ಬೆಳಕು ಚೆಲ್ಲಿದ ವೆಟೋರಿ!

ಬೆಂಗಳೂರು: ಮುಂಬರುವ 2022ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್‌) ಟೂರ್ನಿಗೆ ಬಲಿಷ್ಠ ತಂಡ ಕಟ್ಟಿರುವ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತೆ ವಿರಾಟ್‌ ಕೊಹ್ಲಿಗೆ ನಾಯಕತ್ವ ನೀಡುವ ಸಾಧ್ಯತೆ ಇಲ್ಲವೇ ಇಲ್ಲವೆಂದು ಮಾಜಿ ನಾಯಕ ಡೇನಿಯಲ್ ವೆಟೋರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಳೆದ 2021ರ ಐಪಿಎಲ್‌ ಟೂರ್ನಿ ಮುಗಿದ ಬಳಿಕ ವಿರಾಟ್‌ ಕೊಹ್ಲಿ ಆರ್‌ಸಿಬಿ ನಾಯಕತ್ವವನ್ನು ತೊರೆದಿದ್ದರು. ಈ ಹಿನ್ನೆಲೆಯಲ್ಲಿ ಈ ಬಾರಿ ನೂತನ ನಾಯಕನೊಂದಿಗೆ ಬೆಂಗಳೂರು ಫ್ರಾಂಚೈಸಿ ಕಣಕ್ಕೆ ಇಳಿಯಲಿದೆ. ಆರ್‌ಸಿಬಿ ನಾಯಕತ್ವದ ರೇಸ್‌ನಲ್ಲಿ , ಹಾಗೂ ದಿನೇಶ್‌ ಕಾರ್ತಿಕ್‌ ಇದ್ದಾರೆ. ಇವರಲ್ಲಿ ಯಾರಿಗಾದರೂ ಒಬ್ಬರಿಗೆ ನಾಯಕತ್ವಕ್ಕೆ ನೀಡುವ ಸಾಧ್ಯತೆ ಇದೆ. ಈ ಬಗ್ಗೆ ಇಎಸ್‌ಪಿಎನ್‌ ಕ್ರಿಕ್‌ಇನ್ಪೋದೊಂದಿಗೆ ಮಾತನಾಡಿದ ಡೇನಿಯಲ್‌ ವೆಟೋರಿ, "ಇಲ್ಲಿ, ವಿರಾಟ್‌ ಕೊಹ್ಲಿಗೆ ಮತ್ತೆ ನಾಯಕತ್ವ ನೀಡುವ ಪ್ರಮೇಯ ಇಲ್ಲವೇ ಇಲ್ಲ. ಇದು ಎಲ್ಲರಿಗೂ ಸಾಮಾನ್ಯವಾಗಿ ಅರಿವಾಗುವ ಸಂಗತಿ. ಇದು ಕೊಹ್ಲಿಗೆ ವರ್ಕ್‌ಔಟ್‌ ಆಗುವ ಕೆಲಸವಲ್ಲ. ಏಕಾಂಗಿಯಾಗಿ ಫ್ರಾಂಚೈಸಿ ಕ್ರಿಕೆಟ್‌ ಅಥವಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಏನೂ ಮಾಡಲು ಆಗುವುದಿಲ್ಲ. ಒಮ್ಮೆ ನಾಯಕತ್ವ ತೊರೆದು ಮುಂದೆ ಸಾಗಿದರೆ, ಅದು ಆಟಗಾರನ ಪಾಲಿಗೆ ಒಳ್ಳೆಯ ಸಂಗತಿಯಾಗಿರಲಿದೆ," ಎಂದರು. ಫೆಬ್ರವರಿ ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಮೆಗಾ ಹರಾಜಿನಲ್ಲಿ 7 ಕೋಟಿ ರೂ. ಗಳಿಗೆ ಫಾಫ್‌ ಡು ಪ್ಲೆಸಿಸ್‌ ಹಾಗೂ 5.50 ಕೋಟಿ ರೂ. ಗಳಿಗೆ ದಿನೇಶ್‌ ಕಾರ್ತಿಕ್‌ ಅವರನ್ನು ಬೆಂಗಳೂರು ಫ್ರಾಂಚೈಸಿ ಖರೀದಿಸಿತ್ತು. ಈ ಇಬ್ಬರೂ ನಾಯಕತ್ವದ ಪಾತ್ರದಲ್ಲಿ ಅನುಭವಿಗಳಾಗಿದ್ದಾರೆ. ಇವರ ಜತೆ ಗ್ಲೆನ್‌ ಮ್ಯಾಕ್ಸ್‌ವೆಲ್‌ ಕೂಡ ಬಿಗ್‌ಬ್ಯಾಷ್‌ ಲೀಗ್‌(ಬಿಬಿಎಲ್‌) ಟೂರ್ನಿಯಲ್ಲಿ ತಂಡವನ್ನು ಮುನ್ನಡೆಸಿರುವ ಅನುಭವವನ್ನು ಹೊಂದಿದ್ದಾರೆ. "ಆರ್‌ಸಿಬಿ ನಾಯಕತ್ವಕ್ಕೆ ವಿರಾಟ್‌ ಕೊಹ್ಲಿ, ಗ್ಲೆನ್‌ ಮ್ಯಾಕ್ಸ್‌ವೆಲ್‌, ಫಾಫ್‌ ಡು ಪ್ಲೆಸಿಸ್‌ ಹಾಗೂ ದಿನೇಶ್‌ ಕಾರ್ತಿಕ್‌ ಅವರನ್ನು ಫ್ರಾಂಚೈಸಿ ನೋಡಬಹುದು. ನನಗೆ ಅನಿಸಿದ ಹಾಗೆ ಮ್ಯಾಕ್ಸ್‌ವೆಲ್‌ ಜಾಗದಲ್ಲಿ ಫಾಫ್‌ ತಂಡದ ನಾಯಕತ್ವವನ್ನು ವಹಿಸಬಹುದು. ಒಂದು ವೇಳೆ ಅವರು ಆರಂಭಿಕ ಮೂರೂ ಪಂದ್ಯಗಳಲ್ಲಿ ಗೆದ್ದರೆ, ಬಹುಶಃ ಅವರನ್ನೇ ನಾಯಕತ್ವದಲ್ಲಿ ಮುಂದುವರಿಸಬಹುದು," ಎಂದು ನ್ಯೂಜಿಲೆಂಡ್‌ ಮಾಜಿ ನಾಯಕ ಭವಿಷ್ಯ ನುಡಿದಿದ್ದಾರೆ. "ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರ ಮೇಲೆ ಆರ್‌ಸಿಬಿ ಮೂರು ವರ್ಷಗಳ ಯೋಜನೆಯನ್ನು ಹೊಂದಿದೆ. ಕಳೆದ ವರ್ಷದಂತೆಯೇ ಈ ವರ್ಷವೂ ಉತ್ತಮ ಪ್ರದರ್ಶನ ತೋರಿದರೆ ಅವರು ಖಂಡಿತಾ ಮುಂದಿನ ವರ್ಷಗಳ ಕಾಲ ಆರ್‌ಸಿಬಿಯಲ್ಲಿಯೇ ಉಳಿಯಲಿದ್ದಾರೆಂಬ ನಿರೀಕ್ಷೆ ಇದೆ. ಆದರೆ ಈ ಮೂರು ವರ್ಷಗಳಲ್ಲಿ ಅವರು ನಾಯಕತ್ವದ ಪಾತ್ರದಲ್ಲಿ ಇರಲಿದ್ದಾರೆಯೇ ಎಂಬುದು ಪ್ರಮುಖ ಸಂಗತಿಯಾಗಲಿದೆ," ಎಂದು ಡೇನಿಯಲ್‌ ವೆಟೋರಿ ತಿಳಿಸಿದ್ದಾರೆ. 100 ಟೆಸ್ಟ್‌ ಮೈಲುಗಲ್ಲು ಸ್ಥಾಪಿಸಿದ್ದ ಕೊಹ್ಲಿ: ಶ್ರೀಲಂಕಾ ವಿರುದ್ಧ ಮೊಹಾಲಿಯಲ್ಲಿ ವಿರಾಟ್‌ ಕೊಹ್ಲಿ 100 ಟೆಸ್ಟ್‌ ಪಂದ್ಯಗಳ ಮೈಲುಗಲ್ಲು ಸ್ಥಾಪಿಸಿದ್ದರು. ಇದರ ಜೊತೆಗೆ 260 ಓಡಿಐ ಪಂದ್ಯಗಳಾಡಿರುವ ಕೊಹ್ಲಿ, 43 ಶತಕಗಳನ್ನು ಸಿಡಿಸಿದ್ದಾರೆ ಹಾಗೂ 97 ಟಿ20 ಪಂದ್ಯಗಳಲ್ಲಿಯೂ ಅವರು ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಆರ್‌ಸಿಬಿಗೆ ಕೊಹ್ಲಿ ಆಧಾರ ಸ್ಥಂಭ: ಉದ್ಘಾಟನಾ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯಿಂದಲೂ ವಿರಾಟ್‌ ಕೊಹ್ಲಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿಯೇ ಆಡುತ್ತಿದ್ದಾರೆ. ಐಪಿಎಲ್‌ ಇತಿಹಾಸದಲ್ಲಿಯೇ ಏಕೈಕ ಫ್ರಾಂಚೈಸಿ ಆಡುತ್ತಿರುವ ಆಟಗಾರ ಎಂಬ ಹೆಗ್ಗಳಿಕೆ ಕೊಹ್ಲಿಗಿದೆ. ಕಳೆದ ವರ್ಷ ಆರ್‌ಸಿಬಿ ನಾಯಕತ್ವ ತೊರೆದಿದ್ದ ಕೊಹ್ಲಿ, ಈ ಬಾರಿ ಹಿರಿಯ ಬ್ಯಾಟ್ಸ್‌ಮನ್‌ ಆಗಿ ಕಣಕ್ಕೆ ಇಳಿಯಲಿದ್ದಾರೆ. ಅಂದಹಾಗೆ ಹದಿನೈದನೇ ಆವೃತ್ತಿಯ ಐಪಿಎಲ್‌ ಟೂರ್ನಿಯು ಮಾರ್ಚ್‌ 26 ರಿಂದ ಆರಂಭವಾಗಲಿದ್ದು, ಆರ್‌ಸಿಬಿ ತನ್ನ ಮೊದಲನೇ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ತಂಡವನ್ನು ಎದುರಿಸಲಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3GsvRPO

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...